Advertisement

ಶಿಥಿಲ ಕೆಂಪೇಗೌಡರ ಕೋಟೆ ಜೀರ್ಣೋದ್ಧಾರಕ್ಕೆ ಆಗ್ರಹ

01:56 PM Aug 05, 2023 | Team Udayavani |

ಮಾಗಡಿ: ಪಟ್ಟಣದಲ್ಲಿರುವ ನಾಡಪ್ರಭು ಕೆಂಪೇಗೌಡರ ಗತವೈಭವದ ಕಾಲದ ಕೋಟೆಯ ಜೀರ್ಣೋದ್ಧಾರದ ಕಾಮಗಾರಿ ಕಳೆದ 15 ವರ್ಷಗಳಿಂದಲೂ ಪೂರ್ಣ ಗೊಂಡಿಲ್ಲ. ಇಲ್ಲಿನ ಕೋಟೆ ಹೆಬ್ಟಾಗಿಲಲ್ಲಿ ನಾಡಪ್ರಭುವಿನ ಪ್ರತಿಮೆ ಸ್ಥಾಪಿಸಿದರೆ ಮಾತ್ರ ಮಾಗಡಿಯೂ ಬೆಂಗಳೂರಿನಂತೆ ಅಭಿವೃದ್ಧಿ ಹೊಂದಲಿದೆ. ಶೀಘ್ರದಲ್ಲೇ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ಹೆಚ್ಚಿನ ಕಾಳಜಿ ತೋರಿಸಿ ಇದಕ್ಕೊಂದು ಸುಂದರ ರೂಪಕೊಟ್ಟು ವಿಶ್ವಖ್ಯಾತಿಗೊಳಿಸಲು ಪ್ರವಾಸಿತಾಣವನ್ನಾಗಿಸಬೇಕೆಂದು ನಾಗರಿಕರ ಆಗ್ರಹವಾಗಿದೆ.

Advertisement

ಕೋಟೆ ಗೋಡೆಯ ಮೇಲೆ ಗಿಡಗಂಟಿಗಳು: ಬೆಂಗಳೂರ‌ನ್ನು ಕಟ್ಟಿದ್ದ ವಿಶ್ವಖ್ಯಾತಿ ಮಾಗಡಿಯ ಕೆಂಪೇಗೌಡರಿಗೆ ಸಲ್ಲುತ್ತದೆ. ಆದರೆ, ನಾಡನ್ನು ಆಳಿದ ಇತಿಹಾಸವುಳ್ಳ ಶಿಥಿಲ ಕೆಂಪೇಗೌಡರ ಕೋಟೆಯ ಜೀರ್ಣೋದ್ಧಾರದ ಕಾಮಗಾರಿ ಮಾತ್ರ ಕಳೆದ 15 ವರ್ಷಗಳಿಂದ ಅಪೂರ್ಣವಾಗಿಯೇ ಉಳಿದಿದೆ. ಕೋಟೆ ಕಟ್ಟಡ ವಿನಾಶದ ಹಂಚಿಗೆ ತಲುಪುತ್ತಿದೆ. ಕೆಂಪೇಗೌಡ ಕಾಲದ ಪಳಯುಳಿಕೆಗಳನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ಸಂರ‌ಕ್ಷಣೆ ಮಾಡುವುದಾಗಿ ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ಸಹ ರಚನೆಯಾಗಿ ಹಲವು ವರ್ಷಗಳೇ ಕಳೆದಿದೆ. ಜೀರ್ಣೋದ್ಧಾರದ ಜೊತೆಗೆ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಅನುದಾನ ಸಹ ಮಂಜೂರಾಗಿದೆ. ಆದರೂ ಕೋಟೆ ಮಾತ್ರ ನಿರ್ಮಾಣಗೊಳ್ಳಲಿಲ್ಲ.

ವಿಪರ್ಯಾಸ: ನಾಡನ್ನಾಳುವ ದೊರೆಗಳೆಲ್ಲರೂ ಕೆಂಪೇಗೌಡರ ಆದರ್ಶಗಳ ಮಾತನ್ನಾಡುತ್ತಾ ಆಡಳಿತ ನಡೆಸುತ್ತಿದ್ದಾರೆ. ಆದರೂ ಇತಿಹಾಸ ಸಾರುವ ಕೆಂಪೇಗೌಡರ ಕಾಲದ‌ ಕೋಟೆ, ಕೊತ್ತಲು, ಗುಡಿ, ಗೋಪುರಗಳು, ಕೆರೆ-ಕಟ್ಟೆ, ಬಾವಿಗಳು, ಕಲ್ಯಾಣಿಗಳು ಹಾಗೂ ಇಲ್ಲಿನ ಕೆಂಪಾಪುರದಲ್ಲಿರುವ ಹಿರಿಯ ಕೆಂಪೇಗೌಡರ ಸಮಾಧಿ ಸಹ ಜೀರ್ಣೋದ್ಧಾರಕ್ಕೆ ಅನುದಾನ ಬಳಸದೆ ಇರುವುದು ಹಾಗೂ ದಿನೇ ದಿನೆ ಕಾಲನಲೀಲೆಗೆ ಕೋಟೆ ಕರಗುತ್ತಿದ್ದು, ನಾಡಪ್ರಭು ಕೆಂಪೇಗೌಡ ಕೋಟೆ ಮೇಲೆ ಗಿಡಗಂಟಿ ಬೆಳೆದು ನಿಂತಿದ್ದು, ವಿಷಜಂತುಗಳ ವಾಸಸ್ಥಾನವಾಗುತ್ತಿರುವುದು ವಿಪರ್ಯಾಸ.

ಕಾಮಗಾರಿ ಪೂರ್ಣಗೊಂಡಿಲ್ಲ: ಕಳೆದ 15 ವರ್ಷದ ಹಿಂದೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಮಾಗಡಿ ಕೆಂಪೇಗೌಡ ಕೋಟೆ ಜೋರ್ಣೋದ್ಧಾರಕ್ಕೆ 18 ಕೋಟಿ ರೂ ಮಂಜೂರಾತಿ ನೀಡಿದ್ದರು. ಅಂದಿನ ಶಾಸಕರಾಗಿದ್ದ ಎಚ್‌.ಸಿ.ಬಾಲಕೃಷ್ಣ ಕೋಟೆ ಜೀರ್ಣೋದ್ಧಾರಕ್ಕೆ  ಎಚ್ಡಿಕೆಯಿಂದಲೇ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆ ವೇಳೆ ಕಾಮಗಾರಿ ಪ್ರಾರಂಭ ಗೊಂಡಿತು. ಬಾಲಕೃಷ್ಣ ಕೋಟೆ ಕಟ್ಟುವ ಸಂಕಲ್ಪ ಮಾಡಿ ಕಾಮಗಾರಿ ಹೆಚ್ಚು ಒತ್ತು ನೀಡಿ ಕೋಟೆ ಕಟ್ಟಡ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನಮಾಡಿ ಶ್ರಮಿಸಿದರು. ಅವರ ಅಧಿಕಾರ ಹೋದ ಮೇಲೆ ಇಲ್ಲಿಯವರೆಗೂ ಕೆಂಪೇಗೌಡರ ಕೋಟೆ ಕಾಮಗಾರಿ ಪೂರ್ಣಗೊಂಡಿಲ್ಲ.

ಇತಿಹಾಸ ಸೃಷ್ಟಿಸಿ: ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಂಪೇಗೌಡ ಕೋಟೆ ಜೀರ್ಣೋದ್ಧಾರದ ಮನವರಿಕೆ ಮಾಡಿಕೊಡುವ ಮೂಲಕ ವಿಶೇಷ ಅನುದಾನ ಕೋರಿ ಮನವಿ ಮಾಡಿದರೆ, ಪ್ರಸ್ತುತ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ಆಡಳಿತ ಪಕ್ಷದಲ್ಲಿರುವ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ವಿಶೇಷ ಅನುದಾನ ಬಿಡುಗಡೆಗೆ ಮನವಿ ಮಾಡಿ ಒತ್ತಾಯಿಸಬೇಕು. ಆಗ ಮಾತ್ರ ನಾಡ ಪ್ರಭು ಕೆಂಪೇಗೌಡರ ಇತಿಹಾಸದ ಕೋಟೆ ಪೂರ್ಣಗೊಳಿಸುವ ಸಾಧ್ಯತೆಯೇ ಹೆಚ್ಚಿದೆ. ಜತೆಗೆ ಇತಿಹಾಸ ಸೃಷ್ಟಿಸಿದ ವ್ಯಕ್ತಿಯ ಸಾಲಿನಲ್ಲಿ ಶಾಸಕರು ನಿಲ್ಲಬಹುದು ಎಂಬುದು ಕೆಲ ಮುಖಂಡರ ಅಭಿಪ್ರಾಯವಾಗಿದೆ.

Advertisement

ಮಾಗಡಿ ಕೋಟೆ ಈಗ ಕುರಿ, ಮೇಕೆ ಸಂತೆ ಮೈದಾನ :

ನಾಡಪ್ರಭು ಕೆಂಪೇಗೌಡರ ಅರಮನೆಯ ಈ ಕೋಟೆ  ಮೈದಾನ ಈಗ ಕೇವಲ ಕುರಿ,ಮೇಕೆ ಸಂತೆಯ ವ್ಯಾಪಾರದ ಕೇಂದ್ರ ಸ್ಥಳವಾಗಿದೆ. ರಾಜಕೀಯ ಪಕ್ಷಗಳು ಸಮಾರಂಭ ನಡೆಸಲು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಈ ಕೋಟೆ ಮೈದಾನವಾಗಿ ಬಳಸಿಕೊಳ್ಳಲಾಗುತ್ತಿದೆ. ಕೋಟೆಯೊಳಗೆ ವಿದ್ಯುತ್‌ ದೀಪವಿಲ್ಲದೆ ಕಗ್ಗತ್ತಲು ಆವರಿಸಿದೆ. ಸಂಜೆಯಾಗುತ್ತಿದ್ದಂತೆ ಅನೈತಿಕ ತಾಣವೂ ಆಗುತ್ತಿದ್ದು, ನಾಗರಿಕರಲ್ಲಿ ಬೇಸರ ತಂದಿದೆ.

ಕೋಟೆ ಕಾಮಗಾರಿ ಪೂರ್ಣಗೊಳಿಸಲು ಮನವಿ:

ಜನನಾಯಕರು ಅಧಿಕಾರದ ದಾಹಕ್ಕೆ ಅಂಟುಕೊಳ್ಳದೆ, ಗತಕಾಲದ ಕೆಂಪೇಗೌಡರ ಕೋಟೆ ಕಟ್ಟಲು ಮುಂದಾಗಬೇಕು. ಇಚ್ಛಾಶಕ್ತಿಯುಳ್ಳವರಿಗೆ ಕೆಂಪೇಗೌಡರ ಶಕ್ತಿ ಬರುತ್ತದೆ. ಆ ಶಕ್ತಿ ಎಚ್‌.ಸಿ.ಬಾಲಕೃಷ್ಣ ಅವರಿಗಿದೆ ಎಂಬ ವಿಶ್ವಾಸ ಹೊಂದಿದ್ದೇವೆ. ಕೆಂಪೇಗೌಡ ಕಟ್ಟಿದ ಕೋಟೆಯನ್ನು ಈ ಸರ್ಕಾರ ಪುನರ್‌ ಜೀರ್ಣೋದ್ಧಾರಗೊಳಿಸಲು ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಬೇಕು. ನಾಡಿನ ಜನರು ಗತವೈಭವ ಕೋಟೆ ವೈಭೋಗವನ್ನು ಕಣ್ತುಂಬಿಸಿಕೊಳ್ಳಲು ಆದಷ್ಟು ಬೇಗ ಕೋಟೆ ಕಾಮಗಾರಿ ಪೂರ್ಣಗೊಳಿಸಲಿ ಎಂದುಕಿಸಾನ್‌ ಕಾಂಗ್ರೆಸ್‌ ಸಮಿತಿ ಜಿಲ್ಲಾರ್ಧಯಕ್ಷ ಆಗ್ರೋ ಪುರುಶೋತ್ತಮ್‌ ಮಮನವಿ ಮಾಡಿದ್ದಾರೆ.

ನಾಡಪ್ರಭು ಕೆಂಪೇಗೌಡ ಕೋಟೆ ಕಾಮಗಾರಿ ಪ್ರಾರಂಭಿಸಿದ್ದು ನಾನೇ, ಪೂರ್ಣಗೊಳಿಸಲು ನಾನೇ ಬರಬೇಕಿತ್ತು. ಗೌಡ ಕುಲ ತಿಲಕ ನಾಡಪ್ರಭು ಕೆಂಪೇಗೌಡರ ಕೋಟೆ ಕಟ್ಟಿ ನಾಡಿಗೆ ಸಮರ್ಪಿಸುವ ಕೆಲಸ ಮಾಡುತ್ತೇನೆ. ಇದಕ್ಕೆ ಬೇಕಾದ ವಿಶೇಷ ಅನುದಾನ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ.-ಎಚ್‌.ಸಿ. ಬಾಲಕೃಷ್ಣ, ಶಾಸಕ

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next