ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತೆ (ಆರ್ಟಿಫಿಸಿಯಲ್ ಇಂಟೆಲಿಜೆನ್ಸ್) ಎಲ್ಲೆಡೆ ಜನಪ್ರಿಯವಾಗುತ್ತಿದ್ದು, ಬಹುತೇಕ ಎಲ್ಲರೂ ಎ. ಐ ಬಗ್ಗೆ ಆಗಾಗ್ಗೆ ಕೇಳುತ್ತಲಿರುತ್ತೀರಿ. ಇನ್ನು ದಿನದಿಂದ ದಿನಕ್ಕೆ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ (ಎ.ಐ) ತಂತ್ರಜ್ಞಾನ ಒಂದರ ಹಿಂದೊಂದು ಕ್ಷೇತ್ರವನ್ನು ಆವರಿಸಿಕೊಳ್ಳುತ್ತಿದೆ. ಇದೀಗ ಸಂಗೀತ ಕ್ಷೇತ್ರಕ್ಕೂ ಎ. ಐ ತಂತ್ರಜ್ಞಾನ ಪರಿಚಯವಾಗುತ್ತಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಎ. ಐ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾದ “ಕಾಜ್ಹ್ ಐ ಲವ್ ಯು’ ಎಂಬ ಹೆಸರಿನ ಮ್ಯೂಸಿಕ್ ಆಲ್ಬಂ ಇತ್ತೀಚೆಗೆ ಬಿಡುಗಡೆಯಾಗಿದೆ.
ಅಂದಹಾಗೆ, ವೃತ್ತಿಯಲ್ಲಿ ಸಂಶೋಧಕರು ಮತ್ತು ವಿಜ್ಞಾನಿಯೂ ಆಗಿರುವ ಡಾ. ಎಸ್. ಮಹೇಶ್ ಬಾಬು, ಇದೇ ಮೊದಲ ಬಾರಿಗೆ ಎ. ಐ ತಂತ್ರಜ್ಞಾನವನ್ನು ಸಂಗೀತದಲ್ಲಿ ಬಳಕೆ ಮಾಡುವ ಮೂಲಕ ಮೊಟ್ಟ ಮೊದಲ ಮ್ಯೂಸಿಕ್ ಆಲ್ಬಂ “ಕಾಜ್ಹ್ ಐ ಲವ್ ಯು’ ಅನ್ನು ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಇತ್ತೀಚೆಗೆ “ಕಾಜ್ಹ್ ಐ ಲವ್ ಯು’ ಮ್ಯೂಸಿಕ್ ಆಲ್ಬಂ ಬಿಡುಗಡೆಯಾಗಿದ್ದು, ಇದೇ ವೇಳೆ ಹಾಜರಿದ್ದ ಇದರ ರೂವಾರಿ ಡಾ. ಎಸ್. ಮಹೇಶ್ ಬಾಬು ಮತ್ತು ತಂಡ ಇಂಥದ್ದೊಂದು ಪ್ರಯತ್ನದ ಬಗ್ಗೆ ಮಾತನಾಡಿತು.
“ನಾನು ಮೂಲತಃ ಊಟಿಯವನಾದರೂ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಾಗಿದ್ದೇನೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದೇ ವೇಳೆ ಸಂಗೀತದಲ್ಲೂ ಎಐ ತಂತ್ರಜ್ಞಾನ ಬಳಸಿಕೊಂಡು ಹೊಸ ಪ್ರಯತ್ನ ಮಾಡಬೇಕೆಂದೆನಿಸಿತು. ಅದರ ಮೊದಲ ಹೆಜ್ಜೆಯಾಗಿ ಈ ಆಲ್ಬಂ ಸಾಂಗ್ ಮಾಡಿದ್ದೇನೆ. ಈ ಹಾಡನ್ನು ಯಾವುದೇ ಗಾಯಕರಿಲ್ಲದೆ, ಸಾಹಿತ್ಯವನ್ನು ಸಾಫ್ಟ್ವೇರ್‌ಗೆ ಫೀಡ್ ಮಾಡಿ, ಗಂಡು ಮತ್ತು ಹೆಣ್ಣಿನ ಧ್ವನಿಯಲ್ಲಿ ಹಾಡು ಮೂಡಿಬರುವಂತೆ ಮಾಡಲಾಗಿದೆ. ನನಗೆ ತಿಳಿದ ಹಾಗೆ ವಿಶ್ವದಲ್ಲೇ ಇದು ಮೊದಲ ಪ್ರಯೋಗ ಎನ್ನಬಹುದು. ನನಗೆ ಈ ಕುರಿತು ರಿಸರ್ಚ್ ಮಾಡಲು ಆರು ತಿಂಗಳು ಹಿಡಿಸಿತು. ನಾನೇ ಹಾಡು ಬರೆದು, ಸಂಗೀತ ನೀಡಿ, ಎಐ ಟೆಕ್ನಾಲಜಿ, ಸಂಕಲನ, ಡಿ.ಐ, ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಇಂಗ್ಲಿಷ್ ಭಾಷೆಯಲ್ಲಿ ಈ ಹಾಡು ಮೂಡಿಬಂದಿದೆ. ಈ ಹೊಸ ತಂತ್ರಜ್ಞಾನ ವಿಶ್ವವ್ಯಾಪಿಯಾಗಬೇಕೆಂಬ ಕಾರಣದಿಂದ ಈ ಹಾಡನ್ನು ಇಂಗ್ಲಿಷ್‌ನಲ್ಲಿ ಮಾಡಲಾಗಿದೆ’ ಎಂದು ವಿವರಣೆ ನೀಡಿದರು.
ಡಾ. ಎಸ್ ಮಹೇಶ್ ಬಾಬು ಇನ್ನು ಬಿಡುಗಡೆಯಾಗಿರುವ “ಕಾಜ್ಹ್ ಐ ಲವ್ ಯು’ ಮ್ಯೂಸಿಕ್ ಆಲ್ಬಂ ಹಾಡಿನಲ್ಲಿ ಇರಾನ್ ಕಲಾವಿದೆ ಐರಾ ಫರಿದ್, ರೇವಂತ್ ರಾಮಕುಮಾರ್, ಯೋಗೇಶ್ ಮಲ್ಲಿಕಾರ್ಜುನ ಹಾಗೂ ಲೀನಾ ಕುಮಾರನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ತಂತ್ರಜ್ಞಾನವನ್ನು ಯಾವ ಭಾಷೆಯಲ್ಲಿ ಬೇಕಾದರೂ ಬಳಸಿಕೊಳ್ಳಬಹುದು. ಮುಂದೆ ಕನ್ನಡ ರಾಜ್ಯೋತ್ಸವದ ಸಮಯಕ್ಕೆ ಇದೇ ತಂತ್ರಜ್ಞಾನದಿಂದ ಕನ್ನಡ ಹಾಡೊಂದನ್ನು ಮಾಡುವ ಯೋಜನೆಯಿದೆ ಎಂದಿದ್ದಾರೆ ಡಾ. ಎಸ್. ಮಹೇಶ್ ಬಾಬು ತಿಳಿಸಿದರು.