Advertisement

30ಕ್ಕೆ ಸಚಿವರ ಸಭೆ ಕರೆದ ಕೆ.ಸಿ. ವೇಣುಗೋಪಾಲ್‌

08:25 AM Aug 23, 2017 | Harsha Rao |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಆ.30ರಂದು ಸಚಿವರು ಮತ್ತು ಪಕ್ಷದ ಪದಾಧಿಕಾರಿಗಳ ಪ್ರತ್ಯೇಕ ಸಭೆ ಕರೆದಿದ್ದಾರೆ. ಸಚಿವರು ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಹಾಗೂ ಜಿಲ್ಲೆಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಲು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಸಚಿವರ ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಚುನಾವಣೆ ವರ್ಷವಾಗಿರುವುದರಿಂದ ತಿಂಗಳಲ್ಲಿ ಎರಡು ಬಾರಿ ಕೆಪಿಸಿಸಿ ಕಚೇರಿಗೆ ಆಗಮಿಸಿ ನಾಲ್ಕು ವರ್ಷದಲ್ಲಿ ತಮ್ಮ ಇಲಾಖೆಯ ಸಾಧನೆ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಮಾತನಾಡುವಂತೆ ಸೂಚಿಸಿರುವ
ಬೆನ್ನಲ್ಲೇ ವೇಣುಗೋಪಾಲ್‌ ಸಚಿವರ ಸಭೆ ಕರೆದಿದ್ದು, ಪಕ್ಷದ ಸೂಚನೆಗಳನ್ನು ಪಾಲಿಸದ ಸಚಿವರುಗಳಿಗೆ ಕ್ಲಾಸ್‌
ತೆಗೆದುಕೊಳ್ಳುವ ಸಾಧ್ಯತೆ ಇದೆ. ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಕುರಿತು ಇದುವರೆಗೂ ಮಾಡಿರುವ ಕೆಲಸಗಳ ಬಗ್ಗೆ ಈಗಾಗಲೇ ಜಿಲ್ಲಾ ಘಟಕಗಳಿಂದ ಮಾಹಿತಿ ತರಿಸಿಕೊಂಡು ವೇಣುಗೋಪಾಲ ಪ್ರತ್ಯೇಕವಾಗಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಈಗ ಸಚಿವರ ಜೊತೆ ಸಮಾಲೋಚನೆ ಸಂದರ್ಭದಲ್ಲಿ ಅವರು ಪಕ್ಷ ಸಂಘಟನೆಗೆ ಮಾಡಿರುವ ಕಾರ್ಯದ ಕುರಿತು ವಿವರಣೆ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಚಿವ ಸ್ಥಾನದ ಕಾರ್ಯದ ಜೊತೆಗೆ ಪಕ್ಷದ ಸಂಘಟನೆಯನ್ನೂ ಮಾಡುವಂತೆ ವೇಣುಗೋಪಾಲ ಈಗಾಗಲೇ ತಾವು ಉಸ್ತುವಾರಿ ವಹಿಸಿಕೊಂಡು ನಡೆಸಿದ ಮೊದಲ ಸಭೆಯಲ್ಲಿಯೇ ಸೂಚನೆ ನೀಡಿದ್ದರು. ಅದರಂತೆ ಎಷ್ಟು ಜನ ಕಾರ್ಯ
ನಿರ್ವಹಿಸುತ್ತಿದ್ದಾರೆ ಮತ್ತು ಮುಂದಿನ ಚುನಾವಣೆಗೆ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು
ಗೆಲ್ಲಿಸಿಕೊಂಡು ಬರಲು ಹಾಕಿಕೊಂಡ ಕಾರ್ಯಕ್ರಮಗಳ ಬಗ್ಗೆಯೂ ಸಚಿವರಿಂದ ಮಾಹಿತಿ ಕೇಳಲಿದ್ದಾರೆ ಎಂದು ತಿಳಿದು ಬಂದಿದೆ.

ನಂತರ ಪಕ್ಷದ ಪದಾಧಿಕಾರಿಗಳ ಸಭೆಯನ್ನೂ ಪ್ರತ್ಯೇಕವಾಗಿ ಕರೆದಿರುವ ವೇಣುಗೋಪಾಲ, ಈಗಾಗಲೇ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಗಳಲ್ಲಿ ಭೂತ್‌ ಮಟ್ಟದ ಸಮಿತಿಗಳ ರಚನೆ ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಮಾಡಿರುವ ಕೆಲಸಗಳ ಬಗ್ಗೆ ವಿವರಣೆ ಪಡೆಯಲಿದ್ದಾರೆ ಎನ್ನಲಾಗಿದೆ.

ಮುಂದಿನ ಕಾರ್ಯತಂತ್ರಗಳ ಕುರಿತಂತೆಯೂ ಅಂದಿನ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಅಂದಿನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, ಕಾರ್ಯಾಧ್ಯಕ್ಷರಾದ ದಿನೇಶ್‌ ಗುಂಡೂರಾವ್‌, ಎಸ್‌.
ಆರ್‌. ಪಾಟೀಲ್‌ ಪಾಲ್ಗೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next