Advertisement

ನಡೆ ಮತ್ತು ನುಡಿ ಒಂದೇ- ಇದು ಕವಿ ಕಯ್ಯಾರರ ಧೀಮಂತಿಕೆ

11:39 PM Aug 09, 2022 | Team Udayavani |

ಕಯ್ಯಾರರ ಬದುಕು ಮತ್ತು ಸಾಧನೆ ಗಳು ಇಂದಿನ ಬರಹಗಾರರಿಗೆ ಪ್ರೇರಣೆ ಯಾಗಬೇಕು. ನಾಡು ನುಡಿಯ ಅಭಿಮಾನ ಹಾಗೂ ಒಲವು ಬರವಣಿಗೆ ಮತ್ತು ಕಾರ್ಯಕ್ರಮ ಗಳಿಗೆ ಸೀಮಿತ ವಾಗಿರುವ ಮತ್ತು ಅದರಲ್ಲಿ ಪೂರ್ಣ ತೃಪ್ತಿ ಪಡೆದು ಸುಮ್ಮನಾಗುವ ಯುವ ಮನಸ್ಸುಗಳಿಗೆ ಕಯ್ಯಾರರ ಹೆಜ್ಜೆಗಳು ದಾರಿದೀಪವಾಗಬೇಕಿದೆ.

Advertisement

ಇಂದು, ಬಿಡುಗಡೆ ಬಂದ
ಸುಂದರ ಮುಹೂರ್ತದಲಿ,
ಸೋದರರು ಸೋದರರು ಬೇರಾದೆವೇ
ಒಂದಲ್ಲ ನಾವೆಂದು
ಹಿಂದು ಮುಸ್ಲಿಮರೆಂದು,
ಮಾತೃಭೂಮಿಯ ಸಿಗಿದು ದೂರಾದೆವೆ?
ಹಠಹಿಡಿದ ರಕ್ಕಸರ ಹಸಿವಡಗಿತ?
ಕಳವು, ಸುಲಿಗೆಯು, ಕೊಲೆಯು,
ಪಾತಕವು, ಧರ್ಮವೇ
ಜಾತಿಪ್ರೀತಿಯೆ? ಸ್ವಾರ್ಥತೃಷೆ ಹೆಚ್ಚಿತೇ?
“ಎಚ್ಚರೆಚ್ಚರ ಗೆಳೆಯ’ ಎಂಬ ಕವನದಲ್ಲಿ ಕವಿ ಕಯ್ಯಾರರು ಹೇಳಿದ ಈ ಮಾತುಗಳು ಇಂದಿಗೂ ನಿಜವಾಗಿವೆ. ನಾವು ಸ್ವಾತಂತ್ರ್ಯದ ಎಪ್ಪತ್ತೈದರ ಸಂಭ್ರಮದಲ್ಲಿದ್ದೇವೆ. ಹಲವು ಮಹಾಪುರುಷರ ತ್ಯಾಗ ಬಲಿದಾನಗಳ ಮೂಲಕ ಪಡೆದ ಸ್ವಾತಂತ್ರ್ಯವನ್ನು ಸ್ವಾರ್ಥ, ಜಾತಿ, ಧರ್ಮಕ್ಲೀಷೆಗಳಿಗಾಗಿ ದುರುಪಯೋಗ ಮಾಡುತ್ತಿದ್ದೇವೆಯೇ? ಅಥವಾ ದೇಶದ ಅಭಿವೃದ್ಧಿಗಾಗಿ ಸದುಪಯೋಗ ಪಡಿಸುತ್ತಿದ್ದೇವೆಯೇ? ಇತ್ಯಾದಿಗಳ ಬಗ್ಗೆ ಆತ್ಮಾವಲೋಕನ ಮಾಡಲು ಕಯ್ಯಾರರ ಇಂತಹ ರಚನೆಗಳು ಸಹಾಯಕ.

ವಿದ್ವತ್‌ಪೂರ್ಣ ಬರಹ, ಸೃಜನಶೀಲ ಸಾಹಿತ್ಯ ಸೃಷ್ಟಿ, ಪತ್ರಿಕೋದ್ಯಮ, ಅನುವಾದ, ಅಧ್ಯಾಪನ, ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ ಚಳವಳಿ, ಕಾಸರಗೋಡು ವಿಲೀನ ಹೋರಾಟ, ಸಮಾಜ ಸೇವೆ, ಕೃಷಿ, ರಾಜಕಾರಣ ಹೀಗೆ ಕಯ್ಯಾರರು ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಬದುಕಿನಲ್ಲಿ ಕಂಡುಂಡ ನೈಜ ಅನುಭವಗಳನ್ನೆಲ್ಲ ತನ್ನೊಳಗೆ ಗರ್ಭೀಕರಿಸಿಕೊಳ್ಳುತ್ತಾ ಬರೆಯುವ ಸಾಹಿತಿಗೆ ಮಾತ್ರ ಭಾಷೆ, ದೇಶ, ಸಮಾಜ, ಸಂಸ್ಕೃತಿ ಬಗ್ಗೆ ಸಹಜ ಕಾಳಜಿ ಇರುತ್ತದೆ. ಬರವಣಿಗೆಗೆ ಮಾತ್ರ ಸೀಮಿತವಾಗುವ ನಾಡು ನುಡಿಯ ಕಾಳಜಿ ಬೇರೆ. ನಿಜ ಬದುಕಿನಲ್ಲಿ ಮಾಡಿ ತೋರಿಸಿ ಅದನ್ನು ಬರೆದು ನಾಲ್ಕು ಕಡೆ ಪಸರುವ ನೈಜ ಕಾಳಜಿಯ ಪರಿ ಬೇರೆ.

ಕಯ್ಯಾರರು ಬಾಳಿ ಬದುಕಿದ ಕಾಲದ ಗುಣವೇ ಅದು. ಆದರೆ ಇಂದಿನ ಎಲ್ಲ ಬರಹಗಾರರಿಗೂ ಈ ಬದ್ಧತೆಯಿದೆ ಇನ್ನುವಂತಿಲ್ಲ. ಕಯ್ಯಾರರನ್ನು ನೆನಪಿಸುವಾಗ ಅಥವಾ ಅವರ ಸಾಹಿತ್ಯ ಮತ್ತು ಸಾಮಾಜಿಕ ಕೈಂಕರ್ಯಗಳ ಬಗ್ಗೆ ಬರೆಯುವಾಗ ಅವರ ನುಡಿ ಮತ್ತು ನಡೆಯ ಆಳ ಅಗಲವನ್ನೂ, ಅದು ಬಹುತೇಕ ಒಂದೇ ಆಗಿದ್ದುದನ್ನೂ ಒತ್ತಿ ಹೇಳಲೇಬೇಕಾಗುತ್ತದೆ. “ಸಾಹಿತ್ಯದ ಸಂದೇಶಗಳು ಬರವಣಿಗೆ ಮತ್ತು ಉಪದೇಶಕ್ಕೆ ಮಾತ್ರ ಸೀಮಿತವಲ್ಲ; ಅದು ಬರಹಗಾರನ ಬದುಕಿನಲ್ಲೂ ಇರಬೇಕು’ ಎಂಬ ಮೌಲ್ಯಯುತ ಮಾತನ್ನು ಜೀವನದಲ್ಲಿ ಅಳವಡಿಸಿ ತೋರಿಸಿದ ಸಾಹಿತಿಗಳಲ್ಲಿ ಕಯ್ಯಾರರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ.

ಪಂಜರಿಕೆ ಅನಂತಭಟ್ಟ, ಕನ್ನಡದೋಜ ಪೆರಡಾಲ ಕೃಷ್ಣಯ್ಯ ಇವರಂತಹ ಅಧ್ಯಾಪಕ ಶ್ರೇಷ್ಠರ ಪ್ರಾಮಾಣಿಕತೆ, ವಿದ್ವತ್ತು ಕಯ್ಯಾರರ ಮೇಲೆ ಹೇಗೆ ಗಾಢವಾದ ಪರಿಣಾಮವನ್ನು ಬೀರಿದೆಯೋ ಅದೇ ರೀತಿ ತನ್ನ ಸುತ್ತಮುತ್ತಲಿನ ಆ ಕಾಲದ ಪ್ರಚಲಿತ ವಿದ್ಯಮಾನಗಳು ಕಯ್ಯಾರರ ಒಟ್ಟು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿವೆ. “ಪಾಠ ಬ್ರಾಹ್ಮಣರೊಡನೆ; ಆಟ ಹೊಲೆಯರೊಡನೆ’ ಎನ್ನುವ ಅವರ ಮಾತು ಅವರ ಅನುಭವದ್ದಾಗಿತ್ತು.

Advertisement

ಪಂಜೆ, ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಎಂ.ಎನ್‌. ಕಾಮತ್‌, ಕಡೆಂಗೋಡ್ಲು ಶಂಕರ ಭಟ್‌ ಮೊದಲಾದ ಅಗ್ರಗಣ್ಯ ಬರಹಗಾರರ ಒಡನಾಟ ಕಯ್ಯಾರರ ಸಾಹಿತ್ಯ ಕೌಶಲಕ್ಕೆ ಶಕ್ತಿ ನೀಡಿತ್ತು. ಕಾರ್ನಾಡ್‌ ಸದಾಶಿವರಾಯ, ರಾಮಕೃಷ್ಣ ಕಾರಂತ, ರಾಮರಾಯ ಮಲ್ಯ, ಎನ್‌.ಎಸ್‌. ಕಿಲ್ಲೆ ಮುಂತಾದವರ ಪ್ರಭಾವವು ಕಯ್ಯಾರರನ್ನು ದೇಶದ ಬಗ್ಗೆ ಹೆಚ್ಚು ಯೋಚಿಸುವಂತೆ ಮಾಡಿದವು. ಕಂಠೀರವ, ನವಯುಗ, ಸ್ವದೇಶಾಭಿಮಾನಿ, ರಾಷ್ಟ್ರಬಂಧು, ನವಭಾರತ ಮುಂತಾದ ದಿನಪತ್ರಿಕೆ, ನಿಯತಕಾಲಿಕಗಳಲ್ಲಿ ದುಡಿದ ಅವರ ಪತ್ರಿಕೋದ್ಯಮ ಕ್ಷೇತ್ರದ ನಿರಂತರ ಅನುಭವಗಳು ಎಲ್ಲದಕ್ಕೂ ಭದ್ರವಾದ ತಳಹದಿಯನ್ನು ಕಲ್ಪಿಸಿಕೊಟ್ಟಿತು. ಪೆರಡಾಲದಿಂದ ಮಂಗಳೂರು ತನಕ ಕಾಲ್ನಡಿಗೆಯಲ್ಲೇ ಸಾಗಿ, ಮಹಾತ್ಮಾ ಗಾಂಧಿಯವರನ್ನು ಕಂಡದ್ದು, ಅವರನ್ನು ಸ್ಪರ್ಶಿಸಿ ಮಾತನಾಡಿದ್ದು ಇವೆಲ್ಲವೂ ಕಯ್ಯಾರರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದವು.

ಕನ್ನಡ ಪ್ರಜ್ಞೆ, ಸಮತಾವಾದ, ರಾಷ್ಟ್ರನೀತಿ, ಜಾತ್ಯತೀತವಾದ, ಮಾನವತೆಯ ಸಂದೇಶ ಇವೆಲ್ಲವೂ ಕಯ್ಯಾರರ ಕಾವ್ಯದ ಪ್ರಧಾನ ವಸ್ತುಗಳಾಗಿ ರೂಪುಗೊಳ್ಳುವುದರ ಜತೆಗೆ ತನ್ನ ಬದುಕಿನ ಹೆಜ್ಜೆಗಳನ್ನು ಈ ವಿಷಯವಿಚಾರಗಳ ಜತೆಗೆ ಜೋಡಿಸಿಕೊಂಡರು. ಸಮಾಜದ ತಳಮಟ್ಟದಲ್ಲಿದ್ದು ಬೆಳಕು ಕಾಣದ ಕೊರಗ ಸಮುದಾಯದ ಬವಣೆಯನ್ನು ಬರೆದರು, ಅವರ ಕೊರಗಿಗೆ ಉತ್ತರವಾದರು. ಉಪನಿಷತ್ತಿನ ಅನುವಾದವು ಕಯ್ನಾರರ ಸಂಸ್ಕೃತ ಮತ್ತು ಕನ್ನಡ ಭಾಷಾ ಪಾಂಡಿತ್ಯಕ್ಕೆ ನಿದರ್ಶನ. ನವೋದಯ ವಚನಮಾಲೆಯ ಮೂಲಕ ಅವರು ಶಿಶುಸಾಹಿತ್ಯಕ್ಕೆ ನೀಡಿದ ಕೊಡುಗೆ ಮಹತ್ತರವಾದುದು. ಜೀವನ ಚರಿತ್ರೆ, ಲಕ್ಷೀಶನ ಕಥೆಗಳು, ಅನ್ನದೇವರು ಮತ್ತು ಇತರ ಕತೆಗಳು, ಪರಶುರಾಮ, ರಾಷ್ಟ್ರಕವಿ ಗೋವಿಂದ ಪೈ, ಗೋವಿಂದ ಪೈ ಸ್ಮತಿ- ಕೃತಿ, ಮಹಾಕವಿ ಗೋವಿಂದ ಪೈ ಈ ಮುಂತಾದ ಗದ್ಯಬರಹಗಳು ಕಯ್ಯಾರರ ಒಳಗೊಬ್ಬ ಸಂಶೋಧಕ ಮತ್ತು ಸಮರ್ಥ ವಿಮರ್ಶಕನಿರುವುದನ್ನು ಧೃಢಪಡಿಸುತ್ತದೆ. ಅವರ “ಅನ್ನದೇವರು ಹಾಗೂ ಇತರ ಕತೆಗಳು’ ಸಂಕಲನದ ಕತೆಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಮತ್ತು ಪ್ರಗತಿಶೀಲ ಒಲವು ಹಾಗೂ ಸಾಮಾಜಿಕ ತುಡಿತವನ್ನು ಕಾಣುತ್ತೇವೆ. ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯ ಪಾಲ್ಗೊಳ್ಳು ವಿಕೆಯ ಹಿರಿಮೆಯನ್ನು ಬಿಂಬಿಸುವ “ವಿರಾಗಿಣಿ’ ಎಂಬ ಅವರ ಏಕೈಕ ನಾಟಕವು ಚಾರಿತ್ರಿಕ ವಸ್ತುವುಳ್ಳದ್ದು. “ದುಡಿತವೇ ದೇವರು’ ಎಂಬುದು ಕಯ್ಯಾರರ ಆತ್ಮಕಥನ. ಬದುಕಿನುದ್ದಕ್ಕೂ ವೈವಿಧ್ಯ ಪೂರ್ಣ ಕ್ಷೇತ್ರಗಳಲ್ಲಿ ಕೈಯಾಡಿಸಿ, ಶಕ್ತಿ ಪಡೆದ ವ್ಯಕ್ತಿಯೊಬ್ಬನ ಆತ್ಮಕಥೆಯಾದ ಕಾರಣ ಈ ಕೃತಿಗೆ ಮಹತ್ವವಿದೆ. ಮಣ್ಣಿನ ಕಲೆಯಾದ ಯಕ್ಷಗಾನದ ಮೇಲಿನ ಒಲವು, ಮೇರು ಕಲಾವಿದರ ಒಡನಾಟ ಕಯ್ಯಾರರ ಬರಹದ ಮೇಲೆ ಪ್ರಭಾವ ಬೀರಿರುವುದನ್ನು ಕಾಣುತ್ತೇವೆ.

ತಲೆಮಾರುಗಳಿಂದ ಕನ್ನಡದ ಜೀವಜಲ ವನ್ನುಂಡು ಬೆಳೆದ ಅನನ್ಯ ಸಂಸ್ಕೃತಿಯ ಕಾಸರಗೋಡು ಎಂಬ ಅಚ್ಚಗನ್ನಡ ನೆಲವು ತಾಯಿ ಮಡಿಲಿನಿಂದ ಜಾರಿಹೋದಾಗ ಕಯ್ಯಾರರು ಮರುಗಿದ ರೀತಿ, ಮಾಡಿದ ಸಿಂಹನಾದವು ಸಾಹಿತಿಯೊಬ್ಬನ ಬದ್ಧತೆಯನ್ನು ತೋರಿಸುತ್ತದೆ. ಕಯ್ನಾರರ ಕನ್ನಡ ಹೋರಾಟಕ್ಕೆ ಡಾ| ಪಾಟೀಲ ಪುಟ್ಟಪ್ಪ, ಡಾ| ದೇಜಗೌ ಅವರಂತಹ ಪ್ರಮುಖರೂ ತಲೆದೂಗಿದ್ದಾರೆ. ಇಡೀ ಕರ್ನಾಟಕದಲ್ಲಿ ಒಂದು ವಿಷಯವನ್ನು ನಂಬಿ ಹೋರಾಟ ಮಾಡುವುದಕ್ಕೆ ಬದ್ಧರಾದ ಒಬ್ಬರಿದ್ದರೆ ಅದು ಕಯ್ಯಾರ ಕಿಂಞಣ್ಣ ರೈಗಳು ಎಂದು ಕು.ಶಿ. ಹರಿದಾಸ ಭಟ್ಟರು ಹೇಳಿದ್ದರು. ಕಾಸರಗೋಡನ್ನು ಮತ್ತೆ ಕರ್ನಾಟಕಕ್ಕೆ ಸೇರಿಸಲು ಸಮಸ್ತ ಕನ್ನಡ ನಾಡಿನ ಜನತೆ ಧ್ವನಿಯೆತ್ತಬೇಕು. ಜನಮತವನ್ನು ಯಾವ ಸರಕಾರಕ್ಕೂ ಮೀರಲಾಗದು. ಇಂದಲ್ಲ ನಾಳೆ ಕಾಸರಗೋಡು ಕರ್ನಾಟಕಕ್ಕೆ ಸೇರಿಯೇ ಸೇರುತ್ತದೆ. 80 ವರ್ಷಗಳ ಬಳಿಕ ಗೋಡೆ ಒಡೆದು ಜರ್ಮನ್‌ ರಾಷ್ಟ್ರ ಒಂದಾಗಿದೆ. ನೂರು ವರ್ಷಗಳಿಗೂ ಮೀರಿದ ರಷ್ಯಾ-ಚೀನ ಗಡಿವಿವಾದ ಇತ್ಯರ್ಥವಾಗಿದೆ. ಕಾಸರಗೋಡಿನ ಜ್ಯೋತಿ ಕರ್ನಾಟಕದ ಪರಂಜ್ಯೋತಿಯಲ್ಲಿ ಲೀನವಾಗದಿರದು ಎಂಬ ದೃಢನಿಲುವು ಕಯ್ಯಾರರಿಗೆ ಕೊನೆ ತನಕವೂ ಇತ್ತು.

ಕಯ್ಯಾರರ ಬದುಕು ಮತ್ತು ಸಾಧನೆಗಳು ಇಂದಿನ ಬರಹಗಾರರಿಗೆ ಪ್ರೇರಣೆಯಾಗಬೇಕು. ನಾಡು ನುಡಿಯ ಅಭಿಮಾನ ಹಾಗೂ ಒಲವು ಬರವಣಿಗೆ ಮತ್ತು ಕಾರ್ಯಕ್ರಮಗಳಿಗೆ ಸೀಮಿತವಾಗಿರುವ ಮತ್ತು ಅದರಲ್ಲಿ ಪೂರ್ಣ ತೃಪ್ತಿ ಪಡೆದು ಸುಮ್ಮನಾಗುವ ಯುವ ಮನಸ್ಸುಗಳಿಗೆ ಕಯ್ಯಾರರ ಹೆಜ್ಜೆಗಳು ದಾರಿದೀಪವಾಗಬೇಕಿದೆ. ಯಾವ ರೀತಿಯಲ್ಲಿ ನಾನಾ ಕ್ಷೇತ್ರಗಳಲ್ಲಿ ತೆರೆದುಕೊಳ್ಳಬಹುದು ಎಂಬುದನ್ನು ಕಯ್ಯಾರರ ಬರವಣಿಗೆ ಮತ್ತು ಬದುಕಿನ ನಡೆಯಿಂದ ತಿಳಿದುಕೊಳ್ಳಬಹುದು. ನಾನು ಮಣ್ಣಿನ ಮಗನು, ನೊಗ ನೇಗಿಲನು ಹೊತ್ತು ತಿರುಗುವವನು ಎಂದು ಹಾಡಿದ ರೈಗಳು ಕಾಸರಗೋಡಿನ ಮಣ್ಣಿನಲ್ಲಿ ಹುಟ್ಟಿದ ಎರಡನೆಯ ಪಂಡಿತವಕ್ಕಿ. “ಶತಮಾನಂ ಭವತಿ ಶತಾಯುಃ ಶತಂಜೀವ ಶರದೋ ವರ್ಧಮಾನಃ’ ಎಂದು ಸದಾ ಕಾಲ ಮಾತು ಪ್ರಾರಂಭಿಸುತ್ತಿದ್ದ ಕಯ್ನಾರರು ಬದುಕಿನಲ್ಲಿ ಸ್ವತಃ ನೂರು ಸಂವತ್ಸರಗಳನ್ನು ಕಂಡು ನಮ್ಮಿಂದ ಅಗಲಿ ಮಂಗಳವಾರಕ್ಕೆ ಏಳು ವರುಷಗಳು ಸಂದವು.

-ಡಾ| ರತ್ನಾಕರ ಮಲ್ಲಮೂಲೆ
ಕನ್ನಡ ಪ್ರಾಧ್ಯಾಪಕರು, ಸರಕಾರಿ
ಕಾಲೇಜು, ಕಾಸರಗೋಡು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next