Advertisement

ಪರಿಸರ ಪರ ಕೆಲಸಗಳಿಗೆ ಕೆಂಪೇಗೌಡರು ಮಾದರಿ

09:26 PM Jun 27, 2019 | Team Udayavani |

ಉಡುಪಿ: ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರು ನಗರ ಕಟ್ಟುವಾಗ ಕೆರೆ ಕಟ್ಟೆಗಳನ್ನು ನಿರ್ಮಿಸಿರುವುದು, ಮರಗಳನ್ನು ಬೆಳೆಸಿದ ರೀತಿ ಇಂದಿಗೂ ಮಾದರಿ ಎಂದು ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

Advertisement

ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಒಕ್ಕಲಿಗ(ಗೌಡ)ರ ಸೇವಾ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಸರಕಾರಿ ಬಾಲಕಿಯರ ಪ.ಪೂ. ಕಾಲೇಜು ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಪರಿಸರದ ಕಡೆಗೆ ಗಮನ ಕೊಡದ ಪರಿಣಾಮ ಜಾಗತಿಕ ತಾಪಮಾನ, ಮಳೆ ಅವಧಿಯಲ್ಲಿ ಏರುಪೇರು ಮೊದಲಾದ ಸಮಸ್ಯೆಗಳು ಉಂಟಾಗುತ್ತಿದೆ. ಮರ ಬೆಳೆಸಲು ಹೆಚ್ಚು ಗಮನ ನೀಡಬೇಕು. ಕೆರೆ, ತೋಡುಗಳನ್ನು ಹೂಳೆತ್ತುವ ಕೆಲಸಗಳಿಗಾಗಿ ಸರಕಾರವನ್ನೇ ಕಾಯದೆ ಸಾರ್ವಜನಿಕ ಸಂಘ ಸಂಸ್ಥೆಗಳು, ಸಾರ್ವಜನಿಕರು ಮುಂದಾಗುವ ಆವಶ್ಯಕತೆ ಇದೆ ಎಂದು ದಿನಕರ ಬಾಬು ಹೇಳಿದರು.

ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ರಾವ್‌ ಅವರು ಮಾತನಾಡಿ, ಕೆಂಪೇಗೌಡರ ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಜೀವನ ಮುಡಿಪಾಗಿಡಬೇಕು ಎಂದು ಹೇಳಿದರು.

ಉಡುಪಿ ಜಿಲ್ಲಾ ಒಕ್ಕಲಿಗ(ಗೌಡ)ರ ಸೇವಾ ಸಂಘದ ಅಧ್ಯಕ್ಷ ಸಿದ್ಧರಾಜು ಉಪಸ್ಥಿತರಿದ್ದರು.ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ನಿಕೇತನ ವಿಶೇಷ ಉಪನ್ಯಾಸ ನೀಡಿ “ಕೆಂಪೇಗೌಡ ಅವರು ಅತ್ಯಂತ ಯೋಜಿತವಾಗಿ, ಎಲ್ಲ ವರ್ಗದವರಿಗೂ ಅನುಕೂಲವಾಗವಂತೆ ನಗರ ನಿರ್ಮಿಸಿದ್ದರು. ಕೆಂಪೇಗೌಡರ ದಕ್ಷ ಆಡಳಿತ, ತೆರಿಗೆ ನೀತಿ, ವೃತ್ತಿ ಆಧಾರಿತ ಸುಂಕ ಮಹತ್ವದ್ದಾಗಿವೆ’ ಎಂದು ಹೇಳಿದರು.

Advertisement

ಜಿಲ್ಲಾಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್‌.ಚಂದ್ರಶೇಖರ್‌ ಸ್ವಾಗತಿಸಿದರು. ಇನ್ಸ್‌ಪೆಕ್ಟರ್‌ ಸಂಪತ್‌ಕುಮಾರ್‌, ಜಿ.ಪಂ.ಉಪ ಕಾರ್ಯದರ್ಶಿ ನಾಗೇಶ್‌ ರಾಯ್ಕರ್‌, ಉಡುಪಿ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಯಾದವ್‌ ಕರ್ಕೇರ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.

ಪರಂಪರೆ, ಸಂಸ್ಕೃತಿ ಉಳಿಯಲಿ
ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಅವರು ಮಾತನಾಡಿ ಕೆಂಪೇಗೌಡ ಅವರು 9 ಕೋಟೆ, 7 ಕೆರೆ ಹಾಗೂ ನೂರಕ್ಕೂ ಅಧಿಕ ಕಲ್ಯಾಣಿಗಳನ್ನು ನಿರ್ಮಿಸಿದ್ದಾರೆ. ಛತ್ರಗಳು, ಉತ್ತಮ ರಸ್ತೆ ನಿರ್ಮಾಣದ ಜತೆಗೆ ಸಾಲುಮರಗಳನ್ನು ನೆಡಿಸಿದ್ದಾರೆ. ಕೆಂಪೇಗೌಡ ಅವರ ಸೊಸೆ ಕೋಟೆ ಕುಸಿಯುವುದನ್ನು ತಡೆಯಲು ತನ್ನ ಪ್ರಾಣತ್ಯಾಗ ಮಾಡಿದ್ದಾರೆ. ಈ ನಾಡಿಗಾಗಿ ತ್ಯಾಗ, ಬಲಿದಾನ ಮಾಡಿದವರನ್ನು ನೆನಪಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸುವ ಗೌರವ. ಆಗ ನಮ್ಮಲ್ಲಿ ರಾಷ್ಟ್ರ ಭಕ್ತಿ ಜಾಗೃತವಾಗುತ್ತದೆ. ಈ ನಾಡಿನ ಭವ್ಯ ಪರಂಪರೆ, ಸಂಸ್ಕೃತಿ ಉಳಿಯಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next