ಶಿರಸಿ: ಈಗಾಗಲೇ ಗರಿ ಗೆದರಿದ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿ ಚುನಾವಣೆ ಅಖಾಡ ರಂಗೇರಲು ಶುಕ್ರವಾರದಿಂದ ಆರಂಭಗೊಂಡಿದೆ. ನಾಮಪತ್ರ ಸಲ್ಲಿಕೆ ಪ್ರಥಮ ದಿನವೇ ತುರುಸು ಉಂಟಾಗಿದೆ. ಹದಿನಾಲ್ಕು ಆಕಾಂಕ್ಷಿಗಳಿಂದ 22 ನಾಮಪತ್ರಗಳು ಸಲ್ಲಿಕೆಯಾಗಿವೆ.
ಶುಕ್ರವಾರದಿಂದಲೇ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಆವಾರದಲ್ಲಿ ಬೆಂಬಲಿಗರ ಜೊತೆ ಬಂದ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹಳಬರ ಜೊತೆ ಹೊಸ ಮುಖಗಳೂ ನಾಮಪತ್ರ ಸಲ್ಲಿಸುತ್ತಿರುವುದು ವಿಶೇಷ. ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದವರೂ ಕೆಡಿಸಿಸಿ ಗಾದಿಯ ಕನಸು ಹೆಣೆಯುತ್ತಿದ್ದಾರೆ. ಮಾಜಿ ಶಾಸಕ ಮಂಕಾಳು ವೈದ್ಯ, ನಿಕಟಪೂರ್ವ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ನಿಕಟಪೂರ್ವ ನಿರ್ದೇಶಕ ಷಣ್ಮುಖ ಗೌಡ, ನಿಕಟಪೂರ್ವ ನಿರ್ದೇಶಕ ಜಿ.ಆರ್. ಹೆಗಡೆ ಸೋಂದಾ ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಿದ್ದರೆ, ಟಿಎಸ್‌ಎಸ್ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಬೆಳ್ಳೇಕೇರಿಯ ಜಿ.ಆರ್. ಹೆಗಡೆ, ಸಿದ್ದಾಪುರದ ಗಡಿಹಿತ್ಲು ವಿವೇಕ, ಕಾಮಧೇನು ಸೊಸೈಟಿಯ ವಿನಾಯಕ ಮುಂಡಗೇಸರ ಸೇರಿದಂತೆ ಹೊಸಬರೂ ನಾಮಪತ್ರ ಸಲ್ಲಿಸಿದ್ದಾರೆ.
ಸಿದ್ದಾಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಅಲ್ಲಿನ ತಾಪಂ ಸದಸ್ಯ ವಿವೇಕ ಭಟ್ಟ ಗಡಿಹಿತ್ಲು, ಮಾಜಿನಿರ್ದೇಶಕ, ಅಪೆಕ್ಸ್ ಬ್ಯಾಂಕ್ ನಿರ್ದೇಶಕರೂ ಆಗಿದ್ದ ಷಣ್ಮುಖ ಗೌಡ, ಜೋಯಿಡಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಕೃಷ್ಣ ಶಾಂತಾರಾಮ ದೇಸಾಯಿ, ಗ್ರಾಹಕರ ಸಹಕಾರಿ ಸಂಘಗಳು ಹಾಗೂ ಮತ್ತು ಸಂಸ್ಕರಣ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಜಿ.ಆರ್. ಹೆಗಡೆ ಸೋಂದಾ, ಪತ್ರಕರ್ತರಾಗಿ ಕಾರ್ಯ ಮಾಡಿದ್ದ ವಿನಾಯಕ ಹೆಗಡೆ ಮುಂಡಿಗೇಸರ ನಾಮಪತ್ರ ಸಲ್ಲಿಸಿದ್ದಾರೆ.
ಔದ್ಯೋಗಿಕ ಸಹಕಾರಿ ಸಂಘಗಳ ಮತ ಕ್ಷೇತ್ರದಿಂದ ಜಿ.ಟಿ. ಹೆಗಡೆ ತಟ್ಟಿಸರ ಹಾಗೂ ಹೊನ್ನಾವರದ ತಲಗೆರೆ ವಿಶ್ವನಾಥ ಸುಬ್ರಾಯ ಭಟ್ಟ, ಅರ್ಬನ್ ಬ್ಯಾಂಕ್ ಮತ್ತು ಕೃಷಿಯೇತರ ಸಹಕಾರಿ ಸಂಘಗಳಿಂದ ಎಸ್.ಎಂ. ಹೆಗಡೆಮಾನಿಮನೆ ನಾಮಪತ್ರ ಸಲ್ಲಿಸಿದ್ದರೆ, ಕಾರವಾರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಪ್ರಕಾಶ ಗುನಗಿ, ಸುರೇಶ ಪೆಡ್ನೆಕರ್, ಶಿರಸಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ರಾಮಕೃಷ್ಣ ಹೆಗಡೆ ಕಡವೆ, ಯಡಹಳ್ಳಿ ಸೊಸೈಟಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ನಾಮಪತ್ರ ಸಲ್ಲಿಸಿದ್ದಾರೆ.
ಹಾಲು ಉತ್ಪಾದಕರ, ಕಾರ್ಮಿಕರ, ಕೂಲಿಕಾರರ ಹಾಗೂ ಇತರೇ ಸಹಕಾರಿ ಸಂಘಗಳಿಂದ ಭಾಸ್ಕರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಶಿವರಾಮ ಹೆಬ್ಟಾರ್, ಶ್ರೀಕಾಂತ ಘೋಕ್ಲೃಕರ್, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಸಲಿದ್ದಾರೆ.