Advertisement

ಕಾವ್ಯಾ ಪೂಜಾರಿ ನಿಗೂಢ ಸಾವು ಪ್ರಕರಣ ಸಾಮೂಹಿಕ ಧರಣಿ

08:05 AM Sep 12, 2017 | Team Udayavani |

ಮಂಗಳೂರು: ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ನಿಗೂಢ ಸಾವು ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸ ಬೇಕು ಹಾಗೂ ಶೈಕ್ಷಣಿಕ ಹತ್ಯೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಲಗಾಮು ವಿಧಿಸಬೇಕು ಎಂದು ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ವೇದಿಕೆ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದುಗಡೆ ಸೋಮವಾರ ಸಾಮೂಹಿಕ ಧರಣಿ ನಡೆಯಿತು.

Advertisement

ಮಹಿಳಾಪರ ರಾಜ್ಯ ಹೋರಾಟಗಾರರಾದ ಕೆ.ಎಸ್‌. ವಿಮಲಾ ಅವರು ಮಾತನಾಡಿ, ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ನಿಗೂಢ ಸಾವು ನಡೆದು ಇಷ್ಟು ದಿನಗಳಾದರೂ ಕಾವ್ಯಾ ಕುಟುಂಬಕ್ಕೆ ಇನ್ನೂ ನ್ಯಾಯ ದೊರಕಿಲ್ಲ. ಘಟನೆಯ ತನಿಖೆ
ನಡೆಸುವ ಕಾರಣದಿಂದ ಜಿಲ್ಲಾಡಳಿತ ರಚಿಸಿರುವ ಸಮಿತಿಯ ವರದಿಯನ್ನು ಒಂದು ತಿಂಗಳೊಳಗೆ ಸಾರ್ವಜನಿಕರೆದುರು ಬಹಿರಂಗಗೊಳಿಸಬೇಕು ಹಾಗೂ ಇಲ್ಲಿಯವರೆಗೆ ನಡೆದ ತನಿಖೆಯ ವರದಿಯನ್ನು ಸಾರ್ವಜನಿಕರ ಮುಂದೆ ತತ್‌ಕ್ಷಣವೇ ಸಂಬಂಧ ಪಟ್ಟವರು ಪ್ರಸ್ತುತಪಡಿಸಬೇಕು ಎಂದವರು ಆಗ್ರಹಿಸಿದರು. ಸಂವೇದನರಹಿತವಾದ ಸರಕಾರದ ಆಡಳಿತ ಶೈಲಿಗೆ ನನ್ನ ಧಿಕ್ಕಾರವಿದೆ. ಮೂಡಬಿದಿರೆಯ ಆಳ್ವಾಸ್‌ ಸಂಸ್ಥೆಯಲ್ಲಿ ಇಲ್ಲಿಯವರೆಗೆ ನಡೆದ ಹಲವು ಅಸಹಜ ಸಾವು ಪ್ರಕರಣವನ್ನು ಯಾವ ಕಾರಣದಿಂದ ಮುಚ್ಚಿ ಹಾಕಲಾಗಿದೆ ಎಂಬುದಕ್ಕೆ ಆಡಳಿತ ವ್ಯವಸ್ಥೆ ಉತ್ತರ ನೀಡಬೇಕು. ಶಿಕ್ಷಣ ಸಂಸ್ಥೆಯಲ್ಲಿ ವ್ಯವಸ್ಥಿತ ಸಾವು ಪ್ರಕರಣಗಳು ನಡೆಯುತ್ತಿರುವುದು ಅತ್ಯಂತ ಆತಂಕದ ವಿಚಾರವಾಗಿದೆ.

ವಿಧಾನಸೌಧದಲ್ಲಿ ಒಂದು ಆಡಳಿತ ಶಕ್ತಿ ಕೇಂದ್ರವಿದ್ದರೆ, ಕರಾವಳಿಯಲ್ಲಿ ಪ್ರತ್ಯೇಕ ಶಕ್ತಿ ಕೇಂದ್ರಗಳು ಆಡಳಿತ
ನಡೆಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕಾವ್ಯಾ ಸಾವಿಗೆ ನ್ಯಾಯ ಒದಗಿಸಬೇಕಾದ ರಾಜ್ಯದ ವಿಪಕ್ಷದವರು ಏನು ಮಾಡುತ್ತಿದ್ದಾರೆ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಇವರೆಲ್ಲ ಯಾಕೆ ಮಾತನಾಡುತ್ತಿಲ್ಲ. ಇಲ್ಲಿ ಬೈಕ್‌ ರ್ಯಾಲಿ ಆಯೋಜಿಸುವವರು ಕಾವ್ಯಾ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಬೈಕ್‌ ರ್ಯಾಲಿ ನಡೆಸುತ್ತಿದ್ದರೆ ನಾನು ಬೆಂಬಲ ನೀಡುತ್ತಿದ್ದೆ ಎಂದರು.
ಕಾವ್ಯಾ ಪೂಜಾರಿ ತಂದೆ ಲೋಕೇಶ್‌, ತಾಯಿ ಬೇಬಿ, ವಿವಿಧ ಸಂಘಟನೆಗಳ ಹೋರಾಟಗಾರರಾದ ನರೇಂದ್ರ ನಾಯಕ್‌, ಮುನೀರ್‌ ಕಾಟಿಪಳ್ಳ, ಆಲಿ ಹಸನ್‌, ಕೆ. ಅಶ್ರಫ್‌, ರಾಜೇಂದ್ರ ಚಿಲಿಂಬಿ, ವಸಂತ ಪೂಜಾರಿ, ಸುನಿಲ್‌ ಕುಮಾರ್‌ ಬಜಾಲ್‌, ದಯಾನಂದ ಶೆಟ್ಟಿ, ನಿತಿನ್‌ ಕುತ್ತಾರ್‌, ವಿ.ಕುಕ್ಯಾನ್‌, ಯಶವಂತ ಮರೋಳಿ, ಗೋಪಾಲಕೃಷ್ಣ ಅತ್ತಾವರ, ಎಂ. ದೇವದಾಸ್‌, ರಘು ಎಕ್ಕಾರ್‌, ಪದ್ಮಾಕ್ಷಿ, ಮೋಹನ್‌ ಪಡೀಲ್‌, ರೋಬರ್ಟ್‌ ರೊಸಾರಿಯೋ, ಪ್ರತೀಕ್‌ ಪೂಜಾರಿ, ವಿಶು ಕುಮಾರ್‌, ಜಯಂತಿ ಪೂಜಾರಿ, ಜೆರಾಲ್ಡ್‌, ಸಂತೋಷ್‌ ಬಜಾಲ್‌ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next