ದಾವಣಗೆರೆ: ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಯುವ ಜನಾಂಗ, ಮಾಧ್ಯಮದವರು ಹೀಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಮನವಿ ಮಾಡಿದ್ದಾರೆ. ಭಾನುವಾರ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಐರ್.. ಕಿರು ಚಲನಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಕಾನೂನಿನ ಬಗ್ಗೆ ಮಾಹಿತಿ ಇರಲಿಲ್ಲ. ಗೊತ್ತಿರಲಿಲ್ಲ ಎನ್ನುವುದು ಕಾನೂನು ಕ್ಷಮಿಸುವುದೇ ಇಲ್ಲ. ಹಾಗಾಗಿ ಎಲ್ಲರೂ ಕಾನೂನು ಬಗ್ಗೆ ಅರಿವು ಹೊಂದಿರಬೇಕು ಎಂದು ತಿಳಿಸಿದರು. ಪ್ರಸ್ತುತ ವಾತಾವರಣದಲ್ಲಿ ದೃಶ್ಯ ಮಾಧ್ಯಮ ಅತ್ಯಂತ ಪ್ರಭಾವಿಯಾಗಿದೆ. ದೃಶ್ಯ ಮಾಧ್ಯಮ ಅಪರಾಧ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಬೇಕು.
ಕಾನೂನು ಅರಿವಿನ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಪ್ರತಿಯೊಬ್ಬರು ಮೂಲಭೂತ ಸೌಲಭ್ಯ, ಸೌಕರ್ಯಗಳ ಬಗ್ಗೆ ಮಾತನಾಡುವಂತೆಯೇ ತಮ್ಮ ಪಾಲಿನ ಆದ್ಯ ಜವಾಬ್ದಾರಿ, ಕರ್ತವ್ಯದ ಬಗ್ಗೆ ಗಮನ ನೀಡಬೇಕು. ಸಮಾಜದ ಸಮಗ್ರ ಒಳಿತಿಗಾಗಿ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ತಿಳಿಸಿದರು.
ಈಚೆಗೆ ಯುವ ಜನಾಂಗ ಐಷಾರಾಮಿ, ಮೋಜಿನ ಜೀವನ ನಡೆಸುವ ವ್ಯಾಮೋಹದಿಂದಾಗಿ ಗೊತ್ತೋ ಗೊತ್ತಿಲ್ಲದೆಯೋ ಅಪರಾಧ ಕೃತ್ಯಗಳಲ್ಲಿ ಕಾಣಸಿಗುತ್ತಿದ್ದಾರೆ. ವಿದ್ಯಾರ್ಥಿಗಳು ಇದರಿಂದ ಹೊರತಾಗಿಲ್ಲ ಎಂಬುದು ಕೆಲವಾರು ಪ್ರಕರಣಗಳಲ್ಲಿ ಕಂಡು ಬಂದಿದೆ.
ಎಂಥದ್ದೇ ಸಂದರ್ಭದಲ್ಲಿ ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಿ ಅಪರಾಧ ಕೃತ್ಯದತ್ತ ಮುಖಮಾಡದಂತೆ ಜಾಗೃತಿಯನ್ನು ಐರ್… ಕಿರು ಚಿತ್ರದ ಮೂಲಕ ಮಾಡಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್ ಮಾತನಾಡಿ, ದಾವಣಗೆರೆಯವರೇ ಆದ ರಕ್ಷಿತ್ ಕಟ್ಟಿ, ಸುಬ್ರಹ್ಮಣ್ಯ ತಂಡದವರು ಕಿರು ಚಿತ್ರದ ಮೂಲಕ ಯುವ ಜನಾಂಗ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿರುವುದು ಸಂತೋಷದ ವಿಚಾರ.
ಯುವಕರು ಒಳ್ಳೆಯ ಸಮಾಜದ ನಿರ್ಮಾಣಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು. ಡಾ| ರಾಜ್‌ಕುಮಾರ್ ಅಭಿಮಾನಿಗಳ ಬಳಗದ ಅಧ್ಯಕ್ಷ ವಿಶ್ವನಾಥ್, ವರದಿಗಾರರ ಕೂಟದ ಅಧ್ಯಕ್ಷ ಬಸವರಾಜ್ ದೊಡ್ಮನಿ, ರಕ್ಷಿತ್ ಕಟ್ಟಿ, ಸುಬ್ರಹ್ಮಣ್ಯ, ಎಂ.ಜಿ. ಶ್ರೀಕಾಂತ್, ನೂತನ ಕಾಲೇಜು ಪ್ರಾಚಾರ್ಯ ಪ್ರೊ. ಬಸವರಾಜ್, ವಾಸುದೇವ ಉಪಾಧ್ಯಾಯ, ಸೌಮ್ಯ ಇತರರು ಇದ್ದರು.