Advertisement

ಕವಿತಾಳ ಪಟ್ಟಣ ಅಭಿವೃದ್ಧಿಗೆ ನಿರ್ಲಕ್ಷ್ಯ

12:16 PM Sep 07, 2019 | Naveen |

ಶೇಖರಪ್ಪ ಕೋಟಿ
ಕವಿತಾಳ
: ಕವಿತಾಳ ಪಟ್ಟಣ ಪಂಚಾಯಿತಿಗೆ ಮೂರು ವರ್ಷಗಳಲ್ಲಿ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ಹರಿದು ಬಂದರೂ ಸಮರ್ಪಕ ಬಳಕೆ ಆಗದ್ದರಿಂದ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಪಟ್ಟಣದಲ್ಲಿ ಸುಸಜ್ಜಿತ ರಸ್ತೆ, ಬೀದಿ ದೀಪ ಇತರೆ ಸೌಲಭ್ಯಗಳು ಮರೀಚಿಕೆಯಾಗಿವೆ.

Advertisement

ಗ್ರಾಪಂನಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಕವಿತಾಳ ಪಟ್ಟಣ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳಡಿ ಕೋಟ್ಯಂತರ ರೂ. ಹಂಚಿಕೆಯಾಗಿದೆ. ಟೆಂಡರ್‌ ಕರೆದು ಕಾಮಗಾರಿಗೆ ಚಾಲನೆ ನೀಡಿದ್ದು ಬಿಟ್ಟರೆ ಇದುವರೆಗೆ ಅನುಷ್ಠಾನಗೊಂಡಿದ್ದು ಕೆಲವೇ ಕೆಲವು ಕಾಮಗಾರಿ ಮಾತ್ರ.

ಎಸ್‌ಎಫ್‌ಸಿ ಅರೆಬರೆ: ಪಟ್ಟಣದ 16 ವಾರ್ಡ್‌ಗಳಲ್ಲಿ ಸಿಸಿ ರಸ್ತೆಗಾಗಿ ಎಸ್‌ಎಫ್‌ಸಿ ಅನುದಾನದಲ್ಲಿ 29 ಲಕ್ಷ ರೂ. ಬಿಡುಗಡೆಯಾಗಿದೆ. 2018ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಇದುವರೆಗೂ ಯಾವ ಕಾಮಗಾರಿಯೂ ಪೂರ್ಣಗೊಂಡಿಲ್ಲ. 3ನೇ ವಾರ್ಡ್‌ನಲ್ಲಿ ಇದುವರೆಗೆ ಕಾಮಗಾರಿಯೇ ಆರಂಭಿಸಿಲ್ಲ. ಉಳಿದ ವಾರ್ಡ್‌ಗಳಲ್ಲಿಯೂ ಅರೆ-ಬರೆ ಕೆಲಸ ಮಾಡಲಾಗಿದೆ. ಕೆಲವು ಕಡೆ ಮೆಟಲಿಂಗ್‌ ಮಾಡಿ ಕೈಬಿಡಲಾಗಿದೆ. ಇನ್ನು ಕೆಲವು ಕಡೆ ರಸ್ತೆ ಅಗೆದು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕಾಮಗಾರಿ ಮುಗಿಯುವ ಮುನ್ನವೇ ಈಗ ಮತ್ತೆ 2019-20ನೇ ಸಾಲಿನ ಎಸ್‌ಎಫ್‌ಸಿ, 14ನೇ ಹಣಕಾಸಿನ ನಿಧಿಯಡಿ ಸಿಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ.

ದುರ್ಬಳಕೆ ಶಂಕೆ: ಎಸ್‌ಎಫ್‌ಸಿ ಪ್ಯಾಕೇಜ್‌ ಕಾಮಗಾರಿ ಮೂಲ ಗುತ್ತಿಗೆ ಪಡೆದ ಗುತ್ತಿಗೆದಾರರು ಕಾಮಗಾರಿ ಮಾಡದೇ ಉಪ ಗುತ್ತಿಗೆ ನೀಡಿದ್ದಾರೆ. ಉಪಗುತ್ತಿಗೆ ನೀಡುವ ಮುನ್ನ ಕಾಮಗಾರಿಗೆ ನಿಗದಿ ಇರುವ ಶೇ.50ರಷ್ಟು ಹಣ ಮೂಲ ಗುತ್ತಿಗೆದಾರರಿಗೆ ನೀಡಬೇಕು ಎನ್ನುವ ಒಪ್ಪಂದವಾಗಿದ್ದು, ಪರಿಣಾಮ ಕಾಮಗಾರಿ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ.

ನಗರೋತ್ಥಾನಕ್ಕೂ ಗ್ರಹಣ: ಒಂದು ವರ್ಷದ ಹಿಂದೆ ನಗರೋತ್ಥಾನ ಯೋಜನೆಯಡಿ ನಗರದ ವಿವಿಧ ವಾರ್ಡ್‌ಗಳಿಗೆ 3.75 ಕೋಟಿ ರೂ. ಹಂಚಿಕೆಯಾಗಿದೆ. 16 ವಾರ್ಡ್‌ಗಳಲ್ಲಿನ ಪ್ರಮುಖ ರಸ್ತೆಗಳ ವಿಸ್ತರಣೆ, ಅತಿಕ್ರಮಣ ಕಟ್ಟಡಗಳ ತೆರವು ಹಾಗೂ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲು ಹಣ ನಿಗದಿ ಮಾಡಲಾಗಿದೆ. ಮಾನ್ವಿ ಮೂಲದ ಅಕ್ಬರ್‌ಪಾಷಾ ಎನ್ನುವವರು ಒಂದು ವರ್ಷದ ಹಿಂದೆ ಗುತ್ತಿಗೆ ಪಡೆದಿದ್ದಾರೆ. ಆದರೆ ಇದುವರೆಗೂ ಕಾಮಗಾರಿಯೇ ನಡೆಸಿಲ್ಲ. ಪಪಂ ಮುಖ್ಯಾಧಿಕಾರಿ ಈರಣ್ಣ ಜಗಲಿ, ಜೆಇ ಮಲ್ಲಣ್ಣ ಅವರ ನಿಷ್ಕಾಳಜಿ, ಗುತ್ತಿಗೆದಾರರ ವಿಳಂಬ ನೀತಿಯಿಂದಾಗಿ ಪಟ್ಟಣದ ಹೃದಯ ಭಾಗ ಶಿವಪ್ಪ ಮಠದಿಂದ ತಪ್ಪಲದೊಡ್ಡಿ ಅಗಸಿವರೆಗೆ ಹಾಗೂ ಕಲ್ಮಠ ರಸ್ತೆ ಸೇರಿ ಹಲವು ಮುಖ್ಯ ರಸ್ತೆಗಳ ಅಗಲೀಕರಣ ಕಾಮಗಾರಿ ಆರಂಭವಾಗಿಲ್ಲ.

Advertisement

ಕತ್ತಲಲ್ಲೇ ಬದುಕು: ಎಸ್‌ಎಫ್‌ಸಿ, ನಗರೋತ್ಥಾನ ಪರಿಸ್ಥಿತಿ ಇದಾದರೆ, ಹಲವು ವಾರ್ಡ್‌ಗಳಲ್ಲಿ ಬೀದಿ ದೀಪಗಳ ವ್ಯವಸ್ಥೆಯೇ ಸರಿಯಿಲ್ಲ. ಜನರ ಬೈಗುಳ ತಾಳದೇ 1ನೇ ವಾರ್ಡ್‌, 3ನೇ ವಾರ್ಡ್‌, 4ನೇ ವಾರ್ಡ್‌ ಸೇರಿ ಕೆಲವು ಸದಸ್ಯರು ಸ್ವಂತ ಹಣದಲ್ಲಿ ಬೀದಿ ದೀಪ ಅಳವಡಿಸುತ್ತಿದ್ದಾರೆ. ಆದರೆ ಉಳಿದ ವಾರ್ಡ್‌ ಜನರು ಕತ್ತಲಲ್ಲಿಯೇ ರಾತ್ರಿ ಕಳೆಯಬೇಕಿದೆ. ಬೀದಿ ದೀಪ ಅಳವಡಿಕೆಗಾಗಿಯೇ 2018ರಲ್ಲಿ 9.25 ಲಕ್ಷ ರೂ. ಮೊತ್ತ ಹಂಚಿಕೆಯಾಗಿದೆ. ಆದರೆ ಗುತ್ತಿಗೆ ಪಡೆದ ಗುತ್ತಿಗೆದಾರ ಇದುವರೆಗೂ ಒಂದು ಬಲ್ಬ ಹಾಕಿಲ್ಲ ಎನ್ನುತ್ತಾರೆ ವಾರ್ಡ್‌ ಜನರು, ಸದಸ್ಯರು.

ತ್ಯಾಜ್ಯ ವಿಲೇವಾರಿ ಇಲ್ಲ: ಪಟ್ಟಣದ 16 ವಾರ್ಡ್‌ಗಳಲ್ಲೂ ಚರಂಡಿ ಹೂಳು ತೆರವು, ತ್ಯಾಜ್ಯ ವಿಲೇವಾರಿ ಸಮಸ್ಯೆ ಇನ್ನೂ ಜೀವಂತವಿದೆ. ಪೌರ ಕಾರ್ಮಿಕರು ಆಗಮಿಸಿ ಚರಂಡಿ ತ್ಯಾಜ್ಯ ತೆಗೆಯುತ್ತಾರೆ. ಆದರೆ ಆ ಕಸ ವಿಲೇವಾರಿ ಮಾಡದ ಕಾರಣ ಅದೇ ತ್ಯಾಜ್ಯ ಪುನಃ ಚರಂಡಿ ಸೇರುತ್ತಿದೆ.

ಜಿಲ್ಲಾಧಿಕಾರಿಗಳು ಗಮನಹರಿಸಲಿ: ಕವಿತಾಳ ಪಪಂಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆಯಾದರೂ ಸಮರ್ಪಕ ಬಳಕೆಯಾಗದ ಕಾರಣ ಪಟ್ಟಣದಲ್ಲಿ ಇನ್ನೂ ಸಮಸ್ಯೆಗಳು ಉಳಿದಿವೆ. ಪಟ್ಟಣ ಪಂಚಾಯಿತಿಯಲ್ಲಿ ಆಡಳಿತ ಮಂಡಳಿಯೇ ಇರದ ಕಾರಣ ಸದ್ಯ ಅಧಿಕಾರಿಗಳದ್ದೇ ಕಾರುಬಾರು ಆಗಿದೆ. ಮುಖ್ಯಾಧಿಕಾರಿ ಈರಣ್ಣ ಜಗಲಿ, ಎಇಇ, ಜೆಇಗಳು ತಮ್ಮದೇ ಕಾನೂನು ನಡೆಸಿದ್ದಾರೆ. ಹೀಗಾಗಿ ಸ್ವತಃ ಜಿಲ್ಲಾಧಿಕಾರಿಗಳೇ ಈ ಬಗ್ಗೆ ಗಮನ ಹರಿಸಬೇಕಿದೆ. ಅಂದಾಗ ಮಾತ್ರ ಇಲ್ಲಿನ ಸಮಸ್ಯೆಗೆ ಮುಕ್ತಿ ಸಿಗಲಿದೆ ಎನ್ನುತ್ತಾರೆ ಸಾರ್ವಜನಿಕರು.

ಏನ್‌ ಮಾಡೋದ್ರಿ ಪಟ್ಟಣ ಪಂಚಾಯಿತ್ಯಾಗ ಒಂದ್‌ ಕೆಲ್ಸ ಆಗವಲ್ವು. ಜನ ಬಂದ ನಮ್ಮನ್ನ ಕೇಳ್ತಾರ. ಆದ್ರ ನಾವ್‌ ಮೆಂಬರ್‌ ಆದ ತಪ್ಪಿಗೆ ಸ್ವಂತ ರೊಕ್ಕ ಕೊಟ್ಟು ಕಂಬಗಳಿಗೆ ಬಲ್ಬ್ ಹಾಕ್ಸಾಕತ್ತಿವಿ. ಚರಂಡಿ ತುಂಬಿದ್ರ ನಾವ್‌ ಮುಂದ್‌ ನಿಂತ ಸ್ವಚ್ಛ ಮಾಡ್ಸಬೇಕು. ವರ್ಷ ಆದ್ರೂ ಸಿಸಿ ರಸ್ತೆ ಕೆಲಸ ಆಗವಲ್ವು. ಮುಖ್ಯಾಧಿಕಾರಿಗೆ, ಪಿಡಿ ಸಾಹೇಬರಿಗೆ ನೂರ ಸಲ ಹೇಳಿದ್ರೂ ಕೆಲ್ಸ ಆಗವಲ್ವು. ಮೆಂಬರ್‌ ಎಲ್ಲ ಸೇರಿ ಡಿಸಿ ಕಚೇರಿ ಮುಂದೆ ಟೆಂಟ್ ಹಾಕೊದೊಂದೇ ಬಾಕಿ ಉಳಿದೈತಿ.
ಗಂಗಪ್ಪ ದಿನ್ನಿ,
 ಪಪಂ ಸದಸ್ಯರು

ಈ ಕುರಿತು ಮಾಹಿತಿಯಿಲ್ಲ. ದಾಖಲೆಗಳನ್ನು ಪರಿಶೀಲಿಸುತ್ತೇನೆ ಮತ್ತು ಜೆಇ ಅವರೊಂದಿಗೆ ಮಾತನಾಡಿ ಕ್ರಮ ತೆಗೆದುಕೊಳ್ಳುತ್ತೇನೆ.
ಈರಣ್ಣ,
ಪಪಂ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next