Advertisement

ಕೆಂಜಾರು: ಕೃತಕ ನೆರೆ ತಡೆಗೆ ಚರಂಡಿ ಕಾಮಗಾರಿ

02:59 AM Jun 10, 2019 | Team Udayavani |

ಬಜಪೆ: ಮಂಗಳೂರು ವಿಮಾನ ನಿಲ್ದಾಣದ ಗುಡ್ಡ ಮಳೆ ನೀರು ಕೆಂಜಾರಿನಲ್ಲಿ ನಿರ್ಗಮನ ರಸ್ತೆಯಲ್ಲಿ ಹರಿದು ರಾಜ್ಯ ಹೆದ್ದಾರಿ 67ರಲ್ಲಿ ನಿರ್ಮಾಣವಾಗುತ್ತಿದ್ದ ಕೃತಕ ನೆರೆ ತಡೆಗೆ ಲೋಕೋಪಯೋಗಿ ಇಲಾಖೆಯಿಂದ ಚರಂಡಿ ಕಾಮಗಾರಿ ನಡೆಯುತ್ತಿದೆ.

Advertisement

ಮಳೆಗಾಲದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಗುಡ್ಡದ ಮಳೆ ನೀರು ಹರಿದು ಕೆಂಜಾರಿನ ರಾಜ್ಯ ಹೆದ್ದಾರಿ 67ರಲ್ಲಿ ಕೃತಕ ನೆರೆ ಸೃಷ್ಟಿಯಾಗಿ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್‌ ಗಮನಕ್ಕೆ ಬಂದಿದ್ದು ಇದಕ್ಕೆ ಸ್ಪಂದಿಸಿ, ಚರಂಡಿ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಬಿಡುಗಡೆಗೊಳಿಸಿದ್ದಾರೆ.

ನಿರ್ಗಮನ ರಸ್ತೆಯ ಒಂದೆಡೆ ಚರಂಡಿಯಿದ್ದು ಜಡಿ ಮಳೆ ಬಂದಾಗ ಗುಡ್ಡ ನೀರು ಹರಿಯಲು ಪರ್ಯಾಯ ಚರಂಡಿ ಮಾರ್ಗವಿಲ್ಲದ ಕಾರಣದಿಂದಾಗಿ ಕೆಂಜಾರು ರಾಜ್ಯ ಹೆದ್ದಾರಿಯಲ್ಲಿ ಹರಿದು ಮರವೂರು ರೈಲ್ವೇ ಮೇಲ್ಸೇತುವೆಯ ಕೆಳಗಿನ ರಸ್ತೆಯವರೆಗೆ ಕೃತಕ ನೆರೆ ನಿರ್ಮಾಣವಾಗಿ ಸಂಚಾರ ಸಂಕಷ್ಟವಾಗಿತ್ತು.

ಉದಯವಾಣಿ ಬೆಳಕು ಚೆಲ್ಲಿತ್ತು

ಕೃತಕ ನೆರೆ ಹಾಗೂ ಮಣ್ಣು ಹಾಗೂ ಹೂಳು ತುಂಬಿ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುವ ಬಗ್ಗೆ ಈ ಹಿಂದೆ ಉದಯವಾಣಿ ವರದಿ ಮಾಡಿತ್ತು. ಕಳೆದ ಬಾರಿ ಮಳೆ ಸಂದರ್ಭ ಈ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಉಮಾನಾಥ ಕೋಟ್ಯಾನ್‌, ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ಸಮಸ್ಯೆಯ ಬಗ್ಗೆ ತಿಳಿಸಿ ಪರಿಹಾರಕ್ಕಾಗಿ ಮಳವೂರು ಗ್ರಾ.ಪಂ. ಅಧ್ಯಕ್ಷ ಗಣೇಶ್‌ ಅರ್ಬಿ ವಿನಂತಿಸಿಕೊಂಡಿದ್ದರು.

