Advertisement

ಕೆಂಭಾವಿ ತಾಲೂಕು ಕೇಂದ್ರವೆಂದು ಘೋಷಿಸಲು ಒತ್ತಾಯ

04:32 PM Jun 07, 2019 | Team Udayavani |

ಕೆಂಭಾವಿ: ಕೆಂಭಾವಿ ಪಟ್ಟಣವನ್ನು ತಾಲೂಕು ಕೇಂದ್ರ ಮಾಡಲು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸರ್ಕಾರ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ನಿಂಗನಗೌಡ ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಗುರುವಾರ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ತಾಲೂಕು ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹಲವು ಬಾರಿ ಈ ಕುರಿತು ಮನವಿ ಮಾಡಿದರೂ ಕಡೆಗಣಿಸಲಾಗಿದೆ. ಈಗ ಕುಮಾರಸ್ವಾಮಿ ಅವರಿಗೆ ತಾಲೂಕು ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೆಂಭಾವಿಗಿಂತಲೂ ಕಡಿಮೆ ಜನಸಂಖ್ಯೆ ಇರುವ ಗ್ರಾಮಗಳನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡಲಾಗಿದೆ. ಈ ಕ್ರಮ ಬೇಸರ ತರಿಸಿದೆ ಎಂದರು.

ಪುರಸಭೆ ಕೇಂದ್ರ ಸ್ಥಾನವಾದ ಪಟ್ಟಣದ ವ್ಯಾಪ್ತಿಯಲ್ಲಿ ಅನೇಕ ಸರ್ಕಾರಿ ಕಟ್ಟಡಗಳು, ಪೊಲೀಸ್‌ ಠಾಣೆಗಳು, 13 ಗ್ರಾಪಂ, 63 ಗ್ರಾಮಗಳು ಬರುತ್ತವೆ. ಸಕಲ ಸೌಲಭ್ಯ ಹೊಂದಿರುವ ಈ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿಸಲು ಸರ್ಕಾರ ಹಿಂದೇಟು ಹಾಕಿರುವ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಆಪಾದಿಸಿದರು.

ಹೋರಾಟ ಸಮಿತಿ ಸದಸ್ಯ ಶಂಕ್ರಣ್ಣ ವಣಕ್ಯಾಳ ಮಾತನಾಡಿ, 1983ರಲ್ಲಿ ಹುಂಡೇಕಾರ ಸಮಿತಿಯಲ್ಲಿ ಕೆಂಭಾವಿ ಪಟ್ಟಣ ತಾಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದೆ ಎಂದು ಶಿಫಾರಸು ಮಾಡಲಾಗಿದೆ. ಅದರಂತೆ ವಾಸುದೇವರಾವ್‌ ಸಮಿತಿಯೂ ಹಸಿರು ನಿಶಾನೆ ತೋರಿಸಿದೆ. ಇಷ್ಟಾದರೂ ಸರ್ಕಾರ ಕಡೆಗಣಿಸಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಅಧ್ಯಕ್ಷ ನಿಂಗನಗೌಡ ದೇಸಾಯಿ ನೇತೃತ್ವದಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕ ಗುರು ಪಾಟೀಲ ಶಿರವಾಳ, ಜೆಡಿಎಸ್‌ ಮುಖಂಡ ಅಮೀನರೆಡ್ಡಿ ಪಾಟೀಲ ಹಾಗೂ ಪಕ್ಷಾತೀತವಾಗಿ ಶೀಘ್ರವೇ ಬೆಂಗಳೂರಿಗೆ ನಿಯೋಗ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಲಿಂಗನಗೌಡ ಮಾಲಿಪಾಟೀಲ ಹೋರಾಟದ ರೂಪುರೇಷೆ ವಿವರಿಸಿದರು. ಹಿರೇಮಠದ ಚನ್ನಬಸವ ಶಿವಾಚಾರ್ಯರು, ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್‌ ಪಾಟೀಲ, ಭೀಮರಾಯ ಹೊಟ್ಟಿ, ಅಯ್ಯಪ್ಪಗೌಡ ವಂದಗನೂರ, ಖಾಜಾ ಪಟೇಲ್ ಕಾಚೂರ, ಮಷಾಕಸಾಬ್‌ ಸಾಸನೂರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಚಿಂಚೋಳಿ, ಜೆಡಿಎಸ್‌ ಮುಖಂಡ ಪ್ರಕಾಶ (ಗುಂಡು) ಪಾಟೀಲ, ಜೆಡಿಎಸ್‌ ಬ್ಲಾಕ್‌ ಅಧ್ಯಕ್ಷ ಅಕ್ಬರ್‌ ನಾಲವಾಡ, ಬಸವಂತ್ರಾಯ ಚೌಧರಿ, ಅಮ್ಮಣ್ಣ ಧರಿ, ವಿಜಯರೆಡ್ಡಿ ಪಾಟೀಲ ಹಾಗೂ ರಾಜಕೀಯ ನಾಯಕರು, ವಿವಿಧ ಸಂಘಟನೆಗಳ ಮುಖಂಡರು, ವಲಯದ ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next