ಬಾದಾಮಿ: ಕೋವಿಡ್ 19 ವೈರಸ್ ಹರಡದಂತೆ ಮುಂಜಾಗೃತಾ ಕ್ರಮವಾಗಿ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಸ್ವಕ್ಷೇತ್ರದ ತಾಲೂಕಾಮಟ್ಟದ ಅಧಿಕಾರಿಗಳೊಂದಿಗೆ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಶನಿವಾರ ವಿಡಿಯೋ ಕಾನ್ಫೆರೆನ್ಸ್ ನಡೆಸಿ ಮಾಹಿತಿ ಪಡೆದರು.
ಕೋವಿಡ್ 19 ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಲಹೆ ಸೂಚನೆ ನೀಡಿದರು. ಗ್ರಾಮೀಣ ಭಾಗಗಳಲ್ಲಿ ಗ್ರಾಪಂ ವತಿಯಿಂದ ಕೂಲಿ ಕಾರ್ಮಿಕರಿಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸುವುದು, ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ, ತಾಲೂಕಿನ ಮತಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನಚ್ಚರಿಕೆ ತೆಗೆದುಕೊಳ್ಳಬೇಕು, ಕಾರ್ಮಿಕರಿಗೆ ಅಗತ್ಯ ನೆರವು, ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು.
ವಲಸೆ ಹೋಗಿದ್ದ ಕಾರ್ಮಿಕರು ಸ್ವಕ್ಷೇತ್ರಕ್ಕೆ ಬಂದಿರುವ ಸೌಲಭ್ಯಗಳ ಬಗ್ಗೆ ವಿವರಣೆ ಪಡೆದರು. ಗುಳೇದಗುಡ್ಡ, ಕೆರೂರ, ಬಾದಾಮಿ ಪಟ್ಟಣದ ಸಾರ್ವಜನಿಕರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ತಾಲೂಕಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಸುಹಾಸ ಇಂಗಳೆ ಮಾಹಿತಿ ನೀಡಿ, ಈಗಾಗಲೇ ಕೋವಿಡ್ 19 ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಹೊರ ರಾಜ್ಯದಿಂದ ಬಂದ 893 ಜನರನ್ನು ಮತ್ತು ಹೊರ ಜಿಲ್ಲೆಯಿಂದ ಬಂದ 37 ಜನರನ್ನು ಸೇರಿದಂತೆ ಎಲ್ಲರನ್ನು ಪರೀಕ್ಷೆ ಮಾಡಿಸಲಾಗಿದೆ. ಯಾರಿಗೂ ಕೊರೊನಾ ಸೋಂಕು ಇಲ್ಲ ಇವರೆಲ್ಲರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ 43 ಜನರನ್ನು ಜಾಲಿಹಾಳ ವಸತಿ ನಿಲಯದಲ್ಲಿ ಮತ್ತು ಗುಳೇದಗುಡ್ಡದಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ತಾಲೂಕಿನಲ್ಲಿ ಈಗಾಗಲೇ ಅಗತ್ಯ ಮಾಸ್ಕ್, 7 ವೆಂಟಿಲೇಟರ್, ಸ್ಯಾನಿಟೈಸರ್ ಲಭ್ಯಇವೆ. ತಾಲೂಕಿನ 70324 ಬಿಪಿಎಲ್, ಎಎಪಿ ಕುಟುಂಬಗಳಿಗೆ ಎರಡು ತಿಂಗಳು ಪಡಿತರ ವಿತರಣೆ ಮಾಡಬೇಕಾಗಿದ್ದು, ಇದರಲ್ಲಿ ಶೇ70 ರಷ್ಟು ಕುಟುಂಬಗಳಿಗೆ ವಿತರಣೆ ಮಾಡಲಾಗಿದೆ.
322 ಕುಟುಂಬಗಳಿಗೆ ತಾತ್ಕಾಲಿಕ ಪಡಿತರ ನೀಡಿ ಅಗತ್ಯ ಪಡಿತರ ವಿತರಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಹಾರಾಷ್ಟ್ರದಿಂದ ವಲಸೆ ಬಂದಿರುವ 26 ಅಲೆಮಾರಿ ಕುಟುಂಬಗಳಿಗೆ ಪಡಿತರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ವಿಡಿಯೋ ಕಾನ್ಪ ರೆನ್ಸ್‌ನಲ್ಲಿ ತಹಶೀಲ್ದಾರ್ ಸುಹಾಸ ಇಂಗಳೆ, ತಾಪಂ ಇಒ ಡಾ| ಪುನೀತ, ಪುರಸಭೆ ಮುಖ್ಯಾಧಿಕಾರಿ ಜ್ಯೋತಿಗಿರೀಶ, ಸಿಪಿಐ ರಮೇಶ ಹಾನಾಪುರ, ಪಿಎಸ್‌ಐ ಪ್ರಕಾಶ ಬಣಕಾರ ಸೇರಿದಂತೆ ತಾಲೂಕಾಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.