Advertisement

ಈಗಾಗಲೇ ವಿಮಾನ ನಿಲ್ದಾಣ ನಿರ್ಗಮನ ರಸ್ತೆಯ ದ್ವಾರದ ಬಳಿಯಿಂದ ಹೊಸ ಚರಂಡಿ ಕಾಮಗಾರಿಯನ್ನು ಮಾಡಲಾಗಿದೆ. ನಿರ್ಗಮನ ದ್ವಾರ ಎಡಬದಿಯ ಚರಂಡಿಯಲ್ಲಿ ಹೆಚ್ಚು ಮಳೆಯ ನೀರು ಬಂದಲ್ಲಿ ಅದನ್ನು ಬಲಬದಿಯಲ್ಲಿ ಚರಂಡಿಗೆ ಕೌ ಕ್ಯಾಚ್ ( ರಸ್ತೆ ಮಧ್ಯದಲ್ಲಿ ಚರಂಡಿ ಮಾಡಿ ಮೇಲೆ ಕಬ್ಬಿಣದ ಪೈಪ್‌ ಹಾಕಿ ರಸ್ತೆಯ ಹಾಗೂ ಹೆಚ್ಚದ ನೀರು ಅದರಲ್ಲಿ ಹರಿಯುವಂತೆ ಮಾಡುವುದು)ಕಾಮಗಾರಿ ಮೂಲಕ ಜೋಡಣೆ ಮಾಡಿದೆ. ಈಗಾಗಲೇ ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯ ಎಡಬದಿಯ ಚರಂಡಿ ಪೂರ್ಣಗೊಂಡಿದೆ. ರಾಜ್ಯ ಹೆದ್ದಾರಿ 67ರಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಸಮೀಪದ‌ ಗೂಡಂಗಡಿ ತನಕ ಈ ಕಾಮಗಾರಿ ನಡೆಯಲಿದೆ.

ಈ ಚರಂಡಿ ಕಾಮಗಾರಿ ಮುಂದೆ ಮರವೂರು ತನಕ ಆಗಬೇಕಿದ್ದು ರೈಲ್ವೆ ಮೇಲ್ಸೇತುವೆ ಕೆಳಗೆ ಚರಂಡಿ ಮಾಡುವಂತಿಲ್ಲ. ಮರವೂರು ಜಂಕ್ಷನ್‌ನಲ್ಲಿ ಚರಂಡಿ ಎತ್ತರದಲ್ಲಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ . ಇದು ಕೂಡ ಪರಿಹಾರವಾಗಬೇಕಾಗಿದೆ.

5 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ

ಲೋಕೋಪಯೋಗಿ ಇಲಾಖೆಯ 5 ಲಕ್ಷ ರೂ. ಅನುದಾನದಲ್ಲಿ ಕೆಂಜಾರಿನ ಮಂಗಳೂರು ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯಿಂದ ರಾಜ್ಯ ಹೆದ್ದಾರಿ 67 ರವರೆಗೆ ಚರಂಡಿ ಕಾಮಗಾರಿಗೆ ಮಾಡಲಾಗುತ್ತಿದೆ. ಮಳೆಗಾಲ ಆರಂಭವಾಗುವ ಮೊದಲೇ ಕೃತಕ ನೆರೆ ಸಮಸ್ಯೆಗಳು ಪರಿಹರಿಸಲಾಗುವುದು.
– ಉಮಾನಾಥ ಕೋಟ್ಯಾನ್‌, ಶಾಸಕ
ಕೃತಕ ನೆರೆ ಪರಿಹಾರ

ವಿಮಾನ ನಿಲ್ದಾಣದ ರಸ್ತೆಯಲ್ಲಿ ಕೌ ಕ್ಯಾಚ್ ಹಾಕುವ ಮೂಲಕ ರಸ್ತೆಯ ಹಾಗೂ ಚರಂಡಿಯ ನೀರು ಹರಿಯುತ್ತದೆ. ಇದರಿಂದ ಶೇ. 90 ಕೃತಕ ನೆರೆಗೆ ಪರಿಹಾರವಾಗಿದೆ. ಮುಂದೆ ಚರಂಡಿಯನ್ನು ವಿಸ್ತರಿಸಲು ರೈಲ್ವೇ ಇಲಾಖೆಯ ಸಹಕಾರ ಪಡೆಯಬೇಕಾಗುತ್ತದೆ. ಮರವೂರು ವೆಂಟೆಡ್‌ ಡ್ಯಾಂ ಪೈಪ್‌ಗ್ಳು ಕೂಡ ಚರಂಡಿಯಲ್ಲಿ ಹಾದು ಹೋಗಿವೆ. ಮುಂದಿನ ಅನುದಾನದಲ್ಲಿ ಅದನ್ನು ಮಾಡಲಾಗುತ್ತದೆ.
– ರವಿಕುಮಾರ್‌, ಅಸ್ಟಿಸೆಂಟ್ ಎಕ್ಸ್‌ಕ್ಯೂಟಿವ್‌ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ
Advertisement

Udayavani is now on Telegram. Click here to join our channel and stay updated with the latest news.

Next