Advertisement

ಕೆ.ಸಿ.ವ್ಯಾಲಿ ನೀರು ಕುಡಿದು ಟಾಂಗ್‌ ಕೊಟ್ಟ ಶಾಸಕ

07:23 AM Feb 11, 2019 | Team Udayavani |

ಕೋಲಾರ: ಜಿಲ್ಲೆಯ ಅಂತರ್ಜಲ ಭರ್ತಿ ಉದ್ದೇಶದಿಂದ ಹರಿಸಿರುವ ಕೆ.ಸಿ. ವ್ಯಾಲಿ ನೀರಿನಿಂದ ಯಾವುದೇ ತೊಂದರೆಯಾಗಿಲ್ಲ. ವಿನಾಕಾರಣ ಒಂದು ಉತ್ತಮ ಯೋಜನೆಗೆ ವಿರೋಧ ವ್ಯಕ್ತಪಡಿಸುವುದೂ ಸರಿಯಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

Advertisement

ಭಾನುವಾರ ಕೆ.ಸಿ.ವ್ಯಾಲಿ ನೀರು ತುಂಬಿರುವ ತಾಲೂಕಿನ ಸಿಂಗೇನಹಳ್ಳಿ ಕೆರೆಗೆ ಮಾಧ್ಯಮದವರೊಂದಿಗೆ ಭೇಟಿ ನೀಡಿದ ಅವರು ಕೆಲವು ಮೀನುಗಳನ್ನು ಹಿಡಿಸಿದರಲ್ಲದೇ ಕೆರೆಯ ನೀರು ಕುಡಿದು, ರೈತರ ಪರವಾದ ಈ ಯೋಜನೆಗೆ ಅಡ್ಡಗಾಲು ಹಾಕುವವರು ಎಂದಿಗೂ ಉದ್ಧಾರ ಆಗುವುದಿಲ್ಲ ಎಂದು ಹಿಡಿ ಶಾಪ ಹಾಕಿದರು.

ಸ್ವಯಂ ಘೋಷಣೆ ಮುಖಂಡರು: ನಾವು ನೀರಾವರಿ ಹೋರಾಟಗಾರರು ಎಂದು ಸ್ವಯಂ ಘೋಷಿಸಿಕೊಂಡಿರುವ ಕೆಲವು ಮುಖಂಡರು, ಕೆ.ಸಿ.ವ್ಯಾಲಿ ಯೋಜನೆಯ ನೀರು ಕೆರೆಗಳಿಗೆ ಹರಿಯದಂತೆ ಸುಪ್ರೀಂಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇದಕ್ಕಿಂತ ಮುಂಚೆ ಹೈಕೋರ್ಟ್‌ನಲ್ಲಿ ಹಾಕಿದ್ದರು. ಅಲ್ಲಿ ತೀರ್ಪು ಸರ್ಕಾರದ ಪರ ಆಯಿತು ಎಂದರು.

ಇದೀಗ ಸುಪ್ರೀಂ ಕೋರ್ಟ್‌ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಸರ್ಕಾರ ಪ್ರಯತ್ನದಲ್ಲಿದೆ. ಅಲ್ಲಿಯೂ ಜಿಲ್ಲೆಯ ರೈತರ ಪರ ತೀರ್ಪು ಸಿಗುತ್ತದೆ. ಜನರಿಗೆ ತೊಂದರೆ ಮಾಡುವ ಹೋರಾಟಗಾರರಿಗೆ ದೇವರು ಒಳ್ಳೇದು ಮಾಡಲಿ ಎಂದು ವ್ಯಂಗ್ಯವಾಗಿ ತಿಳಿಸಿದರು.

