ಕನ್ನಡ ಚಿತ್ರರಂಗದಲ್ಲಿ ಅನೇಕ ದಿನಗಳಿಂದ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು “ಕೆಂಡ’. ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಹಾಗೂ ಮೆಚ್ಚುಗೆ ಪಡೆದಿರುವ ಈ ಚಿತ್ರ ಜುಲೈ 26ರಂದು ತೆರೆಕಾಣಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಹಿಂದೆ “ಗಂಟುಮೂಟೆ’ ಸಿನಿಮಾವನ್ನು ನಿರ್ದೇಶಿಸಿದ್ದ ರೂಪಾ ರಾವ್ “ಕೆಂಡ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. “ಅಮೇಯುಕ್ತಿ ಸ್ಟುಡಿಯೋಸ್’ ಬ್ಯಾನರ್ ಮೂಲಕ “ಗಂಟುಮೂಟೆ’ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿದ್ದುಕೊಂಡು, ಛಾಯಾಗ್ರಾಹಕರಾಗಿಯೂ ಕಾರ್ಯ ನಿರ್ವಹಿಸಿದ್ದ ಸಹದೇವ್ ಕೆಲವಡಿ “ಕೆಂಡ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಜೊತೆಗೆ ನಿರ್ಮಾಣದಲ್ಲಿಯೂ ಭಾಗಿಯಾಗಿದ್ದಾರೆ. “ಕೆಂಡ’ ಟ್ರೇಲರ್‌ನಲ್ಲಿರುವ ವಿಷಯಗಳು ಸಿನಿಮಾದ ಮೇಲಿನ ಕುತೂಹಲ ಹೆಚ್ಚಿಸಿದೆ.
ಸೂಕ್ಷ್ಮ ಮನಸ್ಥಿತಿಯ ನಿರ್ದೇಶಕನ ಕೈಗೆ ಭೂಗತ ಜಗತ್ತಿನ ಕಥೆ ಸಿಕ್ಕರೆ, ಅಲ್ಲಿ ಬೇರೊಂದು ಆಯಾಮದ ದೃಶ್ಯಕಾವ್ಯ ರೂಪುಗೊಳ್ಳುವ ಸಾಧ್ಯತೆ ಇರುತ್ತದೆ. ಕೆಂಡದಲ್ಲಿರೋದೂ ಕೂಡಾ ಅಂಥದ್ದೇ ರೌಡಿಸಂ ಸುತ್ತ ಜರುಗುವ ಕಥನ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡೋ ಯುವಕನೊಬ್ಬ ಪರಿಸ್ಥಿತಿಗಳ ಸೆಳೆವಿಗೆ ಸಿಕ್ಕಿ ಭೂಗತ ತೆಕ್ಕೆಗೆ ಬೀಳುವ ಕಥೆ ಇಲ್ಲಿದೆ. ಹಾಗಂತ ಅದು ಸಿದ್ಧ ಸೂತ್ರಗಳ ಸುತ್ತ ಗಿರಕಿ ಹೊಡೆಯುವಂಥದ್ದಲ್ಲ ಎನ್ನುವುದು ತಂಡದ ಮಾತು.
“ಇಡೀ ಸಿನಿಮಾ ಒಂದು ಒಳ್ಳೆಯ ಅನುಭವ ನೀಡಿದೆ. ನಾನು ಏನು ಅಂದುಕೊಂಡಿದ್ದೆನೋ ಅದನ್ನು ತೆರೆಮೇಲೆ ತಂದಿದ್ದೇನೆ. ಚಿತ್ರ ಇಂದಿನ ಯೂತ್ಸ್ಗೆ, ಕಾಮನ್ ಆಡಿಯನ್ಸ್‌ಗೆ ಕನೆಕ್ಟ್ ಆಗುತ್ತದೆ’ ಎನ್ನುತ್ತಾರೆ ಸಹದೇವ. ಬಿ.ವಿ ಭರತ್ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ ದೇಶಪಾಂಡೆ ಹೀಗೆ ಬಹುತೇಕ ರಂಗಭೂಮಿ ಪ್ರತಿಭೆಗಳೇ “ಕೆಂಡ’ ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ “ಎಲಿಫೆಂಟ್ ವಿಸ್ಪರ್ಸ್’ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ “ಕೆಂಡ’ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ.