Advertisement

Wayanad landslides ಪಕ್ಷ ರಾಜಕೀಯ ಬದಿಗಿರಿಸಿ ಸಂತ್ರಸ್ತರ ರಕ್ಷಣೆಗಿರಲಿ ಆದ್ಯತೆ

11:26 PM Jul 31, 2024 | Team Udayavani |

ಕೇರಳದ ವಯನಾಡ್‌ ಜಿಲ್ಲೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಸರಣಿ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಸುರಿಯುತ್ತಿರುವ ಮಳೆಯ ನಡುವೆಯೇ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ಈ ದಿಸೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ರಕ್ಷಣ ತಂಡಗಳು ಕಾರ್ಯನಿರತವಾಗಿದ್ದರೆ, ಭಾರತೀಯ ಸೇನಾ ಪಡೆಗಳು ಕೂಡ ಈ ಕಾರ್ಯಾಚರಣೆಯಲ್ಲಿ ಕೈಜೋಡಿಸಿವೆ. ಇದರ ನಡುವೆಯೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ನೈಸರ್ಗಿಕ ವಿಪತ್ತನ್ನು ಮುಂದಿಟ್ಟು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿಕೊಂಡಿರುವುದು ಮಾತ್ರ ವಿಪರ್ಯಾಸ.

Advertisement

ವಯನಾಡ್‌ನ‌ಲ್ಲಿ ಗುಡ್ಡ ಕುಸಿತ ಸಂಭವಿಸುವ ವಾರಕ್ಕೂ ಮುನ್ನವೇ ಕೇರಳಕ್ಕೆ ಭಾರೀ ಮಳೆ ಮತ್ತು ಪ್ರಾಕೃತಿಕ ವಿಪತ್ತು ಸಂಭವಿಸುವ ಸಾಧ್ಯತೆಯ ಬಗೆಗೆ ಎಚ್ಚರಿಕೆ ನೀಡಲಾಗಿತ್ತು. ಅಷ್ಟು ಮಾತ್ರವಲ್ಲದೆ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರಕಾರಕ್ಕೆ ನೆರವಾಗುವ ದೃಷ್ಟಿಯಿಂದ 8 ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಿಕೊಡಲಾಗಿತ್ತು.

ಆದರೆ ರಾಜ್ಯ ಸರಕಾರ ಇತ್ತ ಗಮನ ಹರಿಸದೆ ವಿಪತ್ತು ಸಂಭಾವ್ಯ ಪ್ರದೇಶಗಳಲ್ಲಿ ಮುಂಜಾಗ್ರತ ಕ್ರಮಗಳನ್ನಾಗಲಿ, ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಗೊಳಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ಕೇರಳ ಸರಕಾರದ ವೈಫ‌ಲ್ಯದತ್ತ ಬೆಟ್ಟು ಮಾಡಿದ್ದರು.

ಇತ್ತ ತಿರುವನಂತಪುರದಲ್ಲಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಕೇಂದ್ರ ಗೃಹ ಸಚಿವರ ಈ ಹೇಳಿಕೆಯನ್ನು ತಳ್ಳಿಹಾಕಿದರಲ್ಲದೆ, ದುರಂತ ನಡೆದ ದಿನದಂದು ಹವಾಮಾನ ಇಲಾಖೆ ವಯನಾಡ್‌ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿತ್ತು. ಅಷ್ಟು ಮಾತ್ರವಲ್ಲದೆ ರಾಜ್ಯದಲ್ಲಿ ಪ್ರವಾಹ, ಭೂಕುಸಿತ ದಂತಹ ಯಾವುದೇ ವಿಪತ್ತು ಸಂಭವಿಸುವ ಬಗೆಗೆ ರಾಜ್ಯ ಸರಕಾರಕ್ಕೆ ಯಾವುದೇ ಮುನ್ಸೂಚನೆಯನ್ನು ನೀಡಿರಲಿಲ್ಲ. ರಾಜ್ಯದಲ್ಲಿ ಕಳೆದೆರಡು ವಾರಗಳಿಂದೀಚೆಗೆ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ತಂಡ ಗಳನ್ನು ರಾಜ್ಯಕ್ಕೆ ಕಳುಹಿಸಿಕೊಡಲಾಗಿತ್ತೇ ವಿನಾ ಈ ತಂಡಗಳಿಗೂ ಭೂಕುಸಿತ ದಂತಹ ಅವಘಡಗಳು ಸಂಭವಿಸುವ ಬಗೆಗೆ ಯಾವುದೇ ಮಾಹಿತಿ ನೀಡಲಾಗಿ ರಲಿಲ್ಲ ಎನ್ನುವ ಮೂಲಕ ಕೇಂದ್ರ ಗೃಹ ಸಚಿವರಿಗೆ ತಿರುಗೇಟು ನೀಡಿದ್ದಾರೆ.

ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಅದರ ಪರಿಣಾಮ ಮತ್ತು ಹಾನಿ ಯನ್ನು ಆದಷ್ಟು ಕನಿಷ್ಠಗೊಳಿಸುವ ನಿಟ್ಟಿನಲ್ಲಿ ಸರಕಾರಗಳು ಪ್ರಯತ್ನಶೀಲ ವಾಗಬೇಕೆ ವಿನಾ ರಾಜಕೀಯ ಪ್ರತಿಷ್ಠೆಯನ್ನು ಮುಂದಿಟ್ಟು ಕೆಸರೆರಚಾಟದಲ್ಲಿ ತೊಡಗಿ ಕೊಳ್ಳುವುದು ಸಲ್ಲದು. ಇದು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೂ ಶೋಭೆಯಲ್ಲ.

Advertisement

ಕಳೆದ ಕೆಲವು ವರ್ಷಗಳಿಂದೀಚೆಗೆ ಪ್ರವಾಹ, ಚಂಡಮಾರುತ, ಸುಂಟರಗಾಳಿ  ಯಂತಹ ಪ್ರಾಕೃತಿಕ ವಿಕೋಪಗಳ ಕುರಿತಂತೆ ಸಾಕಷ್ಟು ಮುಂಚಿತವಾಗಿ ಮುನ್ಸೂಚನೆ ನೀಡುವ ವ್ಯವಸ್ಥೆ ದೇಶದಲ್ಲಿ ಜಾರಿಯಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಒಡಿಶಾ, ಗುಜರಾತ್‌, ಆಂಧ್ರಪ್ರದೇಶ ಕರಾವಳಿಗೆ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಕೇಂದ್ರದ ಈ ಮುನ್ಸೂಚನೆ ವ್ಯವಸ್ಥೆ ಜನರ ಪ್ರಾಣ ಮತ್ತು ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಸಂರಕ್ಷಿಸುವಲ್ಲಿ ನೆರವಾಗಿದೆ. ಈ ಸಂದರ್ಭಗಳಲ್ಲಿ ಆಯಾ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಪ್ರಾಕೃತಿಕ ವಿಪತ್ತಿನ ಸವಾಲನ್ನು ದಿಟ್ಟವಾಗಿ ಎದುರಿಸುವಲ್ಲಿ ಸಮರ್ಥವಾಗಿದ್ದವು.

ಈ ಕಾರ್ಯಾಚರಣೆಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದವು. ಸದ್ಯ ಏನಿದ್ದರೂ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿಯತ್ತ ಸರಕಾರಗಳ ಲಕ್ಷ್ಯವಿರಬೇಕು. ಆ ಬಳಿಕ ಭವಿಷ್ಯದಲ್ಲಿ ಇಂತಹ ದುರ್ಘ‌ಟನೆಗಳು ನಡೆಯದಂತಿರಲು ಒಂದು ಸ್ಪಷ್ಟ ಕಾರ್ಯಯೋಜನೆಯ ರೂಪಣೆಯತ್ತ ಸರಕಾರ ಗಂಭೀರ ಚಿಂತನೆ ನಡೆಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next