ಕೆಂಭಾವಿ: ಕುಡಿಯುವ ನೀರಿನ ತೀವ್ರ ಅಭಾವ ಇರುವ ಕೆಂಭಾವಿ ವಲಯದ ಯಕ್ತಾಪೂರ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಯಕ್ತಾಪೂರ ಗ್ರಾಪಂನ ಐನಾಪೂರ ಗ್ರಾಮಕ್ಕೆ ಮೊದಲು ಭೇಟಿ ನೀಡಿ ಪರಿಶೀಲಿಸಿದ ಅವರು, ಗ್ರಾಮದಲ್ಲಿ ಇರುವ ಶುದ್ಧ ನೀರಿನ ಘಟಕದ ಕುರಿತು ಮಾಹಿತಿ ಪಡೆದು ಸಾಧ್ಯವಾದಷ್ಟು ಈ ಘಟಕದಿಂದ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದಲ್ಲಿ ಎಲ್ಲ ಕೊಳವೆ ಬಾವಿಗಳು ಹಾಗೂ ತೆರೆದ ಬಾವಿಗಳು ಬತ್ತಿ ಹೋಗಿದ್ದು, ಇರುವ ಏಕೈಕ ಕೊಳವೆ ಬಾವಿಯಿಂದ ಶುದ್ಧ ನೀರಿನ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಬೇಸಿಗೆ ಹೆಚ್ಚಾದ ಹಿನ್ನೆಲೆಯಲ್ಲಿ ಇದ್ದ ಒಂದು ಕೊಳವೆ ಬಾವಿಯೂ ಬತ್ತುವ ಸಂಭವವಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ನಂತರ ಭೀಕರ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಪಂ ಕೇಂದ್ರ ಸ್ಥಾನವಾದ ಯಕ್ತಾಪೂರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಪುರಾತನವಾದ ತೆರೆದ ಬಾವಿ ವೀಕ್ಷಿಸಿ ಸಂಪೂರ್ಣ ಬತ್ತಿ ಹೋದ ಬಾವಿಯನ್ನು ಕಂಡು ಬೇಸಿಗೆ ಪ್ರಖರತೆ ಬಗ್ಗೆ ಉದ್ಗಾರ ತೆಗೆದರು. ಗ್ರಾಮದಲ್ಲಿರುವ ಎಲ್ಲ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಇಡೀ ಗ್ರಾಮಕ್ಕೆ ನೀರು ಒದಗಿಸುತ್ತಿದ್ದ ತೆರೆದ ಬಾವಿ ಕಳೆದ ಎರಡು ತಿಂಗಳಿನಿಂದ ಸಂಪೂರ್ಣ ಬತ್ತಿ ಹೋಗಿ ನೆಲ ಕಂಡಿದ್ದು, ಗ್ರಾಮಸ್ಥರು ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅನೇಕರು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡರು.
ಗ್ರಾಮಸ್ಥರ ಅಸಹಾಯಕತೆಗೆ ಸ್ಪಂದಿಸಿದ ಸಿಇಒ, ಗ್ರಾಮಸ್ಥರಿಗೆ ಯಾವುದೇ ರೀತಿಯ ನೀರಿನ ತೊಂದರೆಯಾಗದಂತೆ ಹೆಚ್ಚಿನ ಪ್ರಮಾಣದಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸುವಂತೆ ಗ್ರಾಪಂ ಪಿಡಿಒ ಸಿದ್ಧವೀರಪ್ಪ ಪೂಜಾರಿ ಅವರಿಗೆ ಸೂಚನೆ ನೀಡಿದರು. ನಂತರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.