Advertisement

ನೀರಿನ ಸಮಸ್ಯೆ ಉಲ್ಬಂಣಿಸದಂತೆ ಜಾಗೃತಿ ವಹಿಸಿ: ಡಿಸಿ ಎಚ್ಚರಿಕೆ

04:10 PM Apr 02, 2019 | Team Udayavani |

ಸುರಪುರ: ಅಲ್ರಿ ಬರೀ ಪೈಪ್‌ಲೈನ್‌ ಮಾಡೋಕೆ ಎರಡೆರಡು ತಿಂಗಳು ಸಮಯ ತೆಗೆದುಕೊಂಡ್ರೆ ಹೇಗೆ? ಜನರಿಗೆ ನೀರು ಕೊಡುವುದು ಯಾವಾಗ? ಮುಂದಿನ ವರ್ಷ ಕೊಡ್ತೀರಾ? ನಿಮಗೆ ಸ್ವಲ್ಪನಾದ್ರು ಸೆನ್ಸ್‌ ಇದೇನಾ? ಕೆಲಸ ಮಾಡುವ ಮನಸ್ಸಿದೆಯೋ ಇಲ್ಲವೋ? ಇದೇ ರೀತಿ ಕೆಲಸ ಮಾಡಿದ್ರೆ ಕ್ರಮ ಎದುರಿಸಬೇಕಾಗುತ್ತದೆ.

Advertisement

ಬೇಸಿಗೆ ಮುಗಿಯದರೊಳಗೆ ಹಗಲಿರುಳು ಶ್ರಮವಹಿಸಿ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಕೂರ್ಮರಾವ್‌ ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ಹಣಮಂತಪ್ಪ ಅಂಬ್ಲಿ ಅವರನ್ನು
ತರಾಟೆಗೆ ತೆಗೆದುಕೊಂಡರು.

ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಬರ ಪರಿಸ್ಥಿತಿ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮತನಾಡಿದರು. ಎಲ್ಲೆಲ್ಲಿ ಕೊಳವೆಬಾವಿ ಕೊರಿಸಿದ್ದೀರಿ? ಶುದ್ಧ ನೀರಿನ ಘಟಕಗಳೆಷ್ಟು ಬಂದಾಗಿವೆ? ಎಷ್ಟು ಕಾರ್ಯಾರಂಭದಲ್ಲಿವೆ? ಎಲ್ಲೆಲ್ಲಿ ಮೋಟಾರ್‌ ಅಳವಡಿಸಿದ್ದೀರಿ? ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದೀರಾ ಎಂದು ಸರಣಿ ಪ್ರಶ್ನೆ ಕೇಳಿದರು.

ದಂಡಸೊಲ್ಲಾಪುರ ಮತ್ತು ಹೊರಟ್ಟಿ ಗ್ರಾಮಗಳಿಗೆ ನಾನು ಮತ್ತು ಎಸ್‌ಪಿ ಅವರು ಸೇರಿ ಖುದ್ದಾಗಿ ಭೇಟಿ ನೀಡಿದ್ದೇವೆ. ಅಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಕಾಮಗಾರಿ ಮುಗಿದೆ ಇಲ್ಲ. ಈ ರೀತಿ ಸುಳ್ಳು ಹೇಳಿ ಹಾದಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಸಂಬಂಧಿಸಿದ ಪಿಡಿಒ ಅವರಿಗೆ ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡುವಂತೆ ಸೂಚಿಸಿದರು.

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಂಬಂಧಿಸಿದವರು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಉಲ½ಣಿಸಕೂಡದು. ಈ ಸಂಬಂಧ ಬೇಜವಾಬ್ದಾರಿತನ ಸಲ್ಲದು ಎಂದು ಜಿಲ್ಲಾಧಿಕಾರಿ
ಎಂ.ಕೂರ್ಮರಾವ್‌ ಖಡಕ್‌ ಎಚ್ಚರಿಕೆ ನೀಡಿದರು.

