ಒಂದು ಸಿನಿಮಾ ಮಾಡೋದು ದೊಡ್ಡ ವಿಷಯವಲ್ಲ. ಆದರೆ, ಆ ಸಿನಿಮಾವನ್ನು ಎಲ್ಲೆಡೆ ಪ್ರಚುರ ಪಡಿಸೋದು ಬಹುದೊಡ್ಡ ವಿಷಯ. ಒಂದಷ್ಟು ಮಂದಿಗೆ ಇಂಥದ್ದೊಂದು ಸಿನಿಮಾ ಇದೆ, ಅಂಥದ್ದೊಂದು ಡೇಟ್‌ಗೆ ರಿಲೀಸ್ ಆಗ್ತಾ ಇದೆ ಎಂದು ಗೊತ್ತು ಮಾಡುವುದು ಮುಖ್ಯ. ಬಹುತೇಕ ಸಿನಿಮಾಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಪ್ರಚಾರದ ಕೊರತೆಯಿಂದ ಹಿಂದೆ ಬೀಳುತ್ತವೆ. ಹಾಗಾಗಿ ಅಂತಹ ಚಿತ್ರಗಳು ಬಂದದ್ದು, ಹೋಗಿದ್ದು ಗೊತ್ತಾಗುವುದೇ ಇಲ್ಲ.
ಈಗ ಬಿಡುಗಡೆಗೆ ಮುನ್ನವೇ ತಮ್ಮ ಚಿತ್ರ ಎಲ್ಲರಿಗೂ ಮುಟ್ಟಬೇಕು ಎಂಬ ಉದ್ದೇಶದಿಂದ ಹೀಗೊಂದು ಚಿತ್ರತಂಡ ಸಾಗರದಾಚೆಗೂ ಹೋಗಿ ಬಂದಿದೆ. ಹೌದು, ಅದು “ಒನ್ಸ್ ಮೋರ್ ಕೌರವ’ ಚಿತ್ರತಂಡ. ಎಸ್.ಮಹೇಂದರ್ ನಿರ್ದೇಶನದ ಈ ಚಿತ್ರವನ್ನು ನರೇಶ್ ಗೌಡ ಮೊದಲ ಬಾರಿಗೆ ನಿರ್ಮಿಸಿ, ನಾಯಕರಾಗಿಯೂ ನಟಿಸಿದ್ದಾರೆ. ಈ ಸಿನಿಮಾ ಈಗ ಪೂರ್ಣಗೊಂಡಿದ್ದು, ಅಕ್ಟೋಬರ್ 13 ರಂದು ತೆರೆಗೆ ಬರುತ್ತಿದೆ. ನರೇಶ್ ಗೌಡ ಅವರಿಗೆ ಮೊದಲ ಚಿತ್ರ ಆಗಿರುವುದರಿಂದ, ಎಲ್ಲರಿಗೂ ತಲುಪಬೇಕು ಎಂಬ ಉದ್ದೇಶದಿಂದ ಎಲ್ಲೆಡೆ ಪ್ರಚಾರ ಶುರುಮಾಡಿದ್ದಾರೆ.
ಅಷ್ಟೇ ಅಲ್ಲ, ಅವರು ತಮ್ಮ ಗೆಳೆಯರ ಮೂಲಕ ವಿದೇಶದಲ್ಲೂ “ಕೌರವ’ನ ದರ್ಶನ ಮಾಡಿಸಿದ್ದಾರೆ. ಇತ್ತೀಚೆಗೆ ಅಮೇರಿಕಾಗೆ ತೆರಳಿದ್ದ ನರೇಶ್‌ಗೌಡ ಅವರು ಅಲ್ಲಿನ ಡಲ್ಲಾಸ್ ಸಿಟಿಗೆ ಹೋಗಿ, “ಒನ್ಸ್ ಮೋರ್ ಕೌರವ’ ಚಿತ್ರದ ಪ್ರಚಾರ ಮಾಡಿ ಬಂದಿದ್ದಾರೆ. ಅಲ್ಲಿನ ನಾವಿಕ ವಿಶೇಷ ಸಮಾರಂಭ ಏರ್ಪಡಿಸಿ, ನೂರಾರು ಅನಿವಾಸಿ ಭಾರತೀಯರಿಗೆ ಚಿತ್ರದ ಹಾಡುಗಳು ಹಾಗೂ ಪ್ರೋಮೋ ತೋರಿಸಿದೆ.
ಚಿತ್ರದ ಹಾಡು, ಪ್ರೋಮೋ ನೋಡಿದ ಅಲ್ಲಿನ ಮಂದಿ ನರೇಶ್ ಗೌಡ ಅವರ ಪ್ರಯತ್ನ ಮೆಚ್ಚಿದ್ದಲ್ಲದೆ, ಸಿನಿಮಾದೊಳಗೆ ಹಳ್ಳಿ ಸೊಗಡನ್ನು ಸೆರೆಹಿಡಿದಿರುವ ಬಗೆಯನ್ನು ಹೊಗಳಿದ್ದಾರಂತೆ. ಇನ್ನು, ಸಿನಿಮಾದ ಹಾಡು, ಪ್ರೋಮೋ ನೋಡಿದ ಅಮೇರಿಕಾದ ಎಂಟು ಮಂದಿ ಸಿನಿಮಾವನ್ನು ಯುಎಸ್‌ನಲ್ಲಿ ರಿಲೀಸ್ ಮಾಡಲು ನಮಗೆ ಕೊಡಿ ಅಂತಾನೂ ಕೇಳಿದ್ದಾರಂತೆ. ಆದರೆ, ನರೇಶ್‌ಗೌಡ ಅವರು ಮೊದಲು ಇಲ್ಲಿ ರಿಲೀಸ್ ಮಾಡಿ ಅದಾದ ಬಳಿಕ ಸಾಗರದಾಚೆ ರಿಲೀಸ್ ಮಾಡುವ ಬಗ್ಗೆ ಯೋಚಿಸಿದ್ದಾರಂತೆ.
ಈ ಹಿಂದೆ “ರಂಗಿತರಂಗ’ ಚಿತ್ರವನ್ನು ಅಮೇರಿಕಾದಲ್ಲಿ ರಿಲೀಸ್ ಮಾಡಿದ್ದ ಗೆಳೆಯರೇ, ನರೇಶ್ ಗೌಡ ಅವರ ಸಿನಿಮಾವನ್ನೂ ರಿಲೀಸ್ ಮಾಡಲು ಮುಂದಾಗಿದ್ದಾರಂತೆ. ಇದುವರೆಗೆ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದ, ನರೇಶ್ ಗೌಡ ಅವರಿಗೆ ಇದು ನಿರ್ಮಾಣ ಹಾಗೂ ನಾಯಕರಾಗಿ ಮೊದಲ ಪ್ರಯತ್ನ. ಹಾಗಾಗಿ ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಎಸ್. ಮಹೇಂದರ್ ಕೂಡ ಗ್ಯಾಪ್ ಬಳಿಕ ಹಳ್ಳಿ ಸೊಗಡಿನ ಚಿತ್ರ ಮಾಡಿದ್ದಾರೆ. ಈಗಾಗಲೇ ಹಾಡುಗಳು ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿದೆ.