ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕೊವೀಡ್-19 ಈಗ ಹಳ್ಳಿಗಳಿಗೂ ವ್ಯಾಪಿಸಿದ್ದು, ಹಳ್ಳಿಗಳಿಗೆ ಪಿಡಿಒಗಳು ಜವಾಬ್ದಾರಿಯಾಗಿ ಕಾರ್ಯ ನಿರ್ವ ಹಿಸಬೇಕು. ನಗರದಲ್ಲಿರುವ ನೋಡಲ್ ಅಧಿಕಾರಿಗಳು ತಮ್ಮ ಕರ್ತವ್ಯದ ಜೊತೆಗೆ ಕೋವಿಡ್ ಜವಾಬ್ದಾರಿ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೋವಿಡ್ 19 ನಿಯಂತ್ರಣಕ್ಕಾಗಿ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಿಂದ ಬರುತ್ತಿರುವ ಪ್ರಯಾಣಿಕರಿಂದ ಸೋಂಕು ಹೆಚ್ಚಾಗಿ ಕಂಡುಬರುತ್ತಿದ್ದು, ಅವರ ಮೇಲೆ ನಿಗಾ ವಹಿಸಬೇಕೆಂದು ಸೂಚಿಸಿದರು. ಸಾರ್ವಜನಿಕರು ರಸ್ತೆ ಬದಿ, ಅಂಗಡಿ ಮಾಲೀಕರು, ಹೋಟೆಲ್‌ಗಳಲ್ಲಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸುವಂತೆ ಆದೇಶಿಸಿದರು.
ಗರ್ಭಿಣಿಯರಿಗೆ, ಕ್ಯಾನ್ಸರ್ ರೋಗಿಗಳು ಸೇರಿದಂತೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮುಂಜಾಗ್ರತಾ ಕ್ರಮವಾಗಿ ಕೋವಿಡ್ 19 ಪರೀಕ್ಷೆ ಮಾಡಿಸಬೇಕೆಂದರು. ಸಿಇಒ ಬಿ.ಫೌಝೀಯಾ ತರುನ್ನುಮ್ ಮಾತನಾಡಿ, ಎಲ್ಲಾ ಅಧಿಕಾರಿಗಳು ಕೋವಿಡ್ 19 ನಿಯಂತ್ರಿಸಲು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒಗಳು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದು, ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಅಂಗಡಿಯ ಮುಂದೆ ಕೋವಿಡ್ 19 ಬಗ್ಗೆ ಜಾಗೃತಿ ಮೂಡಿಸುವ ಬ್ಯಾನರ್ ಕಡ್ಡಾಯವಾಗಿ ಅಳವಡಿಸಬೇಕು.
ಅಂತರ್ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವಂತಹ ಜನರ ಮೇಲೆ ನಿಗಾ ವಹಿಸಬೇಕು ಎಂದರು. ಅಪರ ಜಿಲ್ಲಾಧಿಕಾರಿ ಆರತಿ, ನಗರಾಭಿವೃದಿಟಛಿ ಪ್ರಾಧಿಕಾರದ ಆಯುಕ್ತ ಭಾಸ್ಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ.ಎಂ.ಯೋಗೇಶ್ ಗೌಡ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಯಲ್ಲಾ ರಮೇಶ್ ಬಾಬು, ಡೀಸಿ ಕಚೇರಿ ಸಹಾಯಕ ರವಿ ವೈ, ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.