Advertisement

ಕರ ಭಾರ ಹಾಕಿದ್ರೂ ಸೌಲಭ್ಯ ಬರ!

11:15 AM Jun 03, 2019 | Naveen |

ಶೇಖರಪ್ಪ ಕೋಟಿ
ಕವಿತಾಳ:
ಕವಿತಾಳ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ನಂತರ ಜನತೆ ಮೇಲೆ ವಿವಿಧ ಕರಗಳ ಏರಿಕೆ ಮಾಡಿ ಹೊರೆ ಹಾಕಿದ ಪಪಂ ಅಧಿಕಾರಿಗಳು, ಪಟ್ಟಣದ ಜನತೆಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತಾಳಿದ್ದಾರೆ.

Advertisement

ಪಟ್ಟಣ ಪಂಚಾಯಿತಿಯಾದ ನಂತರ ಸಂಭ್ರಮಪಟ್ಟಿದ್ದ ಪಟ್ಟಣದ ಜನತೆ ಇನ್ನೇನು ಕವಿತಾಳ ಅಭಿವೃದ್ಧಿಯತ್ತ ಮುಖ ಮಾಡಲಿದೆ. ತಮಗೆ ಮೂಲ ಸೌಲಭ್ಯ ಒದಗಲಿವೆ ಎಂದು ಕನಸು ಕಂಡಿದ್ದರು. ಆದರೆ ಈಗ ಪಪಂ ಅಧಿಕಾರಿಗಳು, ಜನಪ್ರತಿನಿಧಿಗಳ ಧೋರಣೆಯಿಂದಾಗಿ ಜನತೆ ಭ್ರಮ ನಿರಸನಗೊಳ್ಳುವಂತಾಗಿದೆ.

ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಟ್ಟಣದ ಜನತೆಗೆ ಮೂಲ ಸೌಲಭ್ಯ ದಕ್ಕುವುದಿರಲಿ, ಪಟ್ಟಣದಲ್ಲಿ ಸ್ವಚ್ಛತೆಯೇ ಮಾಯವಾಗಿದೆ. ರಸ್ತೆಗಳು ಹದಗೆಟ್ಟು ಹೋಗಿವೆ. ಚರಂಡಿ ಸ್ವಚ್ಛತೆ ಇಲ್ಲದಾಗಿದೆ. ಆದರೆ ಪಟ್ಟಣ ಪಂಚಾಯಿತಿಯಾದ ನಂತರ ಜನರ ಮೇಲೆ ಕರ ಹೆಚ್ಚಳದ ಹೊರೆ ಹಾಕಿದ್ದು ಬಿಟ್ಟರೆ ಹೇಳಿಕೊಳ್ಳುವಂತಹ ಸಾಧನೆ ಪಟ್ಟಣ ಪಂಚಾಯಿತಿ ಮಾಡಿಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಸ್ತೆ, ಚರಂಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪಟ್ಟಣದಲ್ಲಿ ಮೂಲ ಸೌಕರ್ಯಗಳ ಕೊರತೆ ಮತ್ತು ಪ್ರಮುಖವಾಗಿ ಸ್ವಚ್ಛತೆ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಪಟ್ಟಣ ಪಂಚಾಯಿತಿಯಾದ ನಂತರ ಸ್ಥಳೀಯ ಆಡಳಿತ ಮೊದಲು ಮಾಡಿದ ಕೆಲಸವೆಂದರೆ ಮನೆ, ನೀರು, ನಿವೇಶನ, ವಾಣಿಜ್ಯ, ವ್ಯವಹಾರ ಸೇರಿದಂತೆ ವಿವಿಧ ಕರಗಳನ್ನು ಅತೀ ಎನಿಸುವಷ್ಟು ಹೆಚ್ಚಿಸಿದ್ದು. ಮತ್ತು ಗ್ರಾಮೀಣ ಮೀಸಲಾತಿ ಸೌಲಭ್ಯವನ್ನು ಕಸಿದುಕೊಂಡಿದ್ದು.

ಇಲ್ಲಿನ ಮುಖ್ಯ ರಸ್ತೆಯಿಂದ ಬಜಾರ್‌ಗೆ ಹೋಗುವ ರಸ್ತೆ ಸೇರಿದಂತೆ ಬಜಾರನ ದೈವದಕಟ್ಟೆ ಹಾಗೂ ಹಲವು ಓಣಿಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿದೆ. ಜನ ಸಂಚರಿಸಲು ಮುಜುಗರ ಪಡೆಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕೆಲವೆಡೆ ಚರಂಡಿ ನಿರ್ಮಾಣ ಅಪೂರ್ಣವಾಗಿದ್ದು, ಗಲೀಜು ನೀರು ನಿಂತಲ್ಲೇ ನಿಲ್ಲುತ್ತಿದೆ. ಹಂದಿಗಳ ಹಾವಳಿಗೆ ಜನ ಬೇಸತ್ತಿದ್ದಾರೆ, ರಸ್ತೆಗಳ ಅಗಲೀಕರಣ, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ವರ್ಷಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಕಾಮಗಾರಿ ಆರಂಭಿಸುವ ಬಗ್ಗೆ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಉತ್ಸಾಹ ತೋರುತ್ತಿಲ್ಲ ಎಂದು ಜೈ ಭಾರತ ಸಂಘಟನೆ ಅಧ್ಯಕ್ಷ ಜಹಾಂಗೀರ ಪಾಷಾ ಆರೋಪಿಸಿದ್ದಾರೆ.

ಬಜಾರ್‌ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು ಬೈಕ್‌ ಸವಾರರು ಪರದಾಡುವ ಪರಿಸ್ಥಿತಿ ಇದೆ. ರಾತ್ರಿ ಎಚ್ಚರ ತಪ್ಪಿದರೆ ಬೈಕ್‌ ಸವಾರರು, ಪಾದಚಾರಿಗಳು ಚರಂಡಿಯಲ್ಲಿ ಬಿದ್ದು ಗಾಯಗೊಳ್ಳುವುದು ಖಚಿತ. ಆದರೆ ಪುರಸಭೆಯ ಯಾವೊಬ್ಬ ಅಧಿಕಾರಿಗಳು ರಸ್ತೆಯಲ್ಲಿ ಬಿದ್ದ ಗುಂಡಿ ಮುಚ್ಚಲು ಕ್ರಮ ವಹಿಸುತ್ತಿಲ್ಲ ಎಂದು ಜನ ದೂರಿದ್ದಾರೆ.

ಹಲವು ಬಾರಿ ಪ್ರತಿಭಟನೆ ನಡೆಸುವ ಮೂಲಕ ಸ್ಥಳೀಯ ಆಡಳಿತಕ್ಕೆ ಎಚ್ಚರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಲಧಿಕಾರಿಗಳು ಲಿಖೀತ ರೂಪದಲ್ಲಿ ನೀಡಿದ ಭರವಸೆ ಸಹ ಈಡೇರಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು.
ಶಿವುಕುಮಾರ ಮ್ಯಾಗಳಮನಿ
ಕವಿತಾಳ ನವ ನಿರ್ಮಾಣ ವೇದಿಕೆ ಅಧ್ಯಕ್ಷ

ರಸ್ತೆ ಅಗಲೀಕರಣದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದಾಖಲೆ ಸಲ್ಲಿಸಲಾಗಿದೆ. ಸಭೆಯಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಸ್ಥಳ ಪರಿಶೀಲಿಸಿ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಸ್ವಚ್ಛತೆ ಕುರಿತು ಹೇಳುವುದಾದರೆ ಪೌರ ಕಾರ್ಮಿಕರ ಕೊರತೆ ಇದೆ. ಸಾಧ್ಯವಾದಷ್ಟು ಕೆಲಸ ಮಾಡಲಾಗುತ್ತಿದೆ. ಇನ್ನು ತ್ಯಾಜ್ಯ ವಿಲೇವಾರಿಗಾಗಿ ವಾಹನ ಖರೀದಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಸ್ವಚ್ಛತೆಗೆ ಕ್ರಮ ಕೈಗೊಳ್ಳುವೆ.
ಪಂಪಾಪತಿ ನಾಯ್ಕ,
ಪಪಂ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next