ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಅಕ್ರಮ ಆರೋಪದಡಿ ಇ.ಡಿ. ಬಂಧನ ಪ್ರಕರಣದಲ್ಲಿ ಜಾಮೀನು ಕೋರಿದ ದಿಲ್ಲಿ ಸಿಎಂ ಕೇಜ್ರಿವಾಲ್ ಅರ್ಜಿ ವಿಚಾರಣೆ ಜೂ.19ರಂದು ನಡೆಯಲಿದೆ. ಇದೇ ವೇಳೆ, ಕೇಜ್ರಿವಾಲ್‌ರ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ವೈದ್ಯರ ತಂಡದ ಜತೆಗೆ ಆನ್‌ಲೈನ್ ಸಮಾಲೋಚನೆಯಲ್ಲಿ ಪತ್ನಿ ಸುನೀತಾ ಕೇಜ್ರಿವಾಲ್ ಸೇರಿಕೊಳ್ಳಲು ಆಕ್ಷೇಪ ಇದೆಯೇ ಎಂದು ಹೈಕೋರ್ಟ್ ತಿಹಾರ್ ಜೈಲಧಿಕಾರಿಗಳನ್ನು ಪ್ರಶ್ನಿಸಿದೆ.
ಕೇಜ್ರಿ ಆಪ್ತನಿಗೆ ಬೇಲ್ ವಿಚಾರಣೆ: ದಿಲ್ಲಿ ಪೊಲೀಸರಿಗೆ ನೋಟಿಸ್
ರಾಜ್ಯಸಭಾ ಸಂಸದೆ ನಾಯಕಿ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಕೇಜ್ರಿವಾಲ್ ಮಾಜಿ ಆಪ್ತ ಸಹಾಯಕ ಬಿಭವ್ ಕುಮಾರ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ವಿಚಾರದಲ್ಲಿ ದಿಲ್ಲಿ ಪೊಲೀಸರ ನಿಲುವು ಏನು ಎಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ಪ್ರಶ್ನೆ ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ಅಮಿತ್ ಶರ್ಮಾ ನೇತೃತ್ವದ ರಜಾಕಾಲದ ನ್ಯಾಯಪೀಠ, ಪ್ರಕರಣದ ಪ್ರಸ್ತುತ ಸ್ಥಿತಿಗತಿಯ ಕುರಿತಾಗಿ ವರದಿ ನೀಡಬೇಕು ಹಾಗೂ ಈ ಜಾಮೀನು ಅರ್ಜಿ ಕುರಿತು ತಮ್ಮ ನಿಲುವೇನು ಎಂದು ಸ್ಪಷ್ಟಪಡಿಸಬೇಕೆಂದು ಪೊಲೀಸರಿಗೆ ನೋಟಿಸ್ ನೀಡಿದೆ.