ಏನೂ ಆಗಿಲ್ಲ: ಈ ಜನರಿಗೆ ಕೆ.ಸಿ.ವ್ಯಾಲಿ ಯೋಜನೆ ಉದ್ದೇಶ ತಿಳಿದಿದ್ದರೂ ಈ ರೀತಿ ಮಾಡಿದರೆ ಅವರಿಗೆ ಬರುವ ಲಾಭವಾದರೂ ಏನು. ಕೊಳಚೆ ನೀರು ಉಪಯೋಗಿಸಿಕೊಂಡೇ ತರಕಾರಿ ಬೆಳೆದು ಜಿಲ್ಲೆಯ ಮಾರುಕಟ್ಟೆಗೆ ತರುತ್ತಿದ್ದಾರೆ. ಅದನ್ನು ಸೇವಿಸಿದವರಿಗೆ ಏನಾದರೂ ಆಗಿದೆಯೇನು ಎಂದು ಪ್ರಶ್ನಿಸಿದರು.

Advertisement

ಅಭಿಪ್ರಾಯ ಪಡೆಯಿರಿ: ಗ್ರಾಮದ ರೈತ ಮುನಿರಾಜು, ಜಿಲ್ಲೆಯ ಜನತೆ ಸತತ ಬರಗಾಲದಿಂದ ರೋಸಿ ಹೋಗಿದ್ದಾರೆ. ರಮೇಶ್‌ ಕುಮಾರ್‌ ಅವರ ಪರಿಶ್ರಮದಿಂದ ಈ ಯೋಜನೆ ಅನುಷ್ಟಾನಗೊಂಡು ವರದಾನವಾಗಿದೆ. ನೀರು ಉಪಯೋಗಿಸುತ್ತಿರುವ ರೈತರ ಅಭಿಪ್ರಾಯ ಪಡೆಯಿರಿ, ಆಗುತ್ತಿರುವ ಅನುಕೂಲತೆ ಬಗ್ಗೆ ವಿವರ ನೀಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಕೋಲಾರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ನಿರ್ದೇಶಕರಾದ ಕೆ.ವಿ.ದಯಾನಂದ, ನಾಗನಾಳಸೋಮಣ್ಣ, ವೆಂಕಟಶಾಮಿ, ದೇವರಾಜ್‌, ಬಸಪ್ಪ, ವೀರಭದ್ರಚಾರಿ, ನಾಗರಾಜ್‌, ರವಿ, ಮಹೇಶ್‌, ಮಂಜುನಾಥ್‌ ಇದ್ದರು.

30 ಕೋಟಿ ರೂ.,ಆಮಿಷದಲ್ಲಿ 5 ಕೋಟಿರೂ. ಇಟ್ಟೋಗಿದ್ದರು!
ಕೋಲಾರ: ಬಿಜೆಪಿ ಆಪರೇಷನ್‌ ಕಮಲದ ಮೂಲಕ ತಮಗೆ 30 ಕೋಟಿ ರೂ., ಆಮಿಷವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಒತ್ತಾಯಿಸಿತ್ತೆಂದು ಶಾಸಕ ಕೆ.ಶ್ರೀನಿವಾಸಗೌಡ ಆರೋಪಿಸಿದರು. ನಗರದ ತಮ್ಮ ನಿವಾಸದಲ್ಲಿ ಭಾನುವಾರ ದಿಢೀರ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ತಮ್ಮನ್ನು ಬಿಜೆಪಿ ಸೆಳೆಯಲು ಆ ಪಕ್ಷದ ಮುಖಂಡರು ಮಾಡಿದ ಪ್ರಯತ್ನವನ್ನು ವಿವರಿಸಿದರು.

ಸುಮಾರು 3 ತಿಂಗಳ ಹಿಂದೆ ಬಿಜೆಪಿಯ ಡಾ.ಅಶ್ವತ್ಥನಾರಾಯಣ, ಯೋಗೀಶ್ವರ್‌ ಹಾಗೂ ವಿಶ್ವನಾಥ ಅವರು ಬೆಂಗಳೂರಿನ ತಮ್ಮ ನಿವಾಸಕ್ಕೆ ಬಂದು ಆಪರೇಷನ್‌ ಕಮಲದ ರೂಪುರೇಷೆ ವಿವರಿಸಿದ್ದರು. ಈ ವೇಳೆ ತಮಗೆ 30 ಕೋಟಿ ರೂ.ಗಳ ಆಮಿಷವೊಡ್ಡಲಾಗಿತ್ತು.

