Advertisement

ಕೆದೂರು:ಪಾಳುಬಿದ್ದ ಸಾರ್ವಜನಿಕ ವಿದ್ಯಾರ್ಥಿನಿಲಯ

11:11 PM Oct 17, 2019 | Team Udayavani |

ತೆಕ್ಕಟ್ಟೆ : ಕೆದೂರು ಗ್ರಾ.ಪಂ. ವ್ಯಾಪ್ತಿಯ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾಕ ವಿದ್ಯಾರ್ಥಿಗಳ ಸಾರ್ವಜನಿಕ ವಿದ್ಯಾರ್ಥಿ ನಿಲಯ ನಿರ್ವಹಣೆ ಇಲ್ಲದೆ ಸಂಪೂರ್ಣ ನಿರ್ಲಕ್ಷéಕ್ಕೆ ಒಳಗಾಗಿದೆ.

Advertisement

1985ರಲ್ಲಿ ಕುಂದಾಪುರದ ಅಂದಿನ ಶಾಸಕ ಕೆ. ಪ್ರತಾಪಚಂದ್ರ ಶೆಟ್ಟಿ ( ಇಂದಿನ ವಿಧಾನ ಪರಿಷತ್‌ನ ಸಭಾಧ್ಯಕ್ಷರು)ಅವರ ಅವಧಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸುಧೀರ್‌ ಕೃಷ್ಣ ಅವರಿಂದ ಈ ವಿದ್ಯಾರ್ಥಿನಿಲಯ ಲೋಕಾರ್ಪಣೆಗೊಂಡಿತ್ತು.

34 ವರ್ಷಗಳ ಹಳೆಯ ಕಟ್ಟಡದ ಮೇಲ್ಛಾವಣಿ ಹೆಂಚುಗಳು ಸಂಪೂರ್ಣ ಒಡೆದು ಮಳೆ ನೀರು ಒಳಗೆ ಶೇಖರಣೆಯಾಗುತ್ತಿದೆ. ಕಟ್ಟಡದ ಮೇಲೆ ಮರವೊಂದು ಎರಗಿದ ಸ್ಥಿಯಲ್ಲಿದೆ. ವಿದ್ಯಾರ್ಥಿಗಳು ಮತ್ತು ಸಮರ್ಪಕ ನಿರ್ವಹಣೆಯ ಕೊರತೆಯಿಂದ ಗಿಡಗಂಟಿಗಳು ಬೆಳೆದು ಕಟ್ಟಡ ಇದೀಗ ಪಾಳುಬಿದ್ದಿದೆ.

ಸಂರಕ್ಷಣೆಗೆ ಮುಂದಾಗಿ
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಹಿಂದೆ ಸರಕಾರ ಕಾರ್ಯನಿರ್ವಹಿಸಿತ್ತಾದರೂ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾದ ಕಾರಣ ಸಂಬಂಧ ಪಟ್ಟ ಇಲಾಖೆ ಇಂತಹ ಸುವ್ಯವಸ್ಥಿತ ಸರಕಾರಿ ಕಟ್ಟಡವನ್ನು ಸಂರಕ್ಷಿಸುವ ಬದಲು ನಿರ್ಲಕ್ಷಿಸಿರುವ ಪರಿಣಾಮ ಕಟ್ಟಡದ ಬಾಗಿಲು ಮುಚ್ಚಿದೆ. ಕಟ್ಟಡವೀಗ ಅನ್ಯ ಚಟುವಟಿಕೆಗಳ ಆಶ್ರಯತಾಣವಾಗಿಯೂ ಮಾರ್ಪಡುತ್ತಿದ್ದು, ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಟ್ಟಡ ಸಂರಕ್ಷಣೆಗೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪರಿಶೀಲನೆ ನಡೆಸಿದ್ದೇವೆ
ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಈ ಕಟ್ಟಡದ ಸಂರಕ್ಷಣೆಯ ಬಗ್ಗೆ ಈ ಹಿಂದೆ ಸಂಬಂಧಪಟ್ಟ ಇಲಾಖೆಯವರಲ್ಲಿ ಚರ್ಚಿಸಿದ್ದೇನೆ. ಕೆದೂರಿನಲ್ಲಿ ಈಗಿರುವ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿರುವ ಪರಿಣಾಮ ಹೆಚ್ಚುವರಿ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ಒಟ್ಟಾರೆಯಾಗಿ ಈ ಕಟ್ಟಡವನ್ನು ಸದ್ವಿನಿಯೋಗಿಸುವ ಬಗ್ಗೆ ಪರಿಶೀಲನೆ ನಡೆಸಿದ್ದೇವೆ.
-ಶ್ರೀಲತಾ ಸುರೇಶ್‌ ಶೆಟ್ಟಿ,
ಜಿ.ಪಂ. ಸದಸ್ಯರು

Advertisement

ವಿದ್ಯಾರ್ಥಿಗಳ ಕೊರತೆ
ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆ ಜಿಲ್ಲೆಯ ಶಿರ್ವ ಹಾಗೂ ಕೆದೂರಿನ ಪ್ರಿ ಮೆಟ್ರಿಕ್‌ ವಿದ್ಯಾರ್ಥಿ ನಿಲಯವನ್ನು ಬಂದ್‌ ಮಾಡಿ ಪೋಸ್ಟ್‌ ಮೆಟ್ರಿಕ್‌ ಹಾಸ್ಟೆಲ್‌ಗ‌ಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಪೋಸ್ಟ್‌ ಮೆಟ್ರಿಕ್‌ ವಿದ್ಯಾರ್ಥಿನಿಯರ ಹಾಸ್ಟೆಲ್‌ಗ‌ಳಲ್ಲಿ 50 ವಿದ್ಯಾರ್ಥಿಗಳಿದ್ದು ಚೆನ್ನಾಗಿ ನಡೆಯುತ್ತಿದೆ. ಇಂತಹ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಆಯಾ ಗ್ರಾ.ಪಂ.ಗೆ ಇಲಾಖೆ ಹಸ್ತಾಂತರಿಸಿದೆ. ಪಂಚಾಯತ್‌ ಅದನ್ನು ಸದುಪಯೋಗಪಡಿಸಿಕೊಳ್ಳಬಹುದು.
-ಎಚ್‌.ಆರ್‌.ಲಮಾಣಿ,
ಅಧಿಕಾರಿಗಳು, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾಕರ ಕಲ್ಯಾಣ ಇಲಾಖೆ, ಉಡುಪಿ

ಗ್ರಾ.ಪಂ.ನಿಂದ ನಿರ್ವಹಣೆ ಕಷ್ಟ
ಕೆದೂರಿನಲ್ಲಿರುವ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಕಟ್ಟಡವ ನಿರ್ವಹಣೆ ಗ್ರಾಮ ಪಂಚಾಯತ್‌ನಿಂದ ಕಷ್ಟ ಸಾಧ್ಯ. ಗ್ರಾ.ಪಂ. ಸರ್ವ ಸದಸ್ಯರು ಚರ್ಚಿಸಿ ಈ ಕುರಿತು ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇವೆ.
-ಭುಜಂಗ ಶೆಟ್ಟಿ ,
ಅಧ್ಯಕ್ಷರು, ಗ್ರಾ.ಪಂ.ಕೆದೂರು

-ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next