Advertisement

ಕೆಂಗೇರಿ, ಅಂಜನಾಪುರ ಮಾರ್ಗ 2018ಕ್ಕೆ ಪೂರ್ಣ

12:36 PM Feb 13, 2017 | |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಎರಡು ಮಾರ್ಗಗಳು 2018ರ ಅಂತ್ಯಕ್ಕೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳಲಿವೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. 

Advertisement

ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಅಧಿಕಾರಿಗಳೊಂದಿಗೆ ಭಾನುವಾರ ಮೆಟ್ರೋ ಯೋಜನೆಯ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

“ಎರಡನೇ ಹಂತದಲ್ಲಿ ಬರುವ ಮೈಸೂರು ರಸ್ತೆ-ಕೆಂಗೇರಿ (ರೀಚ್‌-2) ಮತ್ತು ಕನಕಪುರ ರಸ್ತೆಯ ಯಲಚೇನ ಹಳ್ಳಿ-ಅಂಜನಾಪುರ ಟೌನ್‌ಶಿಪ್‌ (ರೀಚ್‌-4ಬಿ) ವಿಸ್ತರಣಾ ಮಾರ್ಗ 2018ರ ಅಂತ್ಯಕ್ಕೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. 2020 ಡಿಸೆಂಬರ್‌ ವೇಳೆಗೆ ಮೆಟ್ರೋ ಎರಡೂ ಹಂತಗಳು ಸೇವೆಗೆ ಮುಕ್ತವಾಗಲಿವೆ. ಆಗ, ಮೆಟ್ರೋದಲ್ಲಿ ನಿತ್ಯ 15 ಲಕ್ಷ ಜನ ಸಂಚರಿಸಲಿದ್ದಾರೆ,” ಎಂದು ಹೇಳಿದರು. 

“2017-18ರಲ್ಲಿ ಕೇಂದ್ರ ಸರ್ಕಾರವು “ನಮ್ಮ ಮೆಟ್ರೋ’ ಯೋಜನೆಗಾಗಿ 1,400 ಕೋಟಿ ರೂ. ಮೀಸಲಿಟ್ಟಿದೆ,” ಎಂದು ಮಾಹಿತಿ ನೀಡಿದ ಅವರು, “ಮೆಟ್ರೋ ಮೊದಲನೇ ಹಂತ ಸಂಪೂರ್ಣವಾಗುತ್ತಿ ರುವ ಈ ಸಂದರ್ಭದಲ್ಲಿ ಬಿಎಂಆರ್‌ಸಿಎಲ್‌ ಅಧಿಕಾರಿಗಳೇ ಮೆಟ್ರೋ ಯೋಜ ನೆಯ ಬಗ್ಗೆ ಸಂಪೂರ್ಣ ಜ್ಞಾನವನ್ನು ಪಡೆದಿದ್ದಾರೆ.

ಈ ಹಿಂದೆ ಯೋಜನೆಗಾಗಿ ವಿದೇಶಿ ಕಂಪೆನಿ ಹಾಗೂ ಯೋಜನಾ ತಜ್ಞರಿಂದ ಸಲಹೆ ಪಡೆಯಲು ಮೆಟ್ರೋ ಯೋಜನೆಯ ಶೇ. 6ರಷ್ಟು ವೆಚ್ಚ ಹಣ ವೆಚ್ಚ ಆಗುತ್ತಿತ್ತು. ಮುಂದಿನ ದಿನಗಳಲ್ಲಿ ಪ್ರತಿ ಯೋಜನೆಯಲ್ಲೂ ಇದು ಉಳಿತಾ ಯವಾಗಲಿದೆ,” ಎಂದು ಹೇಳಿದರು. 

