Advertisement

5 ಬಾರಿ ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡ ಯೋಗ ಸಾಧಕ ಕೌಶಿಕ್‌

05:35 AM Jul 20, 2017 | Harsha Rao |

ಉಡುಪಿ: ಯೋಗ ಒಂದು ಕಲೆ. ಕಲೆ, ಕ್ರೀಡೆ, ವಿಜ್ಞಾನ, ಮನಶಾಸ್ತ್ರ ಹೀಗೆ ಹಲವು ವಿಷಯಗಳ ಸಂಗಮವೇ ಯೋಗ. ಯೋಗವನ್ನೇ ಧ್ಯೆಯವಾಗಿಸಿಕೊಂಡು ಸಾಧನೆ ಮಾಡಿರುವ ಸಾಧಕರು ಹಲವರಿದ್ದಾರೆ. ಉಜಿರೆ ಎಸ್‌ಡಿಎಂ ನ್ಯಾಚುರೋಪತಿ ಹಾಗೂ ಯೋಗಿಕ್‌ ಸೈನ್ಸ್‌ನ 4ನೇ ಸೆಮಿಸ್ಟರ್‌ ವಿದ್ಯಾರ್ಥಿ ಕೌಶಿಕ್‌ ಎಂ.ಎಸ್‌. ಯೋಗ ಸ್ಪರ್ಧೆಯಲ್ಲಿ 5 ಬಾರಿ ರಾಷ್ಟ್ರ, 8 ಬಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಸಾಧಕ. 

Advertisement

ಮೂಲತಃ ಕಾರ್ಕಳ ತಾಲೂಕಿನ ಹಿರಿಯಂಗಡಿಯವರಾದ ಕೌಶಿಕ್‌ 7ನೇ ತರಗತಿಯಿಂದಲೇ ಯೋಗಾಭ್ಯಾಸವನ್ನು ಮಾಡುತ್ತಾ, 2009ರಲ್ಲಿ ದಿಲ್ಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲಿಂದ ನಿರಂತರವಾಗಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಕಾಲೇಜನ್ನು ಪ್ರತಿನಿಧಿಸುತ್ತಾ ಬರುತ್ತಿದ್ದಾರೆ. 

ಕಠಿನ ಯೋಗಾಸನಗಳ ಪ್ರದರ್ಶನ
ಕುಂಜಿಬೆಟ್ಟು ಟಿ. ಎ. ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಿದ ವಿಶ್ವ ಯೋಗ ದಿನಾಚರಣೆಯಲ್ಲಿ ಕೌಶಿಕ್‌ ಎಂ. ಎಸ್‌. ಅವರು ಕೆಲ ಕಠಿನ ಯೋಗಾಸನಗಳನ್ನು ಪ್ರದರ್ಶಿಸಿದರು. ಅದರಲ್ಲೂ ಪ್ರಮುಖವಾಗಿ ಪಿಂಚಹಸ್ತಾಸನ, ಶಿರ್ಷಾಸನ, ಶಿರ್ಷಾಸನದಲ್ಲಿ ಪದ್ಮಾಸನ, ಊಧ್ವಾìಸನ, ಪೂರ್ಣ ಶಲಾಭಾಸನ, ವಿಪರೀತ ಶಲಭ ವೃಶ್ಚಿಕಾಸನ, ಪಿಂಚಹಸ್ತ ವೃಶ್ಚಿಕಾಸನ, ಬಾಮದೇವ ವೃಶ್ಚಿಕಾಸನದಂತಹ ಕಷ್ಟಕರವಾದ ಆಸನಗಳ ಪ್ರದರ್ಶನ ವಿಶೇಷವಾಗಿತ್ತು. 

ಕಲಿಕೆಯಲ್ಲೂ ಮುಂದು
ಪ್ರಾಥಮಿಕ ಶಿಕ್ಷಣ ಭುಜಬಲಿ ಓರಿಯಂಟಲ್‌ ಖಾಸಗಿ ಹಿ. ಪ್ರಾ. ಶಾಲೆ ಹಿರಿಯಂಗಡಿ, ಪ್ರೌಢಶಿಕ್ಷಣ ಎಸ್‌. ಎನ್‌. ಪ್ರೌಢಶಾಲೆ ಹಿರಿಯಂಗಡಿ, ಪ. ಪೂ. ಶಿಕ್ಷಣ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ, ಈಗ ಉಜಿರೆ ಎಸ್‌ಡಿಎಂ ನ್ಯಾಚುರೋಪತಿ ಹಾಗೂ ಯೋಗಿಕ್‌ ಸೈನ್ಸ್‌ನ 4ನೇ ಸೆಮಿಸ್ಟರ್‌ ವಿದ್ಯಾರ್ಥಿಯಾಗಿರುವ ಕೌಶಿಕ್‌ ಯೋಗದಂತೆ ಕಲಿಕೆಯಲ್ಲೂ ಮುಂದು. ಎಸೆಸೆಲ್ಸಿಯಲ್ಲಿ ಶೇ. 80 ಹಾಗೂ ಪಿಯುಸಿಯಲ್ಲಿ ಶೇ. 72 ಅಂಕಗಳನ್ನು ಗಳಿಸಿದ್ದಾರೆ. ಕಲಿಯುತ್ತಿರುವ ಯೋಗ ಹಾಗೂ ಮೆಡಿಕಲ್‌ ಕ್ಷೇತ್ರದಲ್ಲಿ ಮುಂದುವರಿಯುವ ಅಭಿಲಾಷೆಯಿದೆ. 

ಕುಟುಂಬದ ಪರಿಚಯ
ಕೌಶಿಕ್‌ ಅವರಿಗೆ ತಾಯಿ ಸುನಂದಾ ಹಾಗೂ ಅಣ್ಣ ಕಾರ್ತಿಕ್‌ ಎಲ್ಲ ಸಾಧನೆಗೂ ಸಹಕಾರಿಯಾಗಿದ್ದು, ತಂದೆ ಮೋಹನ್‌ ಮೊಲಿ ಅವರು ಅಸೌಖ್ಯದಿಂದ ಮೃತಪಟ್ಟಿದ್ದಾರೆ. ಅಣ್ಣ ಕಾರ್ತಿಕ್‌ ಎಂಜಿನಿಯರಿಂಗ್‌ ಮುಗಿಸಿ ವಿಪ್ರೋದಲ್ಲಿ ಉದ್ಯೋಗದಲ್ಲಿದ್ದು, ಕುಟುಂಬದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಅದರ ಜತೆಗೆ ಉಜಿರೆ ಕಾಲೇಜು ಕೂಡ ವಿದ್ಯಾಭ್ಯಾಸಕ್ಕೆ ನೆರವು ನೀಡಿದೆ ಎಂದವರು ಸ್ಮರಿಸಿಕೊಂಡಿದ್ದಾರೆ. 

Advertisement

5 ರಾಷ್ಟ್ರ, 8 ರಾಜ್ಯಮಟ್ಟ ಸ್ಪರ್ಧೆಯಲ್ಲಿ ಭಾಗಿ
ಕೌಶಿಕ್‌ ಅವರು 2009 ರಿಂದೀಚೆಗೆ 5 ಬಾರಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದು 2011, 2014, 2015, 2016ರಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ 3 ಬಾರಿ ರಾಜಧಾನಿ ಹೊಸದಿಲ್ಲಿಯಲ್ಲಿ ಒಂದು ಸಲ ಗುಜರಾತ್‌ ಹಾಗೂ ಮತ್ತೂಂದು ಬಾರಿ ಪಂಜಾಬ್‌ನಲ್ಲಿ ಸ್ಪರ್ಧೆ ನಡೆದಿತ್ತು. ಅದಲ್ಲದೆ 8 ಬಾರಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಹೆಗ್ಗಳಿಕೆ ಅವರದು. 

ಗುರುಗಳೇ ಪ್ರೇರಣೆ
ಮೊದಲಿಗೆ ಯೋಗ ಕಲಿಯಲು ಪ್ರೇರಣೆ ಪ್ರಾಥಮಿಕ ಶಾಲೆಯಲ್ಲಿ ಕಲಿಸಿದ ಯೋಗ ಗುರು ಗಣೇಶ್‌ ಪ್ರಭು, ಆನಂತರ ಕಾರ್ಕಳದ ಖ್ಯಾತ ಯೋಗ ಗುರು ಬಿ. ಸಿ. ಪೈ ಹಾಗೂ ಈಗ ಉಜಿರೆ ಕಾಲೇಜು ಯೋಗ ಕ್ಷೇತ್ರದಲ್ಲಿ ಸಾಧಿಸಲು ಪ್ರೇರಣೆ ಹಾಗೂ ಸಹಕರಿಸಿದ್ದಾರೆ. ನನ್ನ ಮನೆ, ನಾನು ಕಲಿತ ಎಲ್ಲ ಶಿಕ್ಷಣ ಸಂಸ್ಥೆ, ಶಿಕ್ಷಕರು ತುಬಾನೇ ಬೆಂಬಲ ನೀಡಿದ್ದಾರೆ. ಯೋಗದಿಂದ ಮನಸ್ಸಿನ ನಿಯಂತ್ರಣ, ಉತ್ತಮ ಕಲಿಕೆ, ಎಲ್ಲ ಸಾಧನೆಗೂ ಯೋಗ ಸಹಕಾರಿ ಎಂದು ಕೌಶಿಕ್‌ ಹೇಳಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next