Advertisement

ತಾಲೂಕಿನಲ್ಲಿರುವ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತಮ್ಮ ಯೋಜನೆಗಳ ಅನುಷ್ಠಾನವನ್ನು ಚುರುಕುಗೊಳಿಸಬೇಕು. ಪಿಡಿಒಗಳು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಅವಶ್ಯವಿದ್ದಲ್ಲಿ ಕೊಳವೆ ಬಾವಿ ಕೊರೆಸಬೇಕು. ನೀರಿನ ಸಂಪನ್ಮೂಲಗಳನ್ನು ಗುರುತಿಸಿ ನೀರು ಪಡೆಯಬೇಕು. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು. ಖಾಸಗಿ ಕೊಳವೆಬಾವಿಗಳಿಗೆ ಹಣ ಕೊಟ್ಟು ನೀರು ಖರೀದಿಸಿಬೇಕು. ಒಟ್ಟಿನಲ್ಲಿ ಜನ-ಜಾನುವಾರುಗಳಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಯುಧ್ದೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಖಾಸಗಿ ಕೊಳವೆಬಾವಿಗಳಿಂದ ನೀರು ಖರೀದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಅವರಿಗೆ ಪ್ರತಿ 15 ದಿನಕ್ಕೊಮ್ಮೆ ಬಿಲ್‌ ಮಾಡಿ ಕೊಡಿ. ಬಿಲ್‌ ತಡ ಮಾಡುತ್ತಾರೆ ಎಂಬ ಕಾರಣಕ್ಕೆ ಖಾಸಗಿಯವರು ನೀರು ಕೊಡಲು ಮುಂದೆ ಬರುತ್ತಿಲ್ಲ. ಇದು ಒಳ್ಳೆಯದಲ್ಲ. ತ್ವರಿತವಾಗಿ ಬಿಲ್‌ ಕೊಡಿ. ನೀರು ಕೊಡಲು ಒಪ್ಪದ ಖಾಸಗಿ ಕೊಳವೆಬಾವಿಗಳನ್ನು ತಾಪಂ ಇಒ ಮತ್ತು ತಹಶೀಲ್ದಾರ್‌ ಸೇರಿ ಸೀಜ್‌ ಮಾಡಬೇಕು. ಪ್ರತಿ ಗ್ರಾಪಂವಾರು ಗುರಿಯಂತೆ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ತೊಟ್ಟಿ ನಿರ್ಮಿಸಬೇಕು. ಗ್ರಾಪಂ ಪಿಡಿಒಗಳು ಮೊಬೈಲ್‌ ಬಂದ್‌ ಮಾಡಕೂಡದು ಎಂದು ಸೂಚಿಸಿದರು.

ಬೇಸಿಗೆ ದಿನಗಳಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್‌ ಸಮಸ್ಯೆಯಾಗದಂತೆ ಜೆಸ್ಕಾಂ ಅಧಿಕಾರಿಗಳು ನಿಗಾವಹಿಸಬೇಕು. ಬಿಜಾಪುರ ಹತಿರದ ಕೃಷ್ಣಾಪುರ ಕ್ಯಾಂಪ್‌ಗೆ ವಿದ್ಯುತ್‌ ಕಡಿತ ಮಾಡಿದ್ದೀರಿ ಎಂದು ಕೇಳಿದ್ದೇನೆ. ನೋಟಿಸ್‌ ನೀಡಿ ಕಾಲಾವಕಾಶ ಕೊಡಿ. ತುಂಬದೆ ಇದ್ದಲ್ಲಿ ಕಡಿತಗೊಳಿಸಿ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಕುರಿತು ವಿಚಾರಿಸಿದರು. 2018-19ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆ ಸಾಧನೆ ಪರಿಶೀಲಿಸಿದರು.

ಜಿಪಂ ಸಿಇಒ ಕವಿತಾ ಮನ್ನಿಕೇರಾ ಮಾತನಾಡಿ, ಲೋಕಸಭಾ ಚುನಾವಣೆ ಸಂಬಂಧ ಎಲ್ಲ ಮತಗಟ್ಟೆಗಳಲ್ಲಿ ಮೂಲಸೌಕರ್ಯ ಒದಗಿಸಬೇಕು. ಮತದಾನದ ಪ್ರಮಾಣ ಹೆಚ್ಚಳಕ್ಕೆ ಜಾರಿಗೊಳಿಸಿರುವ ನಾನಾ ಕಾರ್ಯಕ್ರಮಗಳನ್ನು ವಿವರಿಸಿ ಚುನಾವಣೆ ಯಶಸ್ವಿಗೆ ಸಹಕರಿಸಬೇಕು ಎಂದು ಸೂಚಿಸಿದರು.

ಜಿಪಂ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ, ಡಬ್ಲೂಆರ್‌ಎಸ್‌ ಇಇ ರಾಜುಕುಮಾರ ಪತ್ತಾರ, ಸುರಪುರ ತಹಶೀಲ್ದಾರ್‌ ಸುರೇಶ ಅಂಕಲಗಿ, ಹುಣಸಗಿ ತಹಶೀಲ್ದಾರ್‌ ಶ್ರೀಧರ ಮುಂದಲಮನಿ, ತಾಪಂ ಇಒ ಬಿ. ಜಗದೇವಪ್ಪ ಇದ್ದರು. ಸುರಪುರ ನಗರಸಭೆ ಪೌರಾಯುಕ್ತ ಏಜಾಜ್‌ ಹುಸೇನ್‌, ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ ಮೀನಾ ಕುಮಾರಿ, ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ ಪ್ರಭು ದೊರೆ
ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next