Advertisement

ಏಪ್ರಿಲ್‌ಗೆ 1ನೇ ಹಂತ: “ಮೆಟ್ರೋ ಯೋಜನೆಯ ಮೊದಲ ಹಂತ ಏಪ್ರಿಲ್‌ ಅಂತ್ಯಕ್ಕೆ ವಾಣಿಜ್ಯ ಸಂಚಾರಕ್ಕೆ ಮುಕ್ತ ವಾಗಲಿದೆ,” ಎಂದು ಇದೇ ವೇಳೆ ಸಚಿವ ವೆಂಕಯ್ಯ ನಾಯ್ಡು ತಿಳಿಸಿದರು. “42 ಕಿ.ಮೀ. ಉದ್ದದ ಮೊದಲ ಹಂತದ ಮಾರ್ಗದಲ್ಲಿ 32 ಕಿ.ಮೀ. ಮಾರ್ಗದಲ್ಲಿ ಈಗಾಗಲೇ ಮೆಟ್ರೋ ರೈಲು ಓಡಾಡುತ್ತಿದೆ. ಮೊದಲ ಹಂತದ ಪ್ರಮುಖ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಸಣ್ಣ-ಪುಟ್ಟ ಕಾಮ ಗಾರಿಗಳು ಮಾತ್ರ ಬಾಕಿ ಇವೆ. ಕಾಮಗಾರಿ ಜತೆಗೆ ಮತ್ತೂಂದೆಡೆ ಪರೀಕ್ಷಾರ್ಥ ಸಂಚಾ ರವೂ ನಡೆಯಲಿದೆ,” ಎಂದರು. 

“ನಗರದ ಟ್ರಾಫಿಕ್‌ ಸಮಸ್ಯೆಯನ್ನು ನಿವಾರಿಸಲಿರುವ ಮೆಟ್ರೋ ಯೋಜನೆಯ ಮೊದಲ ಹಂತದಲ್ಲಿ ದಿನಕ್ಕೆ ಐದು ಲಕ್ಷ ಜನರಿಗೆ ಇದರ ಉಪಯೋಗ ಆಗಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಈಗಿರುವ ಮೂರು ಬೋಗಿಗಳಿಗೆ ಇನ್ನೂ ಮೂರು ಬೋಗಿಗಳನ್ನು ಜೋಡಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರು ಬೋಗಿಯ ರೈಲುಗಳ ಓಡಾಟಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ,” ಎಂದು ಸಚಿವರು ತಿಳಿಸಿದರು. 

ವಿಮಾನ ನಿಲ್ದಾಣ ಮಾರ್ಗ ಶೀಘ್ರ ಅಂತಿಮ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌)ಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಯಾವ ಮಾರ್ಗ ಸೂಕ್ತ ಎಂದು ಸಲಹೆ ಕೇಳಲಾ ಗಿತ್ತು. ಅದರಂತೆ ಬಿಎಂಆರ್‌ಸಿ ಈಗಾಗಲೇ ಒಂಬತ್ತು ಪರ್ಯಾಯ ಮಾರ್ಗಗಳನ್ನು ಗುರುತಿಸಿದೆ. ಈ ಪೈಕಿ ಆದಷ್ಟು ಬೇಗ ಒಂದನ್ನು ಅಂತಿಮಗೊಳಿಸಲು ಸೂಚಿಸ ಲಾಗಿದೆ. ಇದರಿಂದ ಬೆಂಗಳೂರು ವಿಮಾನ ನಿಲ್ದಾಣ ಭವಿಷ್ಯದಲ್ಲಿ ಇನ್ನಷ್ಟು ವೇಗ ವಾಗಿ ಬೆಳೆಯಲು ಅನುಕೂಲವಾಗಲಿದೆ ಎಂದರು.

ಇದಲ್ಲದೆ, ಸಿಲ್ಕ್ಬೋರ್ಡ್‌- ಕೆ.ಆರ್‌. ಪುರ ನಡುವೆ 18 ಕಿ.ಮೀ. ಮೆಟ್ರೋ ರೈಲು ಮಾರ್ಗ ನಿರ್ಮಿಸಲು ಉದ್ದೇಶಿಸಿದ್ದು, ಯೋಜನಾ ವೆಚ್ಚ 4,200 ಕೋಟಿ ರೂ. ಆಗಿದೆ ಎಂದು ಹೇಳಿದರು. ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್‌, ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next