ಚಾಮರಾಜನಗರ: ರೈತರು ತೆಂಗು ಬೆಳೆಯನ್ನು ವೈಜ್ಞಾನಿಕ ಮಾದರಿಯಲ್ಲಿ ಸಂರಕ್ಷಣೆ ಮಾಡಿಕೊಳ್ಳುವ ಜೊತೆಗೆ ತೆಂಗಿಗೆ ತಗಲುವ ರೋಗಗಳ ಬಗ್ಗೆ ಜಾಗೃತಿ ವಹಿಸಿ, ತೆಂಗು ಅಭಿವೃದ್ಧಿ ಮಂಡಲಿಯಿಂದ ದೊರೆಯವ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ.ಎಂ.ಮಹೇಶ್‌ಪ್ರಭು ಹೇಳಿದರು.
ತಾಲೂಕಿನ ಕಾಳನಹುಂಡಿ ಸಮೀಪದ ಮುಣಚನಹಳ್ಳಿಯಲ್ಲಿರುವ ತೆಂಗು ಸಂಸ್ಕರಣ ಘಟಕದಲ್ಲಿ ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘ ಹಾಗು ತೆಂಗು ಅಭಿವೃದ್ಧಿ ಮಂಡಳಿಯ ನೆರವಿನೊಂದಿಗೆ ನಡೆದ ತೆಂಗು ಪ್ರಾತ್ಯಕ್ಷಿಕ ತಾಕು ಯೋಜನೆಯ ಸದಸ್ಯ ರೈತರ ಸಭೆಯಲ್ಲಿ ಮಾತನಾಡಿದರು.
ತೆಂಗು ಬೆಳೆಗಾರರು ಮರಗಳನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಹೆಚ್ಚಿನ ಇಳುವರಿ ಪಡೆದುಕೊಳ್ಳಲು ಅನುಕೂಲವಾಗುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ತೆಂಗಿನ ಮರಕ್ಕೆ ಅಗತ್ಯವಾದಷ್ಟು ನೀರು ಪೂರೈಕೆ ಮಾಡಬೇಕು. ಅಲ್ಲದೇ ತಾಕುಗಳನ್ನು ಆಗಾಗ ಪರೀಕ್ಷೆ ಮಾಡಿಕೊಳ್ಳುವ ಜೊತೆಗೆ ತೆಂಗು ಅಭಿವೃದ್ಧಿ ಮಂಡಳಿಯು ನೀಡುವ ಸವಲತ್ತುಗಳು ಹಾಗು ಪರಿಕರಗಳನ್ನು ಪಡೆದು ಆರ್ಥಿಕ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ತೆಂಗು ಅಭಿವೃದ್ಧಿ ಮಂಡಲಿಯಿಂದ 94.33 ಹೆಕ್ಟರ್ ಪ್ರದೇಶದಲ್ಲಿ ತೆಂಗು ಅಭಿವೃದ್ಧಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಆಯ್ದ ರೈತರಿಗೆ ಮೊದಲ ಹಂತದಲ್ಲಿ ಪರಿಕರಗಳನ್ನು ವಿತರಣೆ ಮಾಡಲಾಗಿತ್ತು. ಈ ವರ್ಷ 2ನೇ ಹಂತದ ಪರಿಕರವನ್ನು ವಿತರಣೆ ಮಾಡಲಾಗುತ್ತಿದೆ. ಈ ಪರಿಕರಗಳನ್ನು ತೆಂಗಿನ ಮರಗಳಿಗೆ ಬಳಕೆ ಮಾಡಿ ಹೆಚ್ಚಿನ ಇಳುವರಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತೆಂಗು ಅಭಿವೃದ್ಧಿ ಮಂಡಲಿ ಹಿರಿಯ ಕ್ಷೇತ್ರಾಧಿಕಾರಿ ಕೆ.ಎಂ.ವಿಜಯನ್, ಎಂಟಿಎಸ್‌ನ ಎನ್.ಮಂಜುನಾಥ ರೈತರಿಗೆ ಪರಿಕರಗಳನ್ನು ವಿತರಣೆ ಮಾಡಿದರು. ತೆಂಗಿನ ಮರಗಳಿಗೆ ಪರಿಕರವನ್ನು ಹಾಕುವ ವಿಧಾನ ಕುರಿತು ಪ್ರಾತ್ಯಕ್ಷಿತೆಯನ್ನು ನೀಡಿದರು. ಸಂಘದ ನಿರ್ದೇಶಕರಾದ ಎಂ.ಎಸ್. ರವಿಶಂಕರ್, ವೆಂಕಟಶೇಷಯ್ಯ, ಮಹದೇವಶೆಟ್ಟಿ, ಶಿವಾನಂದ, ಎಚ್.ಎನ್. ಸ್ವಾಮಿ, ಸದಸ್ಯರಾದ ರೇಚಣ್ಣ, ಜಿ.ಎಂ.ಸುಬ್ಬಣ್ಣ, ರಾಜೇಶ್, ನಾಗೇಶ್, ಎನ್.ಎಂ.ಮಹೇಶ್ ಇತರರು ಇದ್ದರು.