ಅಂದು ಬಿಜೆಪಿ ಮುಖಂಡರು ಮಾತುಕತೆ ಮುಗಿಸಿ ತೆರಳುವಾಗ 5 ಕೋಟಿ ರೂ.ವನ್ನು ಇಟ್ಟು ಹೋಗಿದ್ದರು. ಇದನ್ನು ಆನಂತರ ಗಮನಿಸಿ ತಾವು ಮುಖಂಡರಿಗೆ ತಿಳಿಸಿದಾಗ ಅವರು ಅದು ನಿಮಗಾಗಿಯೇ ಇಟ್ಟಿರುವುದು, ಕೆಲಸ ಪೂರ್ಣಗೊಂಡ ನಂತರ ಇನ್ನು 25 ಕೋಟಿ ರೂ. ತಲುಪಿಸುವುದಾಗಿ ಹೇಳಿದ್ದರು ಎಂದರು.

ಅಶೋಕ್‌ರ ಮೂಲಕ ಹಣ ವಾಪಸ್‌: ಆ ನಂತರ ಹಲವಾರು ಬಾರಿ ತಾವು ಬಿಜೆಪಿ ಮುಖಂಡರಿಗೆ ಹಣ ವಾಪಸ್‌ ಪಡೆಯುವಂತೆ ಹೇಳಿದ್ದರೂ ಅವರು ವಾಪಸ್‌ ಪಡೆದುಕೊಂಡಿರಲಿಲ್ಲ. 2 ತಿಂಗಳ ನಂತರ ಬಿಜೆಪಿ ಮುಖಂಡ ಆರ್‌.ಅಶೋಕ್‌ರ ಮೂಲಕ 5 ಕೋಟಿ ರೂ.ವನ್ನು ವಾಪಸ್‌ ನೀಡಿದ್ದಾಗಿ ಸ್ಪಷ್ಟಪಡಿಸಿದರು. ಆಪರೇಷನ್‌ ಕಮಲಕ್ಕೆ ತುತ್ತಾಗುವ ಆಸೆ ಇತ್ತೇ ಎಂಬ ಪ್ರಶ್ನೆಗೆ, ತಾವು ಸಿ.ಬೈರೇಗೌಡರೊಂದಿಗೆ ಸೇರಿ 3 ದಶಕಗಳ ಹಿಂದೆಯೇ ಮೊಯ್ಲಿ ಟೇಪ್‌ ಹಗರಣ ಬಯಲಿಗೆ ತಂದಿದ್ದು, ಅಂತಹ ಹಿನ್ನೆಲೆಯ ತಮ್ಮನ್ನು ಬಿಜೆಪಿ ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿಗೆ ಹೋಗಲು ನಿಮಗೆ ಆಸೆ ಇತ್ತೇ ಅದಕ್ಕಾಗಿ 2 ತಿಂಗಳು 5 ಕೋಟಿಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದೀರಾ ಎಂಬ ಪ್ರಶ್ನೆಗೆ, ತಮಗೆ ಆಸೆ ಇದ್ದಿದ್ದರೆ ಇನ್ನೂ 25 ಕೋಟಿ ರೂ. ತಂದು ಕೊಡುವಂತೆ ಹೇಳುತ್ತಿದ್ದೆ. ಕೊಟ್ಟಿರುವ ಐದು ಕೋಟಿಯನ್ನು ಏಕೆ ವಾಪಸ್‌ ಕಳುಹಿಸುತ್ತಿದ್ದೆ ಎಂದು ಪ್ರಶ್ನಿಸಿದರು. ಈ ವೇಳೆ ಕೋಲಾರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಕೆಂಬೋಡಿ ನಾರಾಯಣಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next