Advertisement
ಮೇ 6 ರಂದು ರಾತ್ರಿ ಶ್ರೀ ದೇವಿಯ ವೈಭವದ ಬೀಡಿಗೆ ಮೆರವಣಿಗೆ, ಮೇ 7 ರಂದು ಬಲಿಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಆ ಬಳಿಕ ಭಕ್ತಿ ಲಹರಿ, ಸಂಜೆ 5 ಕ್ಕೆ ಭಜನಾ ಕಾರ್ಯಕ್ರಮ, ಬಂಟ್ವಾಡಿ ಶಾಲೆಯ “ಯಕ್ಷ ದೀವಿ’ಗೆ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮೇ 8 ರಂದು ಬೆಳಗ್ಗೆ ಬೇವು ಉಡಿಸುವುದು, ಸುತ್ತಕ್ಕಿ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಆ ಬಳಿಕ ಗಾನ ಲಹರಿ, ಸಂಜೆ ಭಜನೆ, ರಾತ್ರಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ಮೇ 9 ರಂದು ಬೆಳಗ್ಗೆ ತುಲಾಭಾರ ಸೇವೆ, ಮಧ್ಯಾಹ್ನ 3 ರಿಂದ ಬಲಿ ಕಾರ್ಯಕ್ರಮ, ಸಂಜೆ 7ಕ್ಕೆ ಭಜನೆ, ರಾತ್ರಿ 12 ಕ್ಕೆ ಮಾರಿ ಹೊಡೆಯುವುದು, ರಾತ್ರಿ 1 ಕ್ಕೆ ದೇವಿಯ ವೈಭವದ ಪುರ ಪ್ರವೇಶ ನೆರವೇರಲಿದೆ.
ಸಿರಸಿಯ ಮಾರಿಕಾಂಬೆಯಂತೆಯೇ ಇಲ್ಲಿನ ದೇವಿಯ ಮಹಿಮೆ ಅಗಾಧವಾದುದು. ತಿಂಗಳ ಮೊದಲೇ ಜಾತ್ರೆಯ ಸಿದ್ಧತೆ ಆರಂಭವಾಗುತ್ತದೆ. 21 ದಿನ ಮೊದಲು ಮರಕ್ಕೆ ಮಚ್ಚು ಹಾಕಲಾಗುತ್ತೆ. ವಾರದ ಬಳಿಕದ ಮಂಗಳವಾರ ಕೋಣಕ್ಕೆ ಧಾರೆ ಎರೆಯಲಾಗುತ್ತದೆ. ಮರುದಿನದಿಂದ ಗ್ರಾಮದ ಪ್ರತಿ ಮನೆಗೂ ಮೆರವಣಿಗೆ ಮೂಲಕ ಕೋಣ ಹೋಗುತ್ತೆ. ಸಿರಸಿ ಬಿಟ್ಟರೆ ಕರಾವಳಿ ಜಿಲ್ಲೆಗಳಲ್ಲಿ ಇಲ್ಲಿ ಮಾತ್ರ ಕೋಣದ ಮೆರವಣಿಗೆಯಿರುವುದು. ಕೋಣ ಬರುವ ದಿನ ಮನೆಯವರು ರಂಗೋಲಿ ಹಾಕಿ, ತಳಿರು ತೋರಣಗಳಿಂದ ಮನೆ ಪರಿಸರವನ್ನು ಸಿಂಗರಿಸುತ್ತಾರೆ. ಪುರಾತನ ಸಂಪ್ರದಾಯದಂತೆ ಪುರುಷರು ಡೋಲು, ಕೊಳಲು ವಾದನದ ಮೂಲಕ ಮುಂದೆ ಸಾಗಿದರೆ, ಮಹಿಳೆಯರು ಹೂ-ಕಾಯಿಯಿರುವ ಬುಟ್ಟಿ ಹೊತ್ತು ಸಾಗುತ್ತಾರೆ. ಮನೆಯಂಗಳಕ್ಕೆ ಬರುವ ಕೋಣನ ಕಾಲಿಗೆ ನೀರು ಹೊಯ್ದು, ಕೊರಳಿಗೆ ಹೂ – ಹಾರ ಹಾಕಿ, ತಲೆಗೆ ಎಣ್ಣೆ ಹಾಕಿ, ಕಣ್ಣಿನ ಕೆಳ, ಮೇಲ್ಭಾಗಕ್ಕೆ ಕಾಡಿಗೆ ಹಚ್ಚಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಳ್ಳುವುದಲ್ಲದೇ ಅಕ್ಕಿ, ಬಾಳೆಹಣ್ಣನ್ನು ನೀಡಲಾಗುತ್ತದೆ. ಊರಿನ ಅನಿಷ್ಟಗಳನ್ನು ಈ ಕೋಣ ನಿವಾರಿಸುತ್ತೆ ಅನ್ನುವ ಪ್ರತೀತಿಯಿದೆ.