“ಕೆಂಪಿರ್ವೆ’ ಎಂಬ ಚಿತ್ರದ ಕಥೆ ಹುಟ್ಟಿದ್ದು ಅದೇ ಬಸವನಗುಡಿ ಪ್ರದೇಶದಲ್ಲಿ. ಇನ್ನು ಚಿತ್ರದ ಚಿತ್ರೀಕರಣ ಸಹ ಅಲ್ಲೇ ಆಗಿದೆ. ಈಗ ಹಾಡುಗಳನ್ನೂ ಅಲ್ಲೇ ಬಿಡುಗಡೆ ಮಾಡಿದರೆ ಹೇಗೆ ಎಂಬ ಐಡಿಯಾ ಅದೊಂದು ದಿನ ಭಾರದ್ವಾಜ್ ಸಹೋದರರಿಗೆ ಹೊಳೆದಿದೆ. ಒಂದು ಪ್ರಶಸ್ಥ ಮುಹೂರ್ತ ನೋಡಿ, ಬಸವನಗುಡಿ ಬ್ಯೂಗಲ್ ರಾಕ್ ಪಾರ್ಕಿನಲ್ಲಿ “ಕೆಂಪಿರ್ವೆ’ ಚಿತ್ರದ ಹಾಡುಗಳ ಬಿಡುಗಡೆಯನ್ನು ಆಯೋಜಿಸಿಯೇಬಿಟ್ಟಿದ್ದಾರೆ.
ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಬಂದಿದ್ದರು. ಜೊತೆಗೆ ಉಮೇಶ್ ಬಣಕಾರ್ ಸಹ ಇದ್ದರು. ಇನ್ನು ಮಾಜಿ ಮೇಯರ್ ಕಟ್ಟೆ ಸತ್ಯ ಅವರು ಸಹ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿದ್ದರು. ಚಿತ್ರದ ನಾಯಕ ದತ್ತಣ್ಣ ಬೆಚ್ಚಗೆ ಶಾಲು ಹೊದ್ದು ಕುಳಿತಿದ್ದರು. ಪಕ್ಕದಲ್ಲಿ ವೈಟ್ ಆ್ಯಂಡ್ ವೈಟ್‌ನಲ್ಲಿ ಹಿರಿಯ ಸಾಹಿತಿ ಸಿ.ವಿ. ಶಿವಶಂಕರ್ ಇದ್ದರು. ಇವರೆಲ್ಲರ ಸಮ್ಮುಖದಲ್ಲಿ ಜೀ ಮ್ಯೂಸಿಕ್‌ನವರು ಹೊರತಂದಿರುವ “ಕೆಂಪಿರ್ವೆ’ ಚಿತ್ರದ ಹಾಡುಗಳು ಬಿಡುಗಡೆಯಾದವು.
ಚಿತ್ರದ ಹೆಸರು ಕೇಳಿಯೇ, ಗೋವಿಂದು ಅವರಿಗೆ ಚಿತ್ರವನ್ನು ನೋಡುವ ಆಸೆ ಬಂದುಬಿಟ್ಟಿದೆಯಂತೆ. “ಚಿತ್ರದ ಹೆಸರಿನಲ್ಲೇ ಒಂದು ಅದ್ಭುತ ಫೋರ್ಸ್ ಇದೆ. ಇನ್ನು “ಜೋಪಾನ ಕಚ್ಚುತ್ತೆ’ ಅನ್ನೋ ಉಪಶೀರ್ಷಿಕೆ ಇನ್ನೂ ಆಸಕ್ತಿಕರವಾಗಿದೆ. ಹಾಗಾಗಿ ಈ ಚಿತ್ರವನ್ನು ನೋಡಲೇಬೇಕು ಎಂದು ಆಸೆಯಾಗುತ್ತಿದೆ’ ಎಂದರು. ಬರೀ ತಾವು ನೋಡುವುದಷ್ಟೇ ಅಲ್ಲ, ಈ ಚಿತ್ರವನ್ನು ನೋಡಬೇಕೆಂದು ಕನ್ನಡಿಗರಿಗೂ ಕರೆ ನೀಡಿದರು. ಇನ್ನು ಒಳ್ಳೆಯ ಕಥೆ ಇಟ್ಟುಕೊಂಡು ಚಿತ್ರ ಮಾಡಿ ಎಂದು ಸಲಹೆ ನೀಡಿದ ಅವರು, “ಇವತ್ತು ಕನ್ನಡ ಚಿತ್ರಗಳು, ಬೇರೆ ಭಾಷೆಯ ಚಿತ್ರಗಳ ಜೊತೆಗೆ ತೀವ್ರ ಪೈಪೋಟಿ ನಡೆಸಬೇಕಿದೆ. ಬೇರೆ ಭಾಷೆಯ ಚಿತ್ರಗಳು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತಿದ್ದರೆ, ಕನ್ನಡ ಚಿತ್ರಗಳು ಹೋರಾಟ ಮಾಡುವಂತಹ ಪರಿಸ್ಥಿತಿ ಇದೆ’ ಎಂದು ಸಾ.ರಾ. ಗೋವಿಂದು ಹೇಳಿದರು.
ಚಿತ್ರವನ್ನು ನಿರ್ದೇಶಿಸುತ್ತಿರುವುದು ವೆಂಕಟ್ ಭಾರದ್ವಾಜ್. ಇನ್ನು ಚಿತ್ರಕ್ಕೆ ಕಥೆ ಕೊಟ್ಟಿರುವುದು ಲಕ್ಷ್ಮಣ್ ಭಾರದ್ವಾಜ್. ಅವರಿಬ್ಬರೂ ಹಿರಿಯ ಗೀತರಚನೆಕಾರ ಸಿ.ವಿ. ಶಿವಶಂಕರ್ ಅವರ ಮಕ್ಕಳು. ಇಬ್ಬರೂ ಚಿತ್ರದ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು. ಚಿತ್ರಕ್ಕೆ ಸಿಂಗಪೂರ್ ಕಿಶನ್ ಸಂಗೀತ ಸಂಯೋಜಿಸಿದರೆ, ವಿಜಯ್ ಶಾಸ್ತ್ರೀ, ಮನೋಲ್ಲಾಸ ಮಹೇಶ್, ಲಕ್ಷ್ಮಣ್, ವೆಂಕಟ್ ಹಾಗೂ “ಕಬಡ್ಡಿ’ ನರೇಂದ್ರ ಬಾಬು ಅವರು ಹಾಡುಗಳನ್ನು ರಚಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ “ಆಕಾಶ ನಮ್ಮದೇ …’ ಎಂಬ ಹಾಡನ್ನು ಮೇಘನಾ ಭಟ್ ಅವರು ಹಾಡಿದರು.