Advertisement

ಟಿವಿ, ಮೊಬೈಲ್‌ಗ‌ಳಿಂದ ಮಕ್ಕಳನ್ನ ದೂರವಿಡಿ

10:00 PM Dec 08, 2019 | Team Udayavani |

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮಕ್ಕಳ ಕೈಗೆ ಸುಲಭವಾಗಿ ಮೊಬೈಲ್‌ಗ‌ಳು ಸಿಗುತ್ತಿರುವ ಪರಿಣಾಮ ಮಕ್ಕಳಲ್ಲಿ ಸೃಜನಾತ್ಮಕ ಚಟುವಟಿಕೆಗಳು ಕ್ಷೀಣಿಸುತ್ತಿವೆ. ಇದರಿಂದ ಮಕ್ಕಳ ಪ್ರತಿಭೆಗೂ ಕುಂದು ಉಂಟಾಗುತ್ತಿದ್ದು, ಪೋಷಕರು ಮಕ್ಕಳನ್ನು ಟಿವಿ ಹಾಗೂ ಮೊಬೈಲ್‌ಗ‌ಳಿಂದ ದೂರ ಇಡಬೇಕೆಂದು ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್‌ ಪೋಷಕರಿಗೆ ಸಲಹೆ ನೀಡಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಬಾಲ ವೇದಿಕೆ-2019-20ರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾಪಕ ಶಕ್ತಿ ಕಡಿಮೆ: ದಿನದ ಬಹುತೇಕ ಸಮಯ ಮೊಬೈಲ್‌ ಬಳಕೆ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿಯೇ ಮುಳುಗುತ್ತಿರುವ ಪರಿಣಾಮ ವಿದ್ಯಾರ್ಥಿಗಳಲ್ಲಿ ಚಿಂತನೆಯ ಸಾಮರ್ಥ್ಯ ಕುಸಿಯುತ್ತಿದೆ. ಎಲ್ಲದಕ್ಕೂ ಮೊಬೈಲ್‌ ಅವಲಂಬಿನೆಯಿಂದ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆ ಎಂದರು.

ಸುಸಂಸ್ಕೃತರಾಗಿ ಬೆಳೆಸಿ: ಮಕ್ಕಳು ಸೃಜನಾತ್ಮಕವಾಗಿ ಬೆಳೆಯಬೇಕಾದರೆ ಸಾಂಸ್ಕೃತಿಕವಾಗಿ ಮಕ್ಕಳನ್ನು ಬೆಳೆಸಬೇಕು. ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಸುಸಂಸ್ಕೃತರಾಗಿ ಬೆಳೆಸಿದಾಗ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ಇಲ್ಲದಿದ್ದರೆ ಮಕ್ಕಳು ಸಮಾಜಕ್ಕೆ ಹೊರೆಯಾಗಿ ಬೆಳೆಯುತಾರೆ ಎಂದರು.

ಪ್ರತಿಭೆ ಗುರುತಿಸಿ: ಬಾಲ ಭವನ ಕಾರ್ಯಕ್ರಮಗಳು ಇನ್ನಷ್ಟು ರಚನಾತ್ಮಕವಾಗಿ ನಡೆಯಬೇಕೆಂದ ಅವರು, ಮಕ್ಕಳಲ್ಲಿ ಇಂತಹ ಕಾರ್ಯಕ್ರಮಗಳು ಸ್ಪರ್ಧಾ ಮನೋಭಾವನೆ ಮೂಡಿಸುತ್ತವೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳ ಪ್ರತಿಭೆಯನ್ನು ತೀರ್ಪುಗಾರರು ಪ್ರಾಮಾಣಿಕವಾಗಿ ಗುರುತಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

Advertisement

ಒಂದೇ ವೇದಿಕೆಯಲ್ಲಿ ಭಾಗಿ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಜಿ.ಲಕ್ಷ್ಮೀದೇವಮ್ಮ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಪ್ರತಿ ವರ್ಷ ಬಾಲ ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ಮೂಲಕ 5 ರಿಂದ 16 ವರ್ಷದೊಳಗಿನ ಮಕ್ಕಳನ್ನು ಒಂದೇ ವೇದಿಕೆಗೆ ಕರೆ ತಂದು ಪ್ರತಿಭೆ ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದು, ಅಂತಹವರನ್ನು ಗುರುತಿಸಿ ಬಾಲ ವೇದಿಕೆ ಕಾರ್ಯಕ್ರಮದ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಮಕ್ಕಳನ್ನು ಸುಸಂಸ್ಕೃತ ಹಾಗೂ ಸಾಂಸ್ಕೃತಿಕವಾಗಿ ಬೆಳೆಸಿದಾಗ ಮಾತ್ರ ಅವರು ತಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳಲು ಸಾಧ್ಯ. ಈ ದಿಸೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಲ ಭವನ ಸೊಸೈಟಿ ಸಹಯೋಗದೊಂದಿಗೆ ಮಕ್ಕಳ ಪ್ರತಿಭೆ ಅನ್ವೇಷಣೆ ಮೂಲಕ ಉತ್ತಮ ಪ್ರದರ್ಶನ ನೀಡುವ ಮಕ್ಕಳನ್ನು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಇಲಾಖೆ ಕ್ರಮ ವಹಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಮ್ಮದ್‌ ಉಸ್ಮಾನ್‌, ಗೌರಿಬಿದನೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆಂಪ ಹನುಮಯ್ಯ, ಗುಡಿಬಂಡೆ ಶಿಶು ಅಭಿವೃದ್ಧಿ ಅಧಿಕಾರಿ ವೆಂಕಟೇಗೌಡ, ಬಾಲಕಿಯರ ಬಾಲ ಮಂದಿರ ಅಧೀಕ್ಷಕಿ ತೇಜಸ್ವಿನಿ, ಗುರುಕಲಾ ಆಶ್ರಮದ ನಾರಾಯಣಸ್ವಾಮಿ, ಇಲಾಖೆಯ ಹಿರಿಯ ಮೇಲ್ವಿಚಾರಕಿ ವೆಂಕಟನಾರಾಯಣಮ್ಮ, ಸರೋಜಮ್ಮ, ಮಾತೃ ವಂದನಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ರಮೇಶ್‌, ಬಾಲ ಭವನ ಕಾರ್ಯಕ್ರಮದ ಸಂಯೋಜಕ ಕೆ.ಮಂಜುನಾಥ, ಕಾನೂನು ಪರಿವೀಕ್ಷಕರಾದ ರಾಮೇಗೌಡ ಉಪಸ್ಥಿತರಿದ್ದರು.

ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ: ಬಾಲ ವೇದಿಕೆ-2019-20ರ ಕಾರ್ಯಕ್ರಮದ ಭಾಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲ ಭವನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭರತನಾಟ್ಯ, ವೈಯಕ್ತಿಕ ವಿಭಾಗದಲ್ಲಿ ನೃತ್ಯ, ಸರ್ಕಾರಿ ಶಾಲಾ ಮಕ್ಕಳಿಂದ ಕೋಲಾಟ, ಯಶ್ವಂತ್‌ ಸ್ಕೂಲ್‌ ನೃತ್ಯ ಶಾಲಾ ಮಕ್ಕಳಿಂದ ಸಾಮೂಹಿಕ ನೃತ್ಯ, ಗುರುಕುಲ ಆಶ್ರಮದ ಮಕ್ಕಳಿಂದ ಸಾಮೂಹಿಕ ಹಾಗೂ ವೈಯಕ್ತಿಕ ವಿಭಾಗದಲ್ಲಿ ನೃತ್ಯ, ಕರಾಟೆ, ಮ್ಯಾಜಿಕ್‌ ಮತ್ತಿತರ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗಿ ಓದು, ಬರಹದ ಜೊತೆಗೆ ನಮ್ಮ ದೇಶಿಯ ಸಾಂಸ್ಕೃತಿಕ ಕಲೆಗಳ ಬಗ್ಗೆಯು ಆಸಕ್ತಿ ಕಡಿಮೆ ಆಗುತ್ತಿದೆ. ವಿದ್ಯಾರ್ಥಿಗಳು ದೇಶಿಯ ಕಲೆಗಳ ಬಗ್ಗೆ ಆಸಕ್ತಿ ಹೊಂದಿ ಸಾಂಸ್ಕೃತಿಕವಾಗಿ ಬೆಳೆದಾಗ ಬೌದ್ಧಿಕ ವಿಕಸನ ಹೆಚ್ಚಾಗುತ್ತದೆ. ಕಲಿಕೆಯಲ್ಲೂ ಮುಂಚೂಣಿಗೆ ಬರಲು ಸಹಾಯಕವಾಗುತ್ತದೆ.
-ಬಿ.ಫೌಝೀಯಾ ತರುನ್ನುಮ್‌, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next