Advertisement

ನೈಋತ್ಯ ವಲಯಕ್ಕೆ ವಿಲೀನ: ರೈಲ್ವೇ ಸಚಿವರಿಗೆ ಕೆಸಿಸಿಐ ಮನವಿ

01:04 AM Dec 10, 2020 | mahesh |

ಮಂಗಳೂರು: ಮಂಗಳೂರಿನ ರೈಲ್ವೇ ಜಾಲವನ್ನು ನೈಋತ್ಯ ರೈಲ್ವೇ ವಲಯ ವ್ಯಾಪ್ತಿಗೆ ಸೇರಿಸುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ)ಯು ರೈಲ್ವೇ ಸಚಿವ ಪೀಯೂಷ್‌ ಗೋಯಲ್‌ ಅವರನ್ನು ಒತ್ತಾಯಿಸಿದೆ.

Advertisement

ಈ ಕುರಿತು ಕೆಸಿಸಿಐ ವತಿಯಿಂದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಮೂಲಕ ಕೇಂದ್ರ ರೈಲ್ವೇ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಮಂಗಳೂರು ಭಾಗದ ರೈಲು ಜಾಲವನ್ನು ನೈಋತ್ಯ ರೈಲ್ವೇ ವಲಯ ವ್ಯಾಪ್ತಿಗೆ ಸೇರಿಸಿ ಕರಾವಳಿ ಭಾಗದ ರೈಲ್ವೇ ಸವಲತ್ತು ಹೆಚ್ಚಿಸಬೇಕೆಂದು ಉದಯವಾಣಿಯು “ಬಲಗೊಳ್ಳಲಿ ಕರಾವಳಿಯ ರೈಲು ಜಾಲ’ ಎಂಬ ಅಭಿಯಾನವನ್ನು 15 ದಿನಗಳ ಕಾಲ ನಡೆಸಿತ್ತು. ಈ ಅಭಿಯಾನಕ್ಕೆ ಜನಪ್ರತಿನಿಧಿಗಳು, ರೈಲ್ವೇ ಬಳಕೆದಾರರ ಸಂಘಟನೆಗಳಿಂದಲೂ ಬೆಂಬಲ ವ್ಯಕ್ತವಾಗಿರುವ ಬೆನ್ನಲ್ಲೇ ಕೆಸಿಸಿಐ ಸಹ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದೆ.

ಕೆಸಿಸಿಐಯು ತನ್ನ ಮನವಿ ಪತ್ರದಲ್ಲಿ “ಮಂಗಳೂರಿನಿಂದ ಬೆಂಗಳೂರು, ಮುಂಬಯಿ ಮತ್ತು ಕೇರಳದ ಕಡೆಗೆ ರೈಲು ಸಂಪರ್ಕ ಇದ್ದರೂ, ಪ್ರಸ್ತುತ ಮಂಗಳೂರಿನ ರೈಲು ಜಾಲವು ದಕ್ಷಿಣ ವಲಯ, ನೈಋತ್ಯ ವಲಯ ಮತ್ತು ಕೊಂಕಣ ರೈಲು ನಿಗಮ ಎಂಬ ಮೂರು ಪ್ರತ್ಯೇಕ ಆಡಳಿತಗಳ ವ್ಯಾಪ್ತಿಗೆ ಬರುವುದರಿಂದ ಕರಾವಳಿ ಭಾಗದ ರೈಲು ಜಾಲ ಬಲಗೊಂಡಿಲ್ಲ. ರೈಲುಗಳ ನಿರ್ವಹಣೆ, ಹೊಸ ರೈಲುಗಳ ಆರಂಭ, ರೈಲು ಮಾರ್ಗ ಮತ್ತು ನಿಲ್ದಾಣಗಳ ಅಭಿವೃದ್ಧಿ ಇತ್ಯಾದಿ ಯಾವುದೇ ಕೆಲಸ ಆಗ ಬೇಕಿದ್ದರೂ ಈ ಎರಡು ವಲಯ ಮತ್ತು ನಿಗಮದ ಅನುಮತಿ ಅಗತ್ಯ. ಇವುಗಳ ಸಮನ್ವಯತೆಯ ಕೊರತೆ ಮತ್ತು ವಿಳಂಬ ನಿಲುವುಗಳು ಅಭಿವೃದ್ಧಿಗೆ ಹಿನ್ನಡೆ ತರುತ್ತಿವೆ. ಹೀಗಾಗಿ, ಮಂಗಳೂರಿನ ರೈಲು ಜಾಲವನ್ನು ಒಂದೇ ವಲಯದ ವ್ಯಾಪ್ತಿಗೆ ಸೇರಿಸುವ ಸಂಬಂಧ 2004ರಲ್ಲಿ ರೈಲ್ವೇ ಸಚಿವಾಲಯವು ಹೊರಡಿಸಿರುವ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.

“ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅಭಿವೃದ್ಧಿ ಚಟವಟಿಕೆಗಳಿಗೆ ಸಾಕಷ್ಟು ಅವಕಾಶಗಳಿವೆ. ಕೊಂಕಣ ರೈಲು ಮಾರ್ಗದಲ್ಲಿ ಸುರತ್ಕಲ್‌- ಮುಂಬಯಿ ನಡುವೆ ರೋ ರೋ ಸೇವೆ ಇದೆ. ಆದರೆ, ಇದನ್ನು ಸುರತ್ಕಲ್‌ನಿಂದ ಬೆಂಗಳೂರಿಗೆ ವಿಸ್ತರಿಸಲು 3 ರೈಲ್ವೇ ಆಡಳಿತಗಳ ಅನುಮತಿ ಅಗತ್ಯ. ಹಾಗಾಗಿ ಜಾರಿಯಾಗಿಲ್ಲ. ನವಮಂಗಳೂರು ಬಂದರಿನಲ್ಲಿ ರಫ್ತು ಮತ್ತು ಆಮದು ವ್ಯವಹಾರಕ್ಕೆ ಹೇರಳ ಅವಕಾಶಗಳಿವೆ.

ಎಂಆರ್‌ಪಿಎಲ್‌, ಪಾದೂರು ತೈಲ ಸಂಗ್ರಹಾಗಾರ ಇತ್ಯಾದಿ ಯೋಜನೆಗಳಿಗೆ ಕೇಂದ್ರದ ಅನುಮತಿ ಲಭಿಸಿದೆ. ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳ ವೇಗ ವರ್ಧನೆಗೆ ಹಾಗೂ ಈ ಭಾಗದ ಆರ್ಥಿಕ ಪ್ರಗತಿಗೆ ಮಂಗಳೂರು ರೈಲು ಜಾಲವನ್ನು ಒಂದೇ ವಲಯದ ವ್ಯಾಪ್ತಿಗೆ ತರುವುದು ಅತ್ಯಂತ ಆವಶ್ಯ ಎಂದು ಕೆಸಿಸಿಐ ಅಧ್ಯಕ್ಷ ಐಸಾಕ್‌ ವಾಸ್‌ ಅವರು ಕೇಂದ್ರ ರೈಲ್ವೇ ಸಚಿವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next