ಹುಬ್ಬಳ್ಳಿ: ಮೀಸಲಾತಿ ನೀಡಿಕೆಯ ಅಧಿಕಾರ ಇಲ್ಲದಿದ್ದರೂ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು,ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ, ಈ ಪರಿಸ್ಥಿತಿ ನಿಭಾಯಿಸುವುದು ಅವರಿಗೆ ಕಷ್ಟವಾಗಿದೆ ಎಂದು ವಿಧಾನಪರಿಷತ್ತು ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ಧ ಶೆಟ್ಟಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ನೀಡುವ ಕಾಳಜಿ ಇದ್ದರೆ ಮೀಸಲಾತಿ ಪ್ರಮಾಣ ಶೇ.73 ಹೆಚ್ವಿಸಲು ತಿದ್ದುಪಡಿ ತರಲಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವೇ ಇದೆಯಲ್ಲ. ಮೀಸಲಾತಿ ಹೆಸರಲ್ಲಿ ಪಾದಯಾತ್ರೆ, ಸಮಾವೇಶ,ಶಕ್ತಿ ಪ್ರದರ್ಶನ, ಸರಕಾರಕ್ಕೆ ಧಕ್ಕೆ ತರುವ ಬೆದರಿಕೆ ಹಾಕುವ ಯತ್ನಗಳು ನಡೆಯುತ್ತಿದೆ, ಇದು ಸರಿಯಲ್ಲ ಎಂದರು.
ಮೀಸಲಾತಿ ವಿಚಾರದಲ್ಲಿ ಸಂಪುಟ ಸಭೆಯಲ್ಲಿ ತೀರ್ಮಾದ ಮೂಲಕ ಎಲ್ಲರಿಗೂ ನ್ಯಾಯ ಒದಗಿಸುವುದಾಗಿ ಸಿಎಂ ಹೇಳಿದ್ದಾರೆ. ಇದು ಸಾಧ್ಯವೇ ಎಂಬುದನ್ನು ಮುಖ್ಯಮಂತ್ರಿಯವರೇ ಸ್ಪಷ್ಟ ಪಡಿಸಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಒಂದು ವೇಳೆ ರಾಹುಲ್ ದಲಿತ ಯುವತಿಯನ್ನು ವಿವಾಹವಾದ್ರೆ…ಸಚಿವ ಅಠಾವಳೆ ಆಫರ್!
ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕತ್ವ ಸೃಷ್ಟಿಗೆ ಬಿಜೆಪಿಯಲ್ಲಿ ಯತ್ನ ನಡೆಯುತ್ತಿದೆ. ಅದಕ್ಕೆ ಮೀಸಲಾತಿ ಹೋರಾಟ ಬಳಕೆಯಾಗುತ್ತಿದೆ ಎಂಬ ಶಂಕೆ ಇದೆ. ಮೀಸಲಾತಿ ನೀಡಿಕೆ ಚೆಂಡು ಕೇಂದ್ರ ಸರಕಾರದ ಅಂಗಳದಲ್ಲಿದೆ. 2ಎ ಸೇರಿಸಬೇಕಾದರೂ, ಅಲ್ಲಿ 102 ಜಾತಿಗಳಿವೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಸಿಎಂ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು. ಮೀಸಲಾತಿ ಕೊಡಿಸುವ ಬದ್ದತೆ ಇದ್ದರೆ ಕೇಂದ್ರದಲ್ಲಿ ನಿಮ್ಮದೇ ಸರಕಾರವಿದೆ ತಿದ್ದುಪಡಿ ಮಾಡಿಸಿಕೊಂಡು ಬನ್ನಿ ಎಂದರು.
ಕೇಂದ್ರ ಸರಕಾರ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ವಿಚಾರದಲ್ಲಿ ಪರಿಶಿಷ್ಟ ಜಾತಿ-ಪಂಗಡಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಈ ವಿಷಯ ಕುರಿತಾಗಿ ಗುರುವಾರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.