Advertisement

ಪುಷ್ಪಲತಾ, ಕಕ್ಕೂರು ಕೊಲೆ: ಸತ್ಯಾಸತ್ಯತೆ ಬಯಲಿಗೆ ತನ್ನಿ

04:35 AM Jul 12, 2017 | Karthik A |

ಪುತ್ತೂರು: ಉಪ್ಪಿನಂಗಡಿ ಪುಷ್ಪಲತಾ, ಕಕ್ಕೂರು ವೆಂಕಟರಮಣ ಭಟ್‌ ಕುಟುಂಬ ಕೊಲೆ ಪ್ರಕರಣ ಸಂಭವಿಸಿ ಕೆಲವು ವರ್ಷಗಳೇ ಕಳೆದರೂ ಪ್ರಕರಣದ ಅಂತಿಮ ಸತ್ಯ ಹೊರ ಬಂದಿಲ್ಲ. ಹಾಗಾಗಿ ಪೊಲೀಸ್‌ ಇಲಾಖೆ ಮುತುವರ್ಜಿ ವಹಿಸಿ,ಎರಡೂ ಘಟನೆಗಳ  ಸತ್ಯಾಸತ್ಯೆಯನ್ನು ಬಯಲಿಗೆ ತರುವಂತೆ ಶಾಸಕಿ ಶಕುಂತಳಾ ಟಿ. ಶೆಟ್ಟಿ  ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದ್ದಾರೆ. ಪುತ್ತೂರು ತಾ.ಪಂ. ತ್ತೈಮಾಸಿಕ ಕೆಡಿಪಿ ಸಭೆ ತಾ.ಪಂ.ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಅಧ್ಯಕ್ಷತೆ ವಹಿಸಿದ್ದರು.

Advertisement

ಪಾಲನ ವರದಿ ಚರ್ಚೆಯ ಸಂದರ್ಭ ವಿಷಯ ಪ್ರಸ್ತಾಪಿಸಿದ ಶಾಸಕಿ, 5 ವರ್ಷಗಳ ಹಿಂದೆ ಕಕ್ಕೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ, ಅನಂತರ ಯಜಮಾನ ಆತ್ಮಹತ್ಯೆ ರೀತಿಯಲ್ಲಿ ಪತ್ತೆಯಾಗಿದ್ದ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ಅಲ್ಲಿಂದ ವರದಿ ಬಂದಿದೆ ಎಂದು ಅಂದಿನ ತನಿಖಾಧಿಕಾರಿ ಹೇಳಿಕೆ ನೀಡಿದ್ದರೂ ವರದಿಯಲ್ಲಿ ಏನಿದೆ ಅನ್ನುವುದು ಇನ್ನೂ ಬಹಿರಂಗವಾಗಿಲ್ಲ. ಅಲ್ಲಿನ ಜನರು ಪ್ರಕರಣದ ತನಿಖೆ ಏನಾಗಿದೆ ಎಂದು ಪ್ರಶ್ನಿಸುತ್ತಿದ್ದಾರೆ.

ಅದೇ ರೀತಿ ಉಪ್ಪಿನಂಗಡಿಯಲ್ಲಿ ಗೃಹಿಣಿ ಪುಷ್ಪಲತಾ ಸಾವಿನ ಪ್ರಕರಣಕ್ಕೆ 3 ವರ್ಷಗಳು ಸಂದಿವೆ. ಅದು ಕೊಲೆಯೋ, ಆತ್ಮಹತ್ಯೆಯು ಎನ್ನುವುದು ಬಹಿರಂಗವಾಗಿಲ್ಲ. ವರದಿ ಮುಚ್ಚಿದ ಲಕೋಟೆಯಲ್ಲಿದೆ ಎಂಬ ಉತ್ತರ ಪೊಲೀಸ್‌ ಇಲಾಖೆಯಿಂದ ಬಂದಿದ್ದರೂ ಅದರಲ್ಲಿ ಏನಿದೆ ಅನ್ನುವುದು ಹೊರ ಬಂದಿಲ್ಲ. ಈ ತನಕ ಲಕೋಟೆ ತೆರೆದಿಲ್ಲ ಯಾಕೆ ಎಂದು ಶಾಸಕಿ ಪ್ರಶ್ನಿಸಿದರು. ಇಲಾಖೆ ಪರವಾಗಿ ಉತ್ತರಿಸಿದ ಅಧಿಕಾರಿ, ಮೇಲಧಿಕಾರಿಗಳು ಕಲ್ಲಡ್ಕದಲ್ಲಿ ಭದ್ರತಾ ಕರ್ತವ್ಯ ದಲ್ಲಿ ಇರುವ ಕಾರಣ, ಸಭೆಗೆ ಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಅವರ ಬಳಿ ಇದೆ. ಕೆಡಿಪಿ ಸಭೆಯ ಪ್ರಸ್ತಾಪವನ್ನು ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಪೊಲೀಸ್‌ ಇಲಾಖೆ ಬಹುತೇಕ ಪ್ರಕರಣವನ್ನು ಭೇದಿಸಿ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಹಾಗಾಗಿ ಈ ಎರಡು ಪ್ರಕರಣಗಳಲ್ಲೂ ಜನರ ಆತಂಕ ದೂರವಾಗಿಸಲು, ನೈಜಾಂಶವನ್ನು ಪತ್ತೆ ಮಾಡಿ ಬೆಳಕಿಗೆ ತರುವಂತೆ ಶಾಸಕಿ ಸೂಚನೆ ನೀಡಿದರು.

ಕಳ್ಳರನ್ನು ಮಟ್ಟ ಹಾಕಿ
ಜಿ.ಪಂ. ಕೈಗಾರಿಕೆ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ ಮಾತನಾಡಿ, ನೆಲ್ಯಾಡಿ ಪರಿಸರದಲ್ಲಿ ಕಳ್ಳತನ ಪ್ರಕರಣ ವರದಿ ಆಗುತ್ತಿದೆ. ಸ್ಥಳೀಯ ಕಳ್ಳರದ್ದೇ ಕೈವಾಡ ಇರಬಹುದು. ಹಾಗಾಗಿ ಬೀಟ್‌ ವ್ಯವಸ್ಥೆಯ ಮೂಲಕ ಪೊಲೀಸ್‌ ಇಲಾಖೆ ಕಳ್ಳರನ್ನು ಮಟ್ಟ ಹಾಕುವಂತೆ ಸಲಹೆ ನೀಡಿದರು. ಪೆರಾಬೆ ಪರಿಸರದಲ್ಲಿ ಮನೆಯೊಂದಕ್ಕೆ ಕಳ್ಳರು ನುಗ್ಗಿರುವ ಪ್ರಕರಣ ನಡೆದಿತ್ತು. ಮನೆ, ಅಂಗಡಿ ಕಳ್ಳತನ ಪ್ರಕರಣ ಬಗ್ಗೆಯೂ ನಿಗಾವಹಿಸುವಂತೆ ಶಾಸಕಿ ಸೂಚನೆ ನೀಡಿದರು.

ಕಳವಾದ ಕಂಪ್ಯೂಟರ್‌ ಪೊಲೀಸ್‌ ಕಚೇರಿಯಲ್ಲಿ!
ಕೆಡಿಪಿ ಸದಸ್ಯ ಅಶ್ರಫ್‌ ಬಸ್ತಿಕಾರ್‌ ಮಾತನಾಡಿ, ಉಪ್ಪಿನಂಗಡಿ ಸರಕಾರಿ ಪ್ರ.ದ. ಕಾಲೇಜಿನಲ್ಲಿ ಕಂಪ್ಯೂಟರ್‌ ಕಳವಾದ ಪ್ರಕರಣ ನಡೆದಿತ್ತು. ಅನಂತರ ಕಳವಾದ ವಸ್ತು ವಾಪಾಸು ಬಂದಿತ್ತು. ಆ ಬಳಿಕ ಕದ್ದ ಮಾಲು ಪೊಲೀಸ್‌ ಠಾಣೆಗೆ ತರಲಾಗಿತ್ತು. ಕದ್ದವರು ಯಾರು ಅನ್ನುವುದು ಗೊತ್ತಿದೆ. ಆದರೆ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಅವರು ಪ್ರಶ್ನಿಸಿದರು. ಕಂಪ್ಯೂಟರ್‌ ಈಗ ಪೊಲೀಸ್‌ ಇಲಾಖೆಯಲ್ಲಿದೆ. ಅಲ್ಲೇ ಇಟ್ಟಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಕಳ್ಳ ಯಾರು ಅಂತಾ ಗೊತ್ತಿದ್ದರೂ ಆತನ ಮೇಲೆ ಕ್ರಮ ಕೈಗೊಳ್ಳದಿರುವುದು ಸರಿಯಾದ ಕ್ರಮ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಶಾಸಕಿ, ಆ ಘಟನೆಯ ಸತ್ಯ ಎಲ್ಲರಿಗೂ ತಿಳಿದಿದೆ. ತನಿಖೆಯ ದೃಷ್ಟಿಯಿಂದ ಕಂಪ್ಯೂಟರ್‌ ಅನ್ನು ಠಾಣೆಯಲ್ಲಿ ಇಟ್ಟಿರಬಹುದು ಎಂದರು. ಆದರೆ ಘಟನೆಗೆ ಸಂಬಂಧಿಸಿ ಉತ್ತರಿಸಲು ಉಪ್ಪಿನಂಗಡಿ ವ್ಯಾಪ್ತಿಯ ಪೊಲೀಸರು ಸಭೆಯಲ್ಲಿ ಉಪಸ್ಥಿತರಿರಲಿಲ್ಲ.

Advertisement

ಬ್ಯಾರಿಕೇಡ್‌ ಇದ್ದರೂ ಅಳವಡಿಸಿಲ್ಲ 
ಉಪ್ಪಿನಂಗಡಿಯಲ್ಲಿ ಬ್ಯಾರಿಕೇಡ್‌ ಇದ್ದರೂ ಅದನ್ನು ಅಳವಡಿಸಿಲ್ಲ ಎಂದು ಅಶ್ರಫ್‌ ಬಸ್ತಿಕಾರ್‌ ಗಮನ ಹರಿಸಿದರು. ಸಿಸಿ ಕೆಮರಾ ಅಳವಡಿಸಿದರೂ ಕಳ್ಳತನದ ವೇಳೆ ಕಳ್ಳರ ಚಟುವಟಿಕೆ ಪತ್ತೆ ಆಗುತ್ತಿಲ್ಲ ಎಂದು ಶಾಸಕಿ ಪ್ರಸ್ತಾವಿಸಿದರು. ಪೊಲೀಸ್‌ ಇಲಾಖೆಗೆ ಸಂಬಂಧಿಸಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಗೌಡ, ತಹಶೀಲ್ದಾರ್‌ ಅನಂತಶಂಕರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್‌ ಮೊದಲಾದವರು ಉಪಸ್ಥಿತರಿದ್ದರು.

ಪೊಲೀಸ್‌ ಇಲಾಖೆಗೆ ಅಭಿನಂದನೆ
ಜಿಲ್ಲೆಯ ವಿವಿಧೆಡೆ ಅಶಾಂತಿ ವಾತಾವರಣ ಉಂಟಾದ ಸಂದರ್ಭದಲ್ಲಿ, ಪುತ್ತೂರಿನಲ್ಲಿ ಶಾಂತಿ ಸುವ್ಯವಸ್ಥೆ ಧಕ್ಕೆ ತರುವ ಘಟನೆ ಆಗದಂತೆ ಪೊಲೀಸ್‌ ಇಲಾಖೆ ನಿಗಾ ಇರಿಸಿದ್ದು ಶ್ಲಾಘನೀಯ. ಅದಕ್ಕಾಗಿ ಇಲ್ಲಿನ ಪೊಲೀಸ್‌ ಸಿಬಂದಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಶಾಸಕಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಾಗ, ಯಾವುದೇ ರಾಜಕಾರಣಿಗಳ, ಪಕ್ಷಗಳ, ಜನಪ್ರತಿನಿಧಿಗಳ ಒತ್ತಡಕ್ಕೆ  ಒಳಗಾಗದೆ, ಅಶಾಂತಿ ಕದಡುವವರ ವಿರುದ್ಧ  ಕಠಿನ ಕ್ರಮ ಕೈಗೊಳ್ಳುವಂತೆ ಅವರು  ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದರು.

ಮಾದಕ ವಸ್ತು: ಜಾಗೃತಿ ಮೂಡಿಸಿ 
ವಿದ್ಯಾರ್ಥಿಗಳನ್ನು ಗುರಿಯಾಗಿಸಿ, ಮಾದಕ ಪದಾರ್ಥ ಪೂರೈಕೆ ಜಾಲ ಹಬ್ಬಿರುವ ಬಗ್ಗೆ ವರದಿ ಇದ್ದು, ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗದಂತೆ ಪೊಲೀಸ್‌ ಇಲಾಖೆ ಆಯಾ ಶಾಲಾ -ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವಂತೆ ಶಾಸಕಿ ಶಕುಂತಳಾ ಟಿ. ಶೆಟ್ಟಿ  ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next