Advertisement

ಕೇದಾರನಾಥ ಜಲಪ್ರಳಯದಲ್ಲಿ ಕಳೆದು ಹೋಗಿದ್ದ ವ್ಯಕ್ತಿ ಏಳು ವರ್ಷಗಳ ಬಳಿಕ ಮನೆ ಸೇರಿದಾಗ!

10:15 AM Jan 02, 2020 | Team Udayavani |

ಡೆಹ್ರಾಡೂನ್: ಏಳು ವರ್ಷಗಳ ಹಿಂದೆ ಉತ್ತರಾಖಂಡ ರಾಜ್ಯ ತತ್ತರಿಸುವಂತೆ ಮಾಡಿದ್ದ ಮೆಘಸ್ಪೋಟ ಮತ್ತು ಆ ಬಳಿಕದ ರುದ್ರ ಸ್ವರೂಪಿ ಪ್ರವಾಹಕ್ಕೆ ಹಲವರು ಪ್ರಾಣಗಳನ್ನು ಕಳೆದುಕೊಂಡಿದ್ದರೆ, ಇನ್ನು ಬಹಳಷ್ಟು ಜನರು ತಮ್ಮ ಬದುಕಿನ ನೆಲೆಯನ್ನೇ ಕಳೆದುಕೊಂಡಿದ್ದರು. ಈ ಪ್ರವಾಹ ಘಟನೆಯಲ್ಲಿ ಬಹಳಷ್ಟು ಮಂದಿ ನಾಪತ್ತೆಯಾಗಿದ್ದರು.

Advertisement

ಇದೀಗ ಉತ್ತರಾಖಂಡದ ಕೇದಾರನಾಥ ಜಲಪ್ರವಾಹದಲ್ಲಿ ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಕುಟುಂಬ ಸದಸ್ಯರನ್ನು ಮರಳಿ ಸೇರಿರುವ ಘಟನೆಯೊಂದು ವರದಿಯಾಗಿದೆ. ಪ್ರವಾಹ ಸಂದರ್ಭದಲ್ಲಿ ಇಲ್ಲಿನ ಲಂಬಾಗಢ್ ಎಂಬ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿತಾರ್ ಗಂಜ್ ಪ್ರದೇಶದ ಜಮೀಲ್ ಅಹಮ್ಮದ್ ಅನ್ಸಾರಿ ಎಂಬ ವ್ಯಕ್ತಿಯೇ ಏಳು ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರಿಕೊಂಡ ವ್ಯಕ್ತಿಯಾಗಿದ್ದಾರೆ. ಚಮೋಲಿ ಎಸ್.ಪಿ. ಯಶವಂತ್ ಸಿಂಗ್ ಚೌಹಾಣ್ ಅವರು ಈ ಪ್ರಕರಣದ ಮಾಹಿತಿಯನ್ನು ನೀಡಿದ್ದಾರೆ.

ಪ್ರವಾಹ ಘಟನೆಯ ಬಳಿಕ ನಾಪತ್ತೆಯಾಗಿದ್ದ ಅನ್ಸಾರಿ ಅವರು ಬಳಿಕ ಪತ್ತೆಯಾಗಿದ್ದರು ಆದರೆ ಅವರಿಗೆ ಆಂಶಿಕ ನೆನಪಿನ ಶಕ್ತಿ ನಷ್ಟವುಂಟಾಗಿದ್ದರಿಂದ ತಮ್ಮ ಮನೆ ವಿಳಾಸವನ್ನು ಮತ್ತು ತಮ್ಮ ವಿವರಗಳನ್ನು ನೀಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಇಲ್ಲಿಯವರೆಗೆ ಅನ್ಸಾರಿ ಅವರು ಗೋಪೇಶ್ವರದಲ್ಲಿರುವ ವೃದ್ಧಾಶ್ರಮ ಒಂದರಲ್ಲಿ ಇದ್ದರು.

ನಿಧಾನವಾಗಿ ಅನ್ಸಾರಿ ಅವರಿಗೆ ನೆನಪಿನ ಶಕ್ತಿ ಮರುಕಳಿಸಲಾರಂಭಿಸಿತ್ತು. 2009ರಲ್ಲಿ ಅನ್ಸಾರಿ ಅವರು ಸಿತಾರ್ ಗಂಜ್ ನಿಂದ ಜೋಶಿಮಠಕ್ಕೆ ಕೆಲಸಕ್ಕಾಗಿ ಆಗಮಿಸಿದ್ದರು. ಮತ್ತು 2013ರಲ್ಲಿ ಪ್ರವಾಹ ಸಂಭವಿಸಿದಾಗ ಅವರು ಲಂಬಾಗಢ್ ನಲ್ಲಿ ಕೆಲಸ ಮಾಡುತ್ತಿದ್ದರು ಎಂಬೆಲ್ಲಾ ವಿಷಯಗಳನ್ನು ಅನ್ಸಾರಿ ಅವರು ತಾವು ವೃದ್ಧಾಶ್ರಮದಲ್ಲಿ ಇದ್ದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ತಮ್ಮ ಮನೆಯ ವಿಳಾಸವನ್ನು ಹೇಳುವಷ್ಟು ಮತ್ತು ಕುಟುಂಬ ಸದಸ್ಯರನ್ನು ಗುರುತಿಸುವಷ್ಟರಮಟ್ಟಿಗೆ ಅನ್ಸಾರಿ ಅವರ ನೆನಪಿನ ಶಕ್ತಿ ಮರುಕಳಿಸಿದೆ ಎಂಬ ಮಾಹಿತಿಯನ್ನು ಎಸ್.ಪಿ. ಯಶವಂತ್ ಸಿಂಗ್ ಅವರು ನೀಡಿದ್ದಾರೆ.

ಅನ್ಸಾರಿ ಅವರ ಹೆಳಿಕೆಯ ಆಧಾರದಲ್ಲಿ ಪೊಲೀಸರು ಅವರ ಮನೆಯವರನ್ನು ಹುಡುಕುವ ಕೆಲಸದಲ್ಲಿ ನಿರತರಾಗುತ್ತಾರೆ. ಸಾಮಾಜಿಕ ಜಾಲತಾಣದ ಸಹಾಯದಿಂದ ಅನ್ಸಾರಿ ಅವರ ಮನೆ ಸದಸ್ಯರು ಅವರನ್ನು ಗುರುತಿಸಿದ್ದಾರೆ.

Advertisement

ಅನ್ಸಾರಿ ಅವರಿಗೆ ಮಡದಿ ಮತ್ತು ಇಬ್ನರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದಾರೆ. ಏಳು ವರ್ಷಗಳ ಬಳಿಕ ತಮ್ಮ ಮನೆಮಂದಿಯನ್ನು ಸೇರಿಕೊಂಡ ಜಮೀಲ್ ಅಹಮ್ಮದ್ ಅನ್ಸಾರಿ ಅವರ ಮುಖದಲ್ಲಿ ಅವರ್ಣನೀಯ ಸಂತಸವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next