ಕೆಂಭಾವಿ: ಈ ಭಾಗದ ರೈತರ ಬಹು ದಿನಗಳ ಬೇಡಿಕೆಯಾದ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆ ಹಂತಕ್ಕೆ ತಲುಪಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಗುತ್ತಿ ಬಸವೇಶ್ವರ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಲೋಕೊಪಯೋಗಿ ಇಲಾಖೆ 17 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಏತ ನೀರಾವರಿ ಯೋಜನೆ ಪ್ರಾರಂಭಿಸಲು ಸರ್ಕಾರದ ಮೇಲೆ ಹಲವು ದಿನಗಳಿಂದ ಒತ್ತಡ ಹೇರಿದ್ದರ ಪರಿಣಾಮ ಇಂದು ಈ ಹಂತಕ್ಕೆ ತಲುಪಿದ್ದು, ಸುರಪುರ ತಾಲೂಕಿನ ಗಡಿ ಗ್ರಾಮಗಳಿಗೆ ನೀರಾವರಿ ಯೋಜನೆ ಕಲ್ಪಸಿಕೊಡುವುದು ನಮ್ಮ ಉದ್ದೇಶ ಎಂದರು.
ಗುತ್ತಿ ಬಸವೇಶ್ವರದ 13 ಗ್ರಾಮಗಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಮುಂಬರುವ ದಿನಗಳಲ್ಲಿ ವಿಶೇಷ ಯೋಜನೆ ರೂಪಿಸಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ, ಶೌಚಾಲಯ, ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಕಾಚಾಪುರ, ಹೂವಿನಹಳ್ಳಿ, ತಳ್ಳಳ್ಳಿ, ಆಲಾØಳ, ಬೇವಿನಾಳ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ ಎಂದ ಅವರು, ಜನತೆ ಸಹಕಾರವಿದ್ದರೆ ಉತ್ತಮ ಕಾಮಗಾರಿಯಾಗಲು ಸಾಧ್ಯ ಎಂದು ಹೇಳಿದರು.
ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಮಾತನಾಡಿ, ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು. ಲೋಕೊಪಯೋಗಿ ಇಲಾಖೆ ಇಇ ಚನ್ನಬಸಪ್ಪ ಮೊಕಾಲೆ ಪ್ರಾಸ್ತಾವಿಕ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಬಸಮ್ಮ ದೊರೆ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ, ಗೌಡಪ್ಪಗೌಡ ನಂದರಗಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ವಾಮನರಾವ್ ದೇಶಪಾಂಡೆ, ಮಹಿಪಾಲರಡ್ಡಿ ಡಿಗ್ಗಾವಿ, ದೇವಪ್ಪ ಮ್ಯಾಗೇರಿ, ಶರಣಗೌಡ ಕಾಚಾಪುರ, ಸಂಜೀವರಾವ್ ಕುಲಕರ್ಣಿ, ಗುತ್ತಿಗೆದಾರರಾದ ಚಂದ್ರೇಗೌಡ ದೇವಣಗಾಂವ, ನಿಂಗನಗೌಡ ಮರಡ್ಡಿ ಇದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಚಿಂಚೋಳಿ ನಿರೂಪಿಸಿದರು.