Advertisement

Kedarnath: ಕೇದಾರನಾಥನಿಗೆ ಕೋಟಿ ನಮನ

01:37 PM Oct 08, 2023 | Team Udayavani |

ಉತ್ತರಾಖಂಡದಲ್ಲಿರುವ ಶಿವನ ದೇವಾಲಯಕ್ಕೆ ಹೋಗಬೇಕೆಂದು ಬಹುದಿನಗಳಿಂದ ಆಸೆ ಪಟ್ಟಿದ್ದೆ. “ಒಮ್ಮೆ ಕೇದಾರನಾಥಕ್ಕೆ ಹೋಗಿಬರಬೇಕು’ ಎಂದು ಅಣ್ಣನ ಬಳಿ ಯಾವಾಗಲೂ ಹೇಳುತ್ತಿದ್ದೆ. ಒಂದು ದಿನ ಅವನಾಗಿಯೇ ಕಾಲ್‌ ಮಾಡಿ, “ಕೇದಾರನಾಥಕ್ಕೆ ಟ್ರೆಕ್ಕಿಂಗ್‌ ಹೋಗೋಣಾÌ?’ ಎಂದಾಗ ಖುಷಿಯಿಂದ ಕುಪ್ಪಳಿಸಿದ್ದೆ. ಮೊದಲ ಸಲ ಉತ್ತರ ಭಾರತದ ಕಡೆ ಪ್ರಯಾಣ ಬೆಳೆಸುತ್ತಿರುವ ಸಂಭ್ರಮ ನಮ್ಮದಾಗಿತ್ತು. ಅಣ್ಣ ಭರತ್‌, ಅವರ ಫ್ರೆಂಡ್‌ ಮಂಜುನಾಥ ಮತ್ತು ಅವನ ತಂಗಿ ಮಂಜುಳಾ ಹೋಗುವುದೆಂದು ಪ್ಲಾನ್‌ ಮಾಡಿ, ಮನೆಯಲ್ಲಿ ಕೇಳಿದಾಗ “ನಾವೂ ಬರ್ತೀವಿ’ ಎಂದು ನನ್ನ ಅಪ್ಪ- ಅಮ್ಮನೂ ಹೊರಟರು. ನಂತರ ಇನ್ನೂ ನಾಲ್ವರು ಜೊತೆಯಾದರು. ಒಟ್ಟು 11 ಜನ ಶಿವನ ದರ್ಶನಕ್ಕೆಂದು ಹೊರಟೆವು.

Advertisement

ಮೊದಲ ವಿಮಾನ ಪ್ರಯಾಣ:

ಮೊದಲು ಬೆಂಗಳೂರಿನಿಂದ ಡೆಹ್ರಾಡೂನ್‌ಗೆ ವಿಮಾನ ಪ್ರಯಾಣ. ನಮ್ಮಲ್ಲಿ ಹಲವರಿಗೆ ವಿಮಾನ ಪ್ರಯಾಣವು ಮೊದಲ ಅನುಭವವಾಗಿತ್ತು. ನಮ್ಮ ಹಳ್ಳಿಯಲ್ಲಿ ಪಕ್ಷಿಯಂತೆ ಹಾರುತ್ತಿದ್ದ ವಿಮಾನ ನೋಡಿದ್ದ ನಮಗೆ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭಾರೀ ಗಾತ್ರದ ವಿಮಾನಗಳನ್ನು ಕಂಡು ಬೆರಗಾಯಿತು. ವಿಮಾನದ ಮುಂದೆ ನಿಂತು ಫೋಟೋ ತೆಗೆಸಿಕೊಂಡು, ವಿಡಿಯೋ ಮಾಡಿ ಖುಷಿ ಪಟ್ಟೆವು. ನಂತರ ಒಳಗೆ ಹೋಗಿ ಕಿಟಕಿ ಸೀಟು ಹಿಡಿದು ಸಂಭ್ರಮಿಸಿದೆವು. ಕಿಟಕಿ ಪಕ್ಕ ಕುಳಿತು, ಮೋಡಗಳು ನಮ್ಮ ಕೆಳಗೆ ಚಲಿಸುತ್ತಿರುವ ದೃಶ್ಯಗಳನ್ನು ನೋಡುವುದೇ ಒಂದು ಖುಷಿ. ಸೂರ್ಯೋದಯದ ರಮಣೀಯ ದೃಶ್ಯದ ಜತೆಗೆ ಡೆಹ್ರಾಡೂನ್‌ ಏರ್‌ಪೋರ್ಟ್‌ ಸಮೀಪಿಸುತ್ತಿದ್ದಂತೆ ಕಂಡಿದ್ದು ಕೊನೆಯಿಲ್ಲದಷ್ಟು ದೂರದವರೆಗಿನ ದಟ್ಟ ಅರಣ್ಯ. ಅದರ ಮಧ್ಯೆ ಹರಿಯುವ ನದಿ-ತೊರೆಗಳನ್ನು ಕಂಡ ನನ್ನ ತಂದೆ ತುಂಬಾ ಖುಷಿಪಟ್ಟರು.

ಕೇದಾರನಾಥಕ್ಕೆ ಟ್ರೆಕ್ಕಿಂಗ್‌:

ಡೆಹ್ರಾಡೂನ್‌ನಿಂದ ಸುಮಾರು 245 ಕಿ.ಮೀ. ದೂರವಿರುವ ಸೋನ್‌ ಪ್ರಯಾಗ್‌ ವರೆಗೆ ಟೆಂಪೋ ಟ್ರಾವೆಲರ್‌ (ಟಿಟಿ) ಬಾಡಿಗೆಗೆ ತೆಗೆದುಕೊಂಡು ಬೆಳಗ್ಗೆ 10 ಗಂಟೆಗೆ ಹೊರಟು ಸಂಜೆ 7 ಗಂಟೆಯ ಹೊತ್ತಿಗೆ ಸಿತಾಪುರ್‌ ತಲುಪಿದೆವು. ರಾತ್ರಿ ವೇಳೆ ಕೇದಾರನಾಥಕ್ಕೆ ಹೋಗುವ ದಾರಿಯನ್ನು ಮುಚ್ಚುವ ಕಾರಣ ಸಮೀಪದ ಸಿತಾಪುರ್‌ನಲ್ಲಿ ತಂಗಿದ್ದು, ಮರುದಿನ ಮುಂಜಾನೆ ಸೋನ್‌ ಪ್ರಯಾಗ್‌ಗೆ, ಅಲ್ಲಿಂದ ಟ್ರೆಕ್ಕಿಂಗ್‌ ಪಾಯಿಂಟ್‌ ಆದ ಗೌರಿಕುಂಡ್‌ಗೆ ಟ್ರಾವಲ್ಸ್‌ನವರು ಕರೆದೊಯ್ದರು. ಅಲ್ಲಿಂದ ಕೇದಾರನಾಥಕ್ಕೆ 16 ಕಿ.ಮೀ. ದೂರ. ಆದರೆ ಗುಡ್ಡ ಕುಸಿತದ ಕಾರಣದಿಂದ ಆ ದೂರವೀಗ ಅಂದಾಜು 24 ಕಿ. ಮೀ. ಆಗಿದೆ. ಇಷ್ಟು ದೂರದ ಕಲ್ಲು-ಗುಡ್ಡಗಳ ಹಾದಿಯಲ್ಲಿ ನಡೆಯಲು ಆಗದ ಆರು ಮಂದಿ ಕುದುರೆ ಏರಿ ಹೊರಟರು. ಉಳಿದ ಐವರು ಟ್ರೆಕ್ಕಿಂಗ್‌ ಮಾಡಿಯೇ ದೇವರ ದರ್ಶನ ಪಡೆಯಬೇಕು ಎಂಬ ಛಲದಿಂದ ಹೆಜ್ಜೆ ಹಾಕಿದೆವು.

Advertisement

ಆರೋಗ್ಯವೇ ಭಾಗ್ಯ:

ಟ್ರೆಕ್ಕಿಂಗ್‌ನಲ್ಲಿ ಮೊದಲ 3-5 ಕಿ.ಮೀ. ಗಳನ್ನು ಹುಮ್ಮಸ್ಸಿನಿಂದ ಹತ್ತಬಹುದು. ತದನಂತರ ಆ ಹುಮ್ಮಸ್ಸು ಕಡಿಮೆಯಾಗುತ್ತಾ ಹೋಗುತ್ತದೆ. ನಾವೇನಾದರೂ ಚಳಿ-ಮಳೆ ಎಂದು ಜರ್ಕಿನ್‌ ಅಥವಾ ರೈನ್‌ ಕೋಟ್‌ ಹಾಕಿಕೊಂಡು ಹೋದರೆ, ಅವೂ ಭಾರವೆಂದು ಭಾಸವಾಗುತ್ತದೆ. ಆದ್ದರಿಂದ ರೈನ್‌ ಕೋಟ್‌ ಬದಲಿಗೆ ಅಲ್ಲಿಯೇ 100 ರೂ. ಗೆ ಸಿಗುವ ಮಳೆಯ ಕವರ್‌ ಬಳಸುವುದು ಒಳಿತು. ಮಾರ್ಗಮಧ್ಯೆ ಆಯಾಸದಿಂದ ಪಾರಾಗಲು ನೀರಿನ ಬಾಟಲಿ, ಗ್ಲೂಕೋಸ್‌ ಪುಡಿ ಮತ್ತು ಚಾಕೊಲೇಟ್‌ ತೆಗೆದುಕೊಂಡು ಹೋಗಬಹುದು. ಅಲ್ಲಲ್ಲಿ ಗುಡ್ಡಗಳ ಮಧ್ಯೆ ಝರಿಗಳು ಸಿಗುತ್ತವೆ. ಅಲ್ಲಿನ ನೀರನ್ನು ಬಾಟಲಿಯಲ್ಲಿ ತುಂಬಿಸಿ ಕೊಳ್ಳಬಹುದು. ಮೇಲೇರುತ್ತಾ ಹೋದಂತೆಲ್ಲಾ ವಾತಾವರಣ ಬದಲಾಗುತ್ತದೆ. ಕೆಲವರಿಗೆ ಉಸಿರಾಟದ ತೊಂದರೆ ಆಗುತ್ತದೆ. ಆದ್ದರಿಂದ ಫಿಟ್‌ ಅನ್ನುವಂಥ ಆರೋಗ್ಯ ಇರುವವರು ಮಾತ್ರ ಟ್ರೆಕ್ಕಿಂಗ್‌ಗೆ ಹೋಗುವುದು ಒಳಿತು.

ಕರ್ನಾಟಕದ ಜನ ಇದ್ದಾರೆ!

ಸಂಜೆ 5-30ರ ಹೊತ್ತಿಗೆ ಕೇದಾರನಾಥ ತಲುಪಿದೆವು. ಸಂಜೆ 6ಗಂಟೆ ಸುಮಾರಿಗೆ ನಿತ್ಯವೂ ಆರತಿ ನಡೆಯುತ್ತದೆ. ವಿಶೇಷವೆಂದರೆ ಕರ್ನಾಟಕದ ಪಂಡಿತರೊಬ್ಬರು ಅಲ್ಲಿ ಅರ್ಚಕರು. ಅವರನ್ನು ಭೇಟಿ ಮಾಡಿದ್ದರಿಂದ ನೇರ ದರ್ಶನ ಸಾಧ್ಯವಾಯಿತು. ಅಲ್ಲಿ ಬಾಡಿಗೆಗೆ ಟೆಂಟ್‌ಗಳು ಸಿಗುತ್ತವೆ. ನಾವು ಮೂರು ಟೆಂಟ್‌ ಬಾಡಿಗೆಗೆ ತೆಗೆದುಕೊಂಡು ವಿಶ್ರಾಂತಿ ಪಡೆದೆವು. ರಾತ್ರಿ ವೇಳೆಗೆ ಹವಾಮಾನ ಮೈನಸ್‌ ಡಿಗ್ರಿಗೂ ತಲುಪುತ್ತದೆ. ನಾವು ಹೋಗಿದ್ದ ದಿನ ಮುಂಜಾನೆ 3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇತ್ತು.

ಗಂಗಾರತಿಯ ದೃಶ್ಯ ವೈಭವ :

ಸಿತಾಪುರ್‌ನಿಂದ ನೇರ ಹೃಷಿಕೇಶ್‌ಗೆ ಹೋದೆವು. ಅಲ್ಲಿ ಹತ್ತಾರು ಹಿಂದೂ ದೇವಾಲಯಗಳಿವೆ. ಸಮಯದ ಅಭಾವದ ಕಾರಣ ನಮಗೆ ತ್ರಯಂಬಕೇಶ್ವರನ ದೇವಸ್ಥಾನವನ್ನು ಮಾತ್ರ ನೋಡಲು ಸಾಧ್ಯವಾಯಿತು. ನಂತರ ಗಂಗಾ ನದಿಯಲ್ಲಿ ರಿವರ್‌ ರಾಫ್ಟಿಂಗ್‌ ಮಾಡಿದೆವು. ನೀರಿನ ಹರಿವು ಹೆಚ್ಚಿದ್ದ ಸ್ಥಳಗಳಲ್ಲಿ ನಾವಿದ್ದ ಬೋಟ್‌ ಎಲ್ಲಿ ಪಲ್ಟಿ ಆಗುತ್ತದೋ ಎಂಬ ಭಯ ಕಾಡಿದ್ದು ನಿಜ. ನಂತರ ಹರಿದ್ವಾರ ತಲುಪಿ, ಅಲ್ಲಿ ಗಂಗಾ ನದಿಯ ತೀರದಲ್ಲಿ ನಡೆಯುವ ಗಂಗಾರತಿಯ ದೃಶ್ಯವೈಭವವನ್ನು ಕಣ್ತುಂಬಿಸಿಕೊಂಡು ರಾಷ್ಟ್ರ ರಾಜಧಾನಿ ದೆಹಲಿಯತ್ತ ಪ್ರಯಾಣ ಬೆಳೆಸಿದೆವು. ದೆಹಲಿಯಿಂದ ಶನಿವಾರ ಮುಂಜಾನೆ ಹೊರಟು, ಆಗ್ರಾದಲ್ಲಿನ ತಾಜ್‌ ಮಹಲ…, ಅಕºರ್‌ನ ಸಮಾಧಿ ಇರುವ ಸಿಕಂದರ್‌ ಕೋಟೆ, ಶ್ರೀಕೃಷ್ಣನ ಜನ್ಮ ಸ್ಥಳ ಮಥುರಾ ಹಾಗೂ ಬೃಂದಾವನ ನೋಡಿಕೊಂಡು ಪುನಃ ದೆಹಲಿಗೆ ವಾಪಸಾದೆವು. ಮರುದಿನ ಬೆಳಗ್ಗೆ ಕೆಂಪು ಕೋಟೆ, ಇಂಡಿಯಾ ಗೇಟ್‌, ರಾಷ್ಟ್ರಪತಿ ಭವನ, ಸಂಸತ್‌ ಭವನ, ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ನೋಡಿಕೊಂಡು ಭಾನುವಾರ ರಾತ್ರಿ ವಿಮಾನದ ಮೂಲಕ ಬೆಂಗಳೂರಿಗೆ ವಾಪಸು ಬಂದೆವು.

ಅರ್ಚಕರು ಕನ್ನಡಿಗರು!:

ಕೇದಾರನಾಥ ದೇವಾಲಯದ ಮುಖ್ಯ ಅರ್ಚಕರು ಕರ್ನಾಟಕದವರು ಎಂಬುದು ವಿಶೇಷ. ಶಿವನ ಪೂಜೆಯ ಸಮಯದಲ್ಲಿ ಮಂತ್ರಗಳನ್ನು ಕನ್ನಡ ಭಾಷೆಯಲ್ಲಿಯೂ ಹೇಳಲಾಗುತ್ತದೆ.

ತಲುಪುವುದು ಹೇಗೆ?:

ಬೆಂಗಳೂರಿನಿಂದ ಹೃಷಿಕೇಶಕ್ಕೆ ರೈಲಿನಲ್ಲಿ, ಅಲ್ಲಿಂದ ಟೆಂಪೋ ಟ್ರಾವೆÇರ್‌ ಮೂಲಕ ಗೌರಿಕುಂಡ್‌ ತಲುಪಿ ಅಲ್ಲಿಂದ ಟ್ರೆಕ್ಕಿಂಗ್‌ ಶುರು ಮಾಡಬಹುದು.

ಬೆಂಗಳೂರು ವಿಮಾನ ನಿಲ್ದಾಣದಿಂದ ಡೆಹ್ರಾಡೂನ್‌ ತಲುಪಿ, ಅಲ್ಲಿಂದ ಟೆಂಪೋ ಟ್ರಾವೆಲ್‌ ಮೂಲಕ ಗೌರಿಕುಂಡ್‌ ತಲುಪಿ ಅಲ್ಲಿಂದ ಟ್ರೆಕ್ಕಿಂಗ್‌ ಶುರು ಮಾಡಬಹುದು.

ಗುಪ್ತಕಾಶಿ, ಸೆರ್ಸಿ ಮತ್ತು ಪಾಟಾದಿಂದ ಕೇದಾರನಾಥಕ್ಕೆ ನೇರ ಹೆಲಿಕಾಪ್ಟರ್‌ ಸೌಲಭ್ಯ ಇದೆ.

ಟ್ರೆಕ್ಕಿಂಗ್‌ ಮೂಲಕ ಕೇದಾರನಾಥ ತಲುಪಲು ಕಡಿಮೆ ಅಂದರೂ ಹತ್ತು ತಾಸು ಬೇಕು. ಉದ್ದಕ್ಕೂ ತಿಂಡಿ, ತಿನಿಸುಗಳ ಅಂಗಡಿಗಳು ಇವೆ. ಪರೋಟ, ಮ್ಯಾಗಿ, ಅನ್ನ- ಸಾರು, ಕುಡಿಯಲು ಟೀ ಮತ್ತು ಕೂಲ್‌ ಡ್ರಿಂಕ್ಸ್‌ ಸಿಗುತ್ತವೆ.

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next