ಬೆಂಗಳೂರು: ಬಿಬಿಎಂಪಿಯು ಕೆಂಪೇಗೌಡ ಅವರ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ನೀಡುವ ಕೆಂಪೇಗೌಡ ಪ್ರಶಸ್ತಿಯನ್ನು ಈ ಬಾರಿ ಸಾಹಿತಿ ಚಂದ್ರಶೇಖರ್ ಪಾಟೀಲ್ , ಡಾ.ಮುಖ್ಯಮಂತ್ರಿ ಚಂದ್ರು, ಗುರುರಾಜ್ ಕರ್ಜಗಿ ಸೇರಿದಂತೆ ನೂರು ಜನ ಸಾಧಕರಿಗೆ ನೀಡಲಾಗಿದೆ.
508ನೇ ಕೆಂಪೇಗೌಡ ದಿನಾಚರಣೆ ಅಂಗವಾಗಿ ಸೆ.4 ರಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಕೆಂಪೇಗೌಡ ಮತ್ತು ಲಕ್ಷ್ಮೀ ದೇವಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಾರಂಭವಾಗಲಿದೆ. ಸಂಜೆ 4ಕ್ಕೆ ಡಾ.ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಗೆ ಪಾತ್ರರಾದ ಗಣ್ಯರಿಗೆ ಕೆಂಪೇಗೌಡ ಸ್ಮರಣಿಕೆ, ತಲಾ 50 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತಿದೆ.
ಕಳೆದ ವರ್ಷ 536 ಜನರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿದ್ದ ಬಿಬಿಎಂಪಿ ನಡೆಗೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ನಿವೃತ್ತ ನ್ಯಾ. ಎ.ಜೆ. ಸದಾಶಿವ ಅವರ ನೇತೃತ್ವದಲ್ಲಿ ವಿವಿಧ ಕ್ಷೇತ್ರದ 10 ಜನರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಿತಿಯು 70 ಜನ ಸಾಧಕರ ಹೆಸರನ್ನು ಅಂತಿಮ ಮಾಡಿದ್ದು, ಮೇಯರ್ ನೇತೃತ್ವದಲ್ಲಿನ ಸಮಿತಿಯು 30 ಜನ ಸಾಧಕರನ್ನು ಆಯ್ಕೆ ಮಾಡಿದೆ.
16 ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ:
Advertisement
ಇದೇ ಮೊದಲ ಬಾರಿಗೆ ನಾಡಪ್ರಭು ಕೆಂಪೇಗೌಡ ಅವರ ಸೊಸೆ ಲಕ್ಷ್ಮೀ ದೇವಿ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಹತ್ತು ಜನರಿಗೆ ಹಾಗೂ ಬೆಂಗಳೂರಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಐದು ಶಿಕ್ಷಣ ಸಂಸ್ಥೆಗಳನ್ನು ಶ್ರೀ ಡಾ. ಶಿವಕುಮಾರ್ ಸ್ವಾಮೀಜಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Related Articles
Advertisement
ಈ ಬಾರಿ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಅವರ ಜತೆಗೆ ವೈದ್ಯಕೀಯ, ಶಿಕ್ಷಣ, ಸಾಹಿತ್ಯ, ಕನ್ನಡ ಸೇವೆ, ಚಲನಚಿತ್ರ, ರಂಗಭೂಮಿ, ಸರ್ಕಾರಿ ಸೇವೆ, ಕ್ರೀಡೆ, ಮಾಧ್ಯಮ, ಶಿಲ್ಪಕಲೆ ಸೇರಿ 16 ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪಶಸ್ತಿಗೆ ಆಯ್ಕೆ ಮಾಡಲಾಗಿದೆ.
ಐಪಿಎಸ್ ಅಧಿಕಾರಿಗಳ ಆಯ್ಕೆ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಐಪಿಎಸ್ ಅಧಿಕಾರಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಾರಾಗೃಹ ಇಲಾಖೆಯಲ್ಲಿನ ಭ್ರಷ್ಟಾಚಾರ ಬಯಲಿಗೆಳೆದಿದ್ದ ಡಿ.ರೂಪಾ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣ ಬೇಧಿಸಿದ್ದ ಎಂ.ಎನ್.ಅನುಚೇತ್ ಮತ್ತು ಆ ತಂಡದಲ್ಲಿನ 6 ಪೊಲೀಸ್ ಅಧಿಕಾರಿಗಳನ್ನೂ ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಪುರಸ್ಕೃತ ಸಂಸ್ಥೆಗಳು: ಶ್ರೀ ರಮಣಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್ಸ್, ಬಾಸ್ಕೋ ಮನೆ, ಸುಮಂಗಲಿ ಸೇವಾಶ್ರಮ ಟ್ರಸ್ಟ್, ಮುಸ್ಲಿಂ ಅನಾಥಾಶ್ರಮ ಮತ್ತು ಮನೋನಂದನ ಬುದ್ಧಿಮಾಂದ್ಯ ಮಕ್ಕಳ ಶಾಲೆ.
ಲಕ್ಷ್ಮೀ ದೇವಿ ಪ್ರಶಸ್ತಿ ಪುರಸ್ಕೃತರು: ಲೀಲಾದೇವಿ ಆರ್ ಪ್ರಸಾದ್, ಧನಭಾಗ್ಯಮ್ಮ, ಕವನ ಬಸವಕುಮಾರ್, ಅನಸೂಯ ಎ, ಡಾ. ಲಕ್ಷ್ಮೀ ಬಿ.ಆರ್, ಪ್ರಾಚಿಗೌಡ, ಭಾರತಿ.ವಿ, ನಾರಂಗಿ ಭಾಯಿ, ಡಾ. ಗೌರಿಶ್ರೀ, ಸೌಜನ್ಯ ವಸಿಷ್ಠ.
ಪ್ರಕಟಣೆಗೂ ಮುನ್ನವೇ ಹೆಸರು ಬಹಿರಂಗ:
ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು. ಕಳೆದ ಬಾರಿ ಪ್ರಶಸ್ತಿ ಪುರಸ್ಕೃತರ ಆಯ್ಕೆಯಲ್ಲಿ ಲಾಬಿ ನಡೆದಿದೆ ಎನ್ನುವ ಆರೋಪ ಕೇಳಿಬಂದಿತ್ತು. ಜತೆಗೆ ಇದು ತೀವ್ರ ಆಕ್ಷೇಪಗಳೊಂದಿಗೆ ವಿವಾದ ಸ್ವರೂಪವನ್ನೂ ಪಡೆದಿತ್ತು. ಹೀಗಾಗಿ, ಪ್ರಶಸ್ತಿ ಪುರಸ್ಕೃತರ ಹೆಸರನ್ನು ಕಾರ್ಯಕ್ರಮ ಮುನ್ನಾ ದಿನ ಪ್ರಕಟಿಸಲು ಬಿಬಿಎಂಪಿ ಮುಂದಾಗಿತ್ತು. ಮಂಗಳವಾರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಮೇಯರ್ ಪ್ರಕಟಿಸುವ ಮುನ್ನವೇ 45ಜನ ಸಾಧಕರ ಹೆಸರು ಬಹಿರಂಗವಾಗಿತ್ತು. ಇಷ್ಟೆಲ್ಲ ಗೌಪ್ಯತೆ ಕಾಪಾಡಿಕೊಂಡು ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆದರೂ, ಕೊನೆಗಳಿಗೆಯಲ್ಲಿ ಹೆಸರು ಬಹಿರಂಗವಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಕೊನೇ ಕ್ಷಣದಲ್ಲಿ ಲಾಬಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.