ಕೆಂಭಾವಿ: ನಗರೋತ್ಥಾನ ಯೋಜನೆಯಡಿ ಪಟ್ಟಣದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಹಾಗೂ ಒಳ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗುತ್ತಿಗೆದಾರರ ಅವಸರದಿಂದ ಎಷ್ಟಿಮೇಶನ್ ಪ್ರಕಾರ ಕಾಮಗಾರಿ ಮಾಡಲಾಗುತ್ತಿಲ್ಲ. ಮೂವತ್ತು ಅಡಿ ರಸ್ತೆ ಬದಲಾಗಿ ಹಲವು ಕಡೆ ಕೇವಲ 24ರಿಂದ 25 ಅಡಿ ಮಾತ್ರ ರಸ್ತೆ ನಿರ್ಮಿಸಲಾಗುತ್ತಿದೆ ಹಾಗೂ ಒಳ ಚರಂಡಿ ಕಾಮಗಾರಿ ತಾಂತ್ರಿಕ ದೋಷದಿಂದ ಕೂಡಿದೆ ಎಂದು ದೂರನ್ನು ನೀಡಲಾಗಿತ್ತು.
ಸಾರ್ವಜನಿಕರ ದೂರನ್ನಾಧರಿಸಿ ಯೋಜನಾ ನಿರ್ದೇಶಕರು, ಎಇಇ, ಪುರಸಭೆ ಮುಖ್ಯಾಧಿಕಾರಿ, ಜೆಇ ಅವರ ತಂಡ ಟಿಪ್ಪು ಸುಲ್ತಾನ್ ವೃತ್ತದಿಂದ ಬಜಾರ ಹನುಮಾನ ವೃತ್ತದವರೆಗೆ ನಡೆಯುತ್ತಿರುವ ಸಿಸಿ ರಸ್ತೆಯ ಒಟ್ಟು ಅಳತೆಯನ್ನು ಪರಿಶೀಲಿಸಿದಾಗ ಹಲವು ಕಡೆ ದೋಷ ಕಂಡು ಬಂದಿತು. ಈ ಕುರಿತು ಕಾಮಗಾರಿಯನ್ನು ವೀಕ್ಷಿಸುತ್ತಿರುವ ಯೋಜನಾ ಸಮಾಲೋಚಕರು (ಪಿಎಮ್‌ಸಿ) ಅವರನ್ನು ಕೇಳಿದಾಗ ಅವರಿಂದ ಯಾವದೇ ಉತ್ತರ ಬರದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು.
ಕಾಮಗಾರಿ ವೀಕ್ಷಿಸಿದ ನಂತರ ಮಾತನಾಡಿದ ಎಇಇ ಬಂಡೆಪ್ಪ ಆಕಳ, ಕೆಲವು ಕಡೆ ಕಡಿಮೆ ಅಳತೆಯನ್ನು ತೆಗೆದುಕೊಂಡು ಚರಂಡಿಯನ್ನು ನಿರ್ಮಿಸಿದ್ದಾರೆ. ಈಗಾಗಲೇ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ಒಳ ಚರಂಡಿಯನ್ನು ಸಂಪೂರ್ಣ ಕೆಡವಿ 30 ಅಡಿಗೆ ಚರಂಡಿಯನ್ನು ಮತ್ತೆ ನಿರ್ಮಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಚರಂಡಿ ಮಾಡುವುದಕ್ಕಿಂತ ಮುಂಚೆ ಪುರಸಭೆ ಇಂಜಿನಿಯರ್ ಅವರನ್ನು ಸಂಪರ್ಕಿಸದೆ ಅವಸರದಲ್ಲಿ ಕಾಮಗಾರಿಯನ್ನು ಆರಂಭಿಸಿದಕ್ಕೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಅಂದಾಜು ಪತ್ರಿಕೆ ಪ್ರಕಾರ ಮತ್ತೂಮ್ಮೆ 30 ಅಡಿಗಳ ಒಳಗೆ ಇರುವ ಕಟ್ಟಡಗಳನ್ನು ತೆರವುಗೊಳಿಸಿ ಕಾಮಗಾರಿ ಆರಂಭಿಸಬೇಕು ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಿದ ನಂತರವೆ ಸಿಸಿ ರಸ್ತೆಯನ್ನು ನಿರ್ಮಿಸಬೇಕು ಎಂದು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಸೂಚಿಸಿದರು. ಯೋಜನಾ ನಿರ್ದೇಶಕ ಎನ್.ಆರ್. ಮಠ, ಮುಖ್ಯಾಧಿಕಾರಿ ಪ್ರಭು ದೊರೆ, ಜೆಇ ಭಾನುಪ್ರಕಾಶ, ಪುರಸಭೆ ಸದಸ್ಯರಾದ ಮುದಿಗೌಡ ಮಾಲಿಪಾಟೀಲ, ಮಲ್ಲಿನಾಥಗೌಡ ಪೊಲೀಸ್ ಪಾಟೀಲ, ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಡಿಗೇರ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಅಕ್ಬರ್ ನಾಲತವಾಡ ಇದ್ದರು.