Advertisement

ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರಕ್ಕೆ ತಾಪತ್ರಯ

05:27 PM Sep 27, 2019 | Naveen |

„ಶೇಖರಪ್ಪ ಕೋಟಿ
ಕವಿತಾಳ: ಕವಿತಾಳ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಇಲ್ಲಿನ ಶಾಲೆಗಳು ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿರುವುದರಿಂದ ವಿದ್ಯಾರ್ಥಿಗಳು ಗ್ರಾಮೀಣ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

Advertisement

2016ರಲ್ಲಿ ಕವಿತಾಳ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ನಂತರ ಇಲ್ಲಿನ ಶಾಲೆಗಳಲ್ಲಿ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ನೀಡಲು ಹಿಂದು ಮುಂದು ನೋಡುತ್ತಿದ್ದಾರೆ.

ಹೀಗಾಗಿ ನವೋದಯ, ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗಳು, ಜೆಇಇ, ನೀಟ್‌, ಟಿಇಟಿ, ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಮೀಸಲಾತಿ ಸೌಲಭ್ಯ ಪಡೆದು ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗದೆ ಸೌಲಭ್ಯದಿಂದ ವಂಚಿತರಾಗುವಂತಾಗಿದೆ ಎಂದು ಪಾಲಕರು ದೂರಿದ್ದಾರೆ.

ಶಿಕ್ಷಣ ಇಲಾಖೆ ಅಧಿ ಕಾರಿಗಳು ಮತ್ತು ಶಾಲಾ ಮುಖ್ಯ ಗುರುಗಳಿಗೂ ಕೂಡ ಈ ಕುರಿತು ಸಮರ್ಪಕ ಮಾಹಿತಿ ಇಲ್ಲ. ಹೀಗಾಗಿ ಅವರು ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರ ನೀಡುವ ಕುರಿತು ಅಥವಾ ನೀಡದಂತೆ ಸರಕಾರದ ಯಾವುದೇ ಅಧಿಕೃತ ಆದೇಶ ಇಲ್ಲ. ಆದರೂ ಪ್ರಮಾಣ ಪತ್ರ ನೀಡದಿರುವುದು ವಿಪರ್ಯಾಸವಾಗಿದೆ.

ಕಂದಾಯ ಇಲಾಖೆ ಅ ಧಿಕಾರಿಗಳ ಪ್ರಕಾರ 50 ಸಾವಿರ ಜನಸಂಖ್ಯೆ ಇದ್ದಾಗ ಮಾತ್ರ ಪಟ್ಟಣ ಎಂದು ಪರಿಗಣಿಸಲಾಗುತ್ತದೆ ಎನ್ನಲಾಗುತ್ತದೆ. ಆದರೆ ಕವಿತಾಳ ಪಟ್ಟಣದ ಜನಸಂಖ್ಯೆ 2011ರ ಜನಗಣತಿ ಪ್ರಕಾರ 15 ಸಾವಿರವಿದ್ದು ಆಡಳಿತ ವಿಕೇಂದ್ರಿಕರಣ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಕವಿತಾಳ ಗ್ರಾಪಂನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದನ್ನೇ ನೆಪವಾಗಿಸಿಕೊಂಡು ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರ ನೀಡದಿರುವುದು ಇಲ್ಲಿನ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಈ ಕುರಿತು ಇಲ್ಲಿನ ಖಾಸಗಿ ಶಾಲೆ ಮುಖ್ಯಗುರು ಬಸವರಾಜ ಪಾತಾಪುರ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳು ನವೋದಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಗ್ರಾಮೀಣ ಕೋಟಾದಡಿ ಸಲ್ಲಿಸಲಾಗಿತ್ತು ಆದರೆ ಪ್ರವೇಶ ಪತ್ರ ಬಂದಾಗ ನೋಡಿದರೆ ಅದರಲ್ಲಿ ಗ್ರಾಮೀಣ ಕಾಲಂನ್ನು ಹೊಡೆದು ಹಾಕಿ ನಗರ ಪ್ರದೇಶ ಎಂದು ಬರೆಯಲಾಗಿತ್ತು. ಹೀಗಾಗಿ ಗ್ರಾಮೀಣ ಮೀಸಲಾತಿ ಸೌಲಭ್ಯ ತೆಗೆದು ಹಾಕಲಾಗಿದೆ ಎಂದು ತಿಳಿದು ವ್ಯಾಸಂಗ ಪ್ರಮಾಣ ಪತ್ರ ನೀಡಲು ಹಿಂದು ಮುಂದು ನೋಡುತ್ತಿದ್ದೇವೆ.

ಪಾಲಕರು ಒತ್ತಾಯ ಮಾಡಿದಲ್ಲಿ ಪ್ರಮಾಣಪತ್ರ ನೀಡುತ್ತೇವೆ. ಮುಂದೆ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದಲ್ಲಿ ಶಾಲೆಗಳು ಜವಾಬ್ದಾರಿಯಲ್ಲ ಎಂದು ಪಾಲಕರಿಂದ ಬರೆಯಿಸಿಕೊಂಡು ಪ್ರಮಾಣಪತ್ರ ನೀಡುತ್ತಿದ್ದೇವೆ ಎನ್ನುತ್ತಾರೆ.

ಇನ್ನೊಂದು ಖಾಸಗಿ ಶಾಲೆ ಮುಖ್ಯಸ್ಥರಾದ ಅರುಣಕಮಾರ ಭಾರದ್ವಾಜ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ನೀಡಬಾರದು ಎಂದು ಸರಕಾರ ಯಾವುದೇ ಆದೇಶ ನೀಡಿಲ್ಲ. ಹೀಗಾಗಿ ಈ ಮೊದಲು ನೀಡುತ್ತಿದ್ದಂತೆ ಯಥಾ ಪ್ರಕಾರ ಪ್ರಮಾಣಪತ್ರ ನೀಡುತ್ತಿದ್ದೇವೆ. ಪ್ರಮಾಣಪತ್ರ ನೀಡದಿದ್ದರೆ ಗ್ರಾಮೀಣ ಭಾಗದ ಮಕ್ಕಳ ಸೌಲಭ್ಯವನ್ನು ನಾವು ಕಸಿದುಕೊಂಡಂತಾಗುತ್ತದೆ. ಮಕ್ಕಳಿಗೆ ಅನ್ಯಾಯವಾಗಬಾರದು ಎನ್ನುವ ಕಾರಣಕ್ಕೆ ನೀಡಲಾಗುತ್ತಿದೆ.

ಗ್ರಾಮೀಣ ಮೀಸಲಾತಿ ಸೌಲಭ್ಯ ಸರಕಾರ ಹಿಂಪಡೆದಿದ್ದರೆ ಸೌಲಭ್ಯ ಸಿಗುವುದಿಲ್ಲ. ಇಲ್ಲವೆಂದರೆ ಸೌಲಭ್ಯ ಸಿಗುತ್ತದೆ. ವಿದ್ಯಾರ್ಥಿಗಳು ಬಯಸಿದರೆ ಪ್ರಮಾಣ ಪತ್ರ ನೀಡುವುದು ಶಾಲೆಗಳ ಜವಾಬ್ದಾರಿ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next