Advertisement

ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸಲು ತಾಕೀತು

09:36 AM Jun 27, 2020 | Suhan S |

ಚಿಕ್ಕಮಗಳೂರು: ತಾಲೂಕಿನಲ್ಲಿ ಕೆಲವುಗ್ರಾಮಗಳಲ್ಲಿ ಸ್ಮಶಾನವಿಲ್ಲವೆಂಬ ದೂರುಗಳಿದ್ದು, ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸಬೇಕು. ಪರ್ಯಾಯ ಜಾಗ ಗುರುತಿಸುವ ಮೂಲಕ ಆದ್ಯತೆ ವಿಚಾರವಾಗಿ ತೆಗೆದುಕೊಂಡು ಕೆಲಸ ಮಾಡಬೇಕೆಂದು ಸಚಿವ ಸಿ.ಟಿ.ರವಿ ತಹಶೀಲ್ದಾರ್‌ ಕಾಂತ್‌ ರಾಜ್‌ ಅವರಿಗೆ ಸೂಚಿಸಿದರು.

Advertisement

ಶುಕ್ರವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ತಾಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ 36 ಕಂದಾಯ ಗ್ರಾಮಗಳಲ್ಲಿ ಸ್ಮಶಾನವಿಲ್ಲ. ಮನುಷ್ಯನಿಗೆ ವಾಸಕ್ಕೆ ವಸತಿ ಎಷ್ಟು ಮುಖ್ಯವೋ ಅದೇರೀತಿ ಪ್ರತಿ ಗ್ರಾಮಕ್ಕೂ ಸ್ಮಶಾನ ಅಷ್ಟೇಮುಖ್ಯ. ಜಾಗ ಗುರುತಿಸಿ ಸ್ಮಶಾನ ನಿರ್ಮಾಣಕ್ಕೆ ತ್ವರಿತವಾಗಿ ಆದ್ಯತೆ ಕೆಲಸವಾಗಿ ತೆಗೆದುಕೊಳ್ಳಬೇಕು ಎಂದರು.

ಹಿರೇಕೊಳಲೇ ಗ್ರಾಮದಲ್ಲಿ ಸ್ಮಶಾನ ನಿಮಾರ್ಣಕ್ಕೆ ಜಾಗ ಗುರುತಿಸಲು ಹೇಳಿ. ಒಂದು ವರ್ಷ ಕಳೆದಿದೆ. ಇನ್ನೂ ಸರ್ವೇ ಕಾರ್ಯ ಪೂರ್ಣಗೊಳಿಸಿಲ್ಲ. ಸಭೆಗೆ ಕಾಟಾಚಾರಕ್ಕೆ ಕೊಡುತ್ತೀರಾ. ಇನ್ನೂ ಒಂದು ವಾರದಲ್ಲಿ ಸರ್ವೇ ಕಾರ್ಯ ಪೂರ್ಣಗೊಳಿಸಿ ಸರ್ವೇ ವರದಿ ನೀಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಸ್ಮಶಾನ ನಿರ್ಮಾಣಕ್ಕೆ ಗ್ರಾಮಗಳಲ್ಲಿರುವ ಖಾಲಿ ಜಾಗವನ್ನು ಗುರುತಿಸಿ ಸರ್ವೇ ಕಾರ್ಯ ನಡೆಸಿ ಟ್ರಂಚ್‌ ನಿರ್ಮಿಸಬೇಕು. ಸ್ಮಶಾನ ಜಾಗ ಒತ್ತುವರಿಯಾಗಿದ್ದರೆ ಕಾನೂನು ಪ್ರಕಾರ ನೋಟಿಸ್‌ ನೀಡಿ ಒತ್ತುವರಿ ತೆರವುಗೊಳಿಸಬೇಕೆಂದು ತಿಳಿಸಿದರು. ಫಾರಂನಂ. 50, 53 ಅಡಿ ಅರ್ಜಿ ಸಲ್ಲಿಸಿರುವವರಿಗೆ ಸಾಗುವಳಿ ಚೀಟಿ ನೀಡಬೇಕು. ಭೂಮಿ ಗೋಮಾಳ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದರೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇಕಾರ್ಯ ನಡೆಸಿ ಭೂಮಿ ನೀಡಲು ಕ್ರಮಕೈಗೊಳ್ಳಬೇಕೆಂದರು.  ಮುಜಾರಾಯಿ ಇಲಾಖೆ ವ್ಯಾಪ್ತಿಯಿಂದ ಹೊರಗಿರುವ ದೇವಾಲಯಗಳು ಸರ್ಕಾರಿ ಜಾಗದಲ್ಲಿವೇಯೇ ಅಥವಾ ಖಾಸಗಿ ಜಾಗದಲ್ಲಿವೆಯೇ ಎಂಬುದನ್ನು ಗುರುತಿಸಿ ದಾಖಲೀಕರಣ ಮಾಡಬೇಕೆಂದು ಸೂಚಿಸಿದರು.

ಜಿಪಂ ಸದಸ್ಯ ರವೀಂದ್ರಬೆಳವಾಡಿ ಮಾತನಾಡಿ, ತಾಲೂಕಿನಲ್ಲಿರುವ ದೇವಾಲಯಗಳಿಗೆ ಒಳಪಡುವ ಆಸ್ತಿಯೂ ಒತ್ತುವರಿ ನಡೆದಿದೆ. ಒತ್ತುವರಿ ತೆರವು ಕಾರ್ಯ ನಡೆಸಬೇಕು. ಆಗ ದೇವಾಲಯಗಳ ಆಸ್ತಿ ಉಳಿಸಲು ಸಾಧ್ಯವಾಗಲಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್‌ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಅವಕಾಶ ನೀಡಲಾಗಿದೆ. ಆದರೆ ಪೋಷಕರು ಮಕ್ಕಳನ್ನು ದಾಖಲು ಮಾಡಲು ಮುಂದಾಗಿಲ್ಲ. ತಾಲೂಕಿನಲ್ಲಿ 44 ಶಾಲೆಗಳನ್ನು ಮಕ್ಕಳ ಕೊರತೆಯಿಂದಾಗಿ ಮುಚ್ಚಲಾಗಿದೆ. ಇದರಿಂದಾಗಿ 120 ಹೆಚ್ಚುವರಿ ಶಿಕ್ಷಕರಿದ್ದಾರೆ. ಹಾಗಾಗಿ ತಾಲೂಕಿನಲ್ಲಿರುವ ಶಾಲೆಗಳ ಪೈಕಿ ಎಲ್ಲೂ ಶಿಕ್ಷಕರ ಕೊರತೆ ಎಂದರು.

Advertisement

ಅರ್ಧಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ಜೋಡಿಸಬೇಕು. ಮಕ್ಕಳ ಓಡಾಟಕ್ಕೆ ವಾಹನ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚುವರಿ ಶಿಕ್ಷಕರನ್ನು ಯಾವ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಅಲ್ಲಿಗೆ ನಿಯೋಜನೆ ಮಾಡಬೇಕೆಂದು ಸಚಿವ ಸಿ.ಟಿ.ರವಿ ತಿಳಿಸಿದರು.

ಆಲ್ದೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾನು ಓದಿದ ಶಾಲೆ. ಶಿಕ್ಷಕರ ಕೊರತೆ, ಬೇರೆ ಏನಾದರೂ ಸಮಸ್ಯೆಗಳು ಇದ್ದಲ್ಲಿ ತಿಳಿಸಿದರೆ ಕ್ರಮ ವಹಿಸುತ್ತೇನೆಂದರು. ತಾಲೂಕು ಆರೋಗ್ಯಾ ಧಿಕಾರಿ ಮಾತನಾಡಿ, ಕೆ.ಆರ್‌.ಪೇಟೆ ನೂದನಿಕೆ ಗ್ರಾಮದಲ್ಲಿ ಒಂದು ಕೋವಿಡ್‌-19 ಪ್ರಕರಣ ಕಂಡು ಬಂದಿದ್ದು, ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಪತ್ತೆ ಮಾಡಿ ಕ್ವಾರಂಟೈನ್‌ ಮಾಡಲಾಗಿದೆ ಎಂದರು.

ತಾಪಂ ಇಒ ರೇವಣ್ಣ ಮಾತನಾಡಿ, ತಾಲೂಕಿನಲ್ಲಿ 304 ಹೋಂ ಸ್ಟೇಗಳಿವೆ. 235 ಹೋಂಸ್ಟೇಗಳು ನೋಂದಣಿಯಾಗಿವೆ. ಅನಧಿಕೃತ ಹೋಂಸ್ಟೇ ವಿರುದ್ಧ ಕ್ರಮಕ್ಕೆ ಸಭೆ ನಡೆಸಲಾಗಿದೆ ಎಂದರು. ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ, ಹೋಂಸ್ಟೇಗಳು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಘನತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ದೂರುಗಳಿದ್ದು, ವೈಜ್ಞಾನಿಕವಾಗಿ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಮಾಲೀಕರಿಗೆ ಕಾರ್ಯಾಗಾರ ನಡೆಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌, ತಾಪಂಚಾಯತ್‌ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಉಪಾಧ್ಯಕ್ಷೆ ಶಾರದಾ, ಜಿಪಂ ಉಪಾಧ್ಯಕ್ಷ ಸೋಮಶೇಖರ್‌, ಜಿಪಂ ಸದಸ್ಯೆ ಜಸಿಂತಾ ಅನಿಲ್‌ಕುಮಾರ್‌, ಹಿರಿಗಯ್ಯ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಅನಿಲ್‌ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಯಗಚಿ ಹಳ್ಳದ ಜಾಗ ಒತ್ತುವರಿಯಾಗಿದ್ದಲ್ಲಿ ಕೂಡಲೇ ತೆರವು ಮಾಡಬೇಕು. ಬಫರ್‌ ಝೋನ್‌ ಜಾಗವಾಗಿದ್ದರೂ ಒತ್ತುವರಿ ತೆರವುಗೊಳಿಸಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ಹಾಕಿಸಿ, ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. – ಸಿ.ಟಿ.ರವಿ, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next