Advertisement

“ಕೌರವ’ನಿಗೆ ಮತ್ತೆ ಕೈತಪ್ಪಿದ ಸಚಿವಗಿರಿ

10:55 PM Jun 14, 2019 | Lakshmi GovindaRaj |

ಹಾವೇರಿ: ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ, “ಕೌರವ’ ಖ್ಯಾತಿಯ ಚಲನಚಿತ್ರ ನಟ ಬಿ.ಸಿ.ಪಾಟೀಲಗೆ ಸಚಿವ ಸ್ಥಾನ ನೀಡದೆ ಇರುವುದು ಜಿಲ್ಲೆಯ ಕಾಂಗ್ರೆಸ್‌ನಲ್ಲಿ ತಲ್ಲಣ ಸೃಷ್ಟಿಸಿದೆ.

Advertisement

ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಬಿ.ಸಿ.ಪಾಟೀಲಗೆ ಮೊದಲ ಸಚಿವ ಸಂಪುಟದಲ್ಲಿಯೇ ಸಚಿವ ಸ್ಥಾನ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಆಗ ಸಚಿವ ಸ್ಥಾನ ಕೈತಪ್ಪಿದಾಗ ಸಚಿವ ಸಂಪುಟದ ಮೊದಲ ವಿಸ್ತರಣೆ ವೇಳೆಯಲ್ಲಾದರೂ ಸಚಿವ ಪಟ್ಟ ಸಿಗಬಹುದು ಎಂದು ಭಾವಿಸಲಾಗಿತ್ತು.

ಆಗಲೂ ಸಚಿವ ಸ್ಥಾನ ಕೈತಪ್ಪಿತು. ಈಗ ಮೂರನೇ ಬಾರಿಯೂ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ಜಿಲ್ಲಾ ಕಾಂಗ್ರೆಸ್‌ನಲ್ಲಿ ಬೇಸರ ಮೂಡಿಸಿದೆ.ಕಾಂಗ್ರೆಸ್‌ನ ಮಾಜಿ ಸಚಿವರಾದ ಕೆ.ಬಿ.ಕೋಳಿವಾಡ, ರುದ್ರಪ್ಪ ಲಮಾಣಿ, ಮಾಜಿ ಶಾಸಕರಾದ ಮನೋಹರ ತಹಸೀಲ್ದಾರ್‌, ಬಸವರಾಜ ಶಿವಣ್ಣನವರ,

ಅಜ್ಜಂಪೀರ್‌ ಖಾದ್ರಿ ಸೇರಿ ಇನ್ನಿತರರು ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯವರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಏಕೈಕ ಶಾಸಕ ಬಿ.ಸಿ.ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದರು. ಆದರೂ ಪಕ್ಷ ಜಿಲ್ಲೆಯ ಮುಖಂಡರ ಬೇಡಿಕೆಗೆ ಸ್ಪಂದಿಸದೆ ಇರುವುದು ಸಹಜವಾಗಿ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.

ಪ್ರತಿ ಬಾರಿ ಸಚಿವ ಸ್ಥಾನ ಕೈತಪ್ಪಿದಾಗಲೂ ಬಿ.ಸಿ.ಪಾಟೀಲ ಬಹಿರಂಗವಾಗಿಯೇ ಅಸಮಾಧಾನ, ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಅವರನ್ನು ಸಮಾಧಾನ ಪಡಿಸುವುದಕ್ಕಾಗಿಯಾದರೂ ಈ ಬಾರಿ ಅವರಿಗೆ ಸಚಿವ ಸ್ಥಾನ ನೀಡಬಹುದು ಎಂಬ ನಿರೀಕ್ಷೆ ಹಿಂದೆಂದಿಗಿಂತಲೂ ಹೆಚ್ಚಾಗಿತ್ತು. ಈಗಲೂ ಸಚಿವ ಸ್ಥಾನ ಕೈತಪ್ಪಿ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ.

Advertisement

ಶಂಕರ್‌ಗೆ ಕೈ ನಾಯಕರ ವಿರೋಧ: ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಆರ್‌. ಶಂಕರ್‌, ವಿಧಾನಸಭಾ ಚುನಾವಣೆಯಲ್ಲಿ ಕೆಪಿಜೆಪಿಯಿಂದ ಸ್ಪ ರ್ಧಿಸಿ ಕೆ.ಬಿ.ಕೋಳಿವಾಡ ಅವರನ್ನು ಸೋಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅವರ ಬೆಂಬಲಿಗರು ಬಿಜೆಪಿ ಬೆಂಬಲಿಸಿದ್ದಾರೆ.

ಅಂಥವರಿಗೆ ಕಾಂಗ್ರೆಸ್‌ ