Advertisement

ಅಪಾಯ ಆಹ್ವಾನಿಸುತ್ತಿದೆ ಕೆಂಚುಗದ್ದೆ ಕಿರು ಸೇತುವೆ

09:43 PM Jul 08, 2021 | Team Udayavani |

ಕುಂದಾಪುರ: ಮಡಾಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಸುಮಾರು 50 ವರ್ಷಗಳ ಹಿಂದಿನ ಕೆಂಚುಗದ್ದೆ ಕಿರು ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಮಡಾಮಕ್ಕಿಯಿಂದ ಕೆಲರಾಬೆಟ್ಟು, ಮುಳ್ಳುಹಕ್ಲು, ಹುಯ್ನಾರುಮಕ್ಕಿ ಸೇರಿದಂತೆ ಆರೇಳು ಊರುಗಳಿಗೆ ಇದೇ ಸಂಪರ್ಕ ಸೇತುವೆಯಾಗಿದೆ.

Advertisement

ಈ ಕೆಂಚುಗದ್ದೆ ಕಿರು ಸೇತುವೆಯು ಸುಮಾರು 50 ವರ್ಷಗಳಷ್ಟು ಹಿಂದಿನ ದ್ದಾಗಿದ್ದು, ಈ ವರೆಗೆ ಒಮ್ಮೆ ಮಾತ್ರ ದುರಸ್ತಿ ಮಾಡಿದ್ದು ಬಿಟ್ಟರೆ, ಆ ಮೇಲೆ ಇದರತ್ತ ಯಾರೂ ಗಮನವೇ ಹರಿಸಿಲ್ಲ. ಕಳೆದ 4-5 ವರ್ಷಗಳಿಂದ ಶಿಥಿಲಗೊಂಡಿದೆ. ಸೇತುವೆಯ ಗಾರ್ಡ್‌ಗಳು ಕಿತ್ತು ಹೋಗಿದ್ದು, ಸೇತುವೆಯ ಸ್ಲಾéಬ್‌ ಹಾಕಿದ ಭಾಗಗಳಲ್ಲಿ ಅಲ್ಲಲ್ಲಿ ಸಿಮೆಂಟ್‌ ಎದ್ದು ಹೋಗಿ ಹೊಂಡಗಳು ಬಿದ್ದಿವೆ.

ಹೊಸ ಸೇತುವೆಗೆ ಬೇಡಿಕೆ:

ಕಳೆದ 4-5 ವರ್ಷಗಳಿಂದ ಈ ಸೇತುವೆಯು  ಸಂಚಾರಕ್ಕೆ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಇದರಲ್ಲಿ ಇನ್ನಷ್ಟು ವರ್ಷಗಳ ಕಾಲ ವಾಹನ ಸಂಚರಿಸುವುದು ಅನಾಹುತಕ್ಕೆ ದಾರಿ ಮಾಡಿಕೊಟ್ಟಂತೆ. ಮುಂದಿನ ವರ್ಷದಲ್ಲಾದರೂ ಹೊಸ ಸೇತುವೆಯಾದರೆ ಬಹಳಷ್ಟು ಅನುಕೂಲವಾಗಲಿದೆ ಎನ್ನುವ ಬೇಡಿಕೆ ಊರವರದ್ದಾಗಿದೆ.

ಯಾವೆಲ್ಲ ಊರಿಗೆ ಸಂಪರ್ಕ : ಈ ಕೆಂಚುಗದ್ದೆ ಸೇತುವೆಯು ಮಡಾಮಕ್ಕಿ ಯಿಂದ ಹುಯ್ನಾರುಮಕ್ಕಿ, ಕೆಲರಾಬೆಟ್ಟು, ಮುಳ್ಳುಹಕ್ಲು, ಮಾರ್ಮಣ್ಣು, ನಡುಬೆಟ್ಟು, ಅರಿಕಲ ಅಣಿ, ಚಿಟ್ಟಿಹಕ್ಲು, ಕಬ್ಬಿನಾಲೆ ಮತ್ತಿತರ ಊರುಗಳಿಗೆ ತೆರಳಲು ಇದೇ ಕಿರು ಸೇತುವೆ ಆಸರೆಯಾಗಿದೆ. ಈ ಭಾಗದ ಆರೇಳು ಊರುಗಳ ಸುಮಾರು 100ಕ್ಕೂ ಹೆಚ್ಚು ಮನೆಗಳ ಜನರು ಮಡಾಮಕ್ಕಿ, ಬೆಳ್ವೆ, ಆರ್ಡಿ ಹಾಗೂ ಇನ್ನಿತರ ಪೇಟೆಗೆ, ಪಡಿತರ, ಶಾಲೆ, ದೇವಸ್ಥಾನ, ಆಸ್ಪತ್ರೆಗೆ ಹೋಗಲು ಈ ಸೇತುವೆಯನ್ನೇ ಆಶ್ರಯಿಸಿದ್ದಾರೆ. ಒಂದು ವೇಳೆ ಸೇತುವೆಯಲ್ಲಿ ಸಂಪರ್ಕ ಕಡಿತಗೊಂಡರೆ ಈ ಊರಿನವರಿಗೆ ಊರಿನಿಂದಾಚೆ ಬರಲು ಪರ್ಯಾಯ ವ್ಯವಸ್ಥೆಯೇ ಇಲ್ಲದಂತಾಗುತ್ತದೆ.

Advertisement

ಮಡಾಮಕ್ಕಿಯಿಂದ ಕೆಲರಾಬೆಟ್ಟು ಕಡೆಗೆ ಸಂಚರಿಸುವ ಮಾರ್ಗದಲ್ಲಿ ಈಗಿರುವ ಕಿರು ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ಮಂಜೂರಾಗಿದ್ದು, ಅದಕ್ಕಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುತುವರ್ಜಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 1.75 ಕೋ.ರೂ. ಮೀಸಲಿರಿಸಲಾಗಿದೆ. ಮಳೆಗಾಲ ಮುಗಿದ ತತ್‌ಕ್ಷಣ ಸೇತುವೆ ಕಾಮಗಾರಿ ಆರಂಭವಾಗಲಿದೆ.   -ಹರ್ಷವರ್ಧನ್‌, ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಕುಂದಾಪುರ

ಈ ಸೇತುವೆಯಲ್ಲಿ ಆರೇಳು ಊರಿನವರು ಸಂಚರಿಸುತ್ತಿದ್ದು ಸೇತುವೆಯ ತಡೆಗೋಡೆ ಎಲ್ಲ ಕಿತ್ತು ಹೋಗಿದ್ದು, ಕಾಂಕ್ರೀಟ್‌ ಎಲ್ಲ ಎದ್ದು ಹೋಗಿ ಅಪಾಯಕಾರಿಯಾಗಿದೆ. ಸದ್ಯಕ್ಕೆ ದುರಸ್ತಿ ಮಾಡಿಕೊಟ್ಟು, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ. ಆದಷ್ಟು ಬೇಗ ಈ ಬಗ್ಗೆ ಸಂಬಂಧಪಟ್ಟವರು ದುರಸ್ತಿ ಮಾಡಿಕೊಟ್ಟರೆ ಪ್ರಯೋಜನವಾಗಲಿದೆ. -ಪ್ರತಾಪ್‌ ಶೆಟ್ಟಿ ಮಾರ್ಮಣ್ಣು, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next