Advertisement

ತಿಂಗಳಾದ್ರೂ ಮೊಸರು ಕೆಡಲ್ಲ, ರೆಫ್ರಿಜರೇಟರ್‌ ಅಗತ್ಯವಿಲ್ಲ

03:45 AM Feb 15, 2017 | Harsha Rao |

ಬೆಂಗಳೂರು: ನೀವು ಎಷ್ಟು ದಿನ ಮೊಸರನ್ನು ಕೆಡದಂತೆ ಸಂರಕ್ಷಿಸಿ ಇಡಬಹುದು? ಎರಡು ದಿನ, ಅಬ್ಬಬ್ಟಾ ಎಂದರೆ ನಾಲ್ಕು ದಿನ. ಆದರೆ, ಈಗ ಯಾವುದೇ ರೆಫ್ರಿಜರೇಟರ್‌ ಸಹಾಯವಿಲ್ಲದೆ ತಿಂಗಳುಗಟ್ಟಲೆ ಇಟ್ಟು ಸೇವಿಸಬಹುದಾದ
ಮೊಸರು ಮಾರುಕಟ್ಟೆಗೆ ಬರಲಿದೆ.

Advertisement

ಹೌದು, ರಕ್ಷಣಾ, ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ತಿಂಗಳುಗಟ್ಟಲೆ ಇಟ್ಟರೂ ಕೆಡದಂತಹ ಮೊಸರು ತಯಾರಿಸುವ ಯಂತ್ರ ಪರಿಚಯಿಸಿದೆ.
ಗುಡ್ಡಗಾಡು, ಅತಿ ಬಿಸಿಲು ಅಥವಾ ಅತಿ ಶೀತ ಪ್ರದೇಶಗಳಲ್ಲಿ ಸೈನಿಕರು ವಾರಗಟ್ಟಲೆ ಕಳೆಯಬೇಕಾಗುತ್ತದೆ. ಅಂತಹ ಎಲ್ಲ ಪ್ರಕಾರದ ವಾತಾವರಣಕ್ಕೂ ಹೊಂದಿಕೊಳ್ಳುವಂತಹ ಬ್ಯಾಕ್ಟೀರಿಯಾಗಳನ್ನು ಗುರುತಿಸಿ, ಬೇರ್ಪಡಿಸಿ
ತಿಂಗಳುಗಟ್ಟಲೆ ಇಟ್ಟರೂ ಹುಳಿಯಾಗದಂತೆ ಅಥವಾ ಕೆಡದಂತಹ ಮೊಸರು ತಯಾರಿಸುವ ಯಂತ್ರವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ಯಂತ್ರವನ್ನು ವೈಮಾನಿಕ ಪ್ರದರ್ಶನದಲ್ಲಿ ಇಡಲಾಗಿದೆ.

ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಪರಿಚಯಿಸಿದ ಈ ಯಂತ್ರದಲ್ಲಿ ಲ್ಯಾಕ್ಟಿಕ್‌ ಆ್ಯಸಿಡ್‌ ಎಂಬ ಬ್ಯಾಕ್ಟೀರಿಯಾ ಗುರುತಿಸುವ ಅಂಶ ಇದ್ದು, ಅದು ಆ ಬ್ಯಾಕ್ಟೀರಿಯಾವನ್ನು ಬೇರ್ಪಡಿಸುತ್ತದೆ. ಇದರಿಂದ ಮೊಸರು ಒಂದು ಹಂತ ತಲುಪಿದ ನಂತರ ಹುಳಿಯಾಗುವುದಿಲ್ಲ. ಯೋಧರಿಗಾಗಿ ಇದನ್ನು ಕಂಡು ಹಿಡಿದಿದ್ದರೂ, ಸಾಮಾನ್ಯ ಜನ ಕೂಡ
ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಪ್ರಯೋಗಾಲಯದ ತಾಂತ್ರಿಕ ಅಧಿಕಾರಿ ನಾಗರಾಜು ತಿಳಿಸಿದ್ದಾರೆ.

“ಗುಡ್‌ ಲೈಫ್’ ಮಾದರಿ ಮೊಸರು?: ಈ ಯಂತ್ರ ಕಂಡುಹಿಡಿದ ಉದ್ದೇಶ ದೇಶದ ಗಡಿ ಕಾಯುವ ಸೈನಿಕರು ವಿವಿಧ ಪ್ರಕಾರದ ವಾತಾವರಣದಲ್ಲಿ ಇರುತ್ತಾರೆ. ಅದೆಲ್ಲದಕ್ಕೂ ಹೊಂದಿಕೊಳ್ಳುವ ಮೊಸರನ್ನು ಪೂರೈಸುವುದಾಗಿದೆ. ಕಂಪೆನಿಗಳು ಯಾರಾದರೂ ಮುಂದೆ ಬಂದರೆ, ಅವರಿಗೆ ಈ ಯಂತ್ರವನ್ನು ಷರತ್ತುಗಳಡಿ ಪೂರೈಸಲಾಗುವುದು.
ಆ ಮೂಲಕ ಸಾಮಾನ್ಯರಿಗೂ “ಗುಡ್‌ ಲೈಫ್’ ನಂದಿನಿ ಹಾಲಿನಂತೆಯೇ ದೀರ್ಘ‌ ಬಾಳಿಕೆಯ ಮೊಸರು ಸವಿಯಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕಲಬೆರಕೆ ಹಾಲು ಪತ್ತೆಗೆ ಸ್ಟ್ರಿಪ್‌: ಕಲಬೆರಕೆ ಹಾಲು ಕಂಡುಹಿಡಿಯಲಿಕ್ಕೂ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಹೊಸ ವಿಧಾನವನ್ನು ಕಂಡುಹಿಡಿದಿದೆ. ಒಂದೆರಡು ಇಂಚು ಉದ್ದದ ಹಾಳೆಯ ತುಣುಕಿನಿಂದ ಹಾಲಿನ ಗುಣಮಟ್ಟವನ್ನು ನಿರ್ಧರಿಸುವ ಸರಳ ವಿಧಾನವನ್ನು ಪ್ರಯೋಗಾಲಯದ ವಿಜ್ಞಾನಿಗಳು ಪರಿಚಯಿಸಿದ್ದಾರೆ.

Advertisement

“ಹಾಲು ಪರೀಕ್ಷಾ ಕಿಟ್‌’ನ್ನು ವಿಜ್ಞಾನಿಗಳು ಪರಿಚಯಿಸಿದ್ದು, ಅದರಲ್ಲಿ ಹಾಲಿನ ಗುಣಮಟ್ಟವನ್ನು ನಿರ್ಧರಿಸುವ ರಾಸಾಯನಿಕ ಪದಾರ್ಥ ಲೇಪಿತ ಸಣ್ಣ ಹಾಳೆಯ ತುಣುಕುಗಳಿರುತ್ತವೆ. ಹಾಲಿನ ಮಾದರಿಯನ್ನು ತೆಗೆದುಕೊಂಡು, ಅದರಲ್ಲಿ ಕಿಟ್‌ನಲ್ಲಿರುವ ಒಂದು “ಸ್ಟ್ರಿಪ್‌’ (ಹಾಳೆ ತುಣುಕು) ಅದ್ದಿದರೆ ಸಾಕು, ಹಾಲಿನ ನಿಜವಾದ ಬಣ್ಣ ಬಯಲಾಗುತ್ತದೆ ಎಂದು ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ಅಧಿಕಾರಿ ಶ್ರೀಹರಿ ತಿಳಿಸಿದರು. 

ನೀರೇ ಬೇಡ
ವಾಯುಪಡೆ ಯೋಧರಿಗೆ ತುರ್ತು ಸಂದರ್ಭದಲ್ಲಿ ಆಹಾರ ಒದಗಿಸುವ “ಎಮರ್ಜನ್ಸಿ ಫ್ಲೈಯಿಂಗ್‌ ರೇಷನ್‌’ನ್ನು
ಪರಿಚಯಿಸಲಾಗಿದೆ. ಚಾಕೊಲೇಟ್‌ ಮಾದರಿಯ ಆಹಾರ ಸೇವಿಸಿದ ನಂತರ ನೀರಿನ ಅವಶ್ಯಕತೆಯೇ ಬರುವುದಿಲ್ಲ.
ಯುದ್ಧ ವಿಮಾನ ಹಾರಾಟದ ಸಂದರ್ಭದಲ್ಲಿ ಈ ಆಹಾರವನ್ನು ಪೈಲಟ್‌ ಆಸನದ ಕೆಳಗೆ ಇಡಲಾಗಿರುತ್ತದೆ. ತುರ್ತು
ಸಂದರ್ಭದಲ್ಲಿ ನಾಲ್ಕು ದಿನಗಟ್ಟಲೆ ಎಲ್ಲೋ ದೂರದ ಪ್ರದೇಶಗಳಿಗೆ ಹೋಗಿಬಿಡಬಹುದು. ಅಲ್ಲಿ ನೀರಿನ ಲಭ್ಯತೆಯೂ ಇಲ್ಲದಿರಬಹುದು. ಅಂತಹ ಸನ್ನಿವೇಶದಲ್ಲಿ ಈ ಚಾಕೋಲೇಟ್‌ ಸೇವಿಸಿದರೆ ಸಾಕು, ನೀರೇ ಬೇಡ.

Advertisement

Udayavani is now on Telegram. Click here to join our channel and stay updated with the latest news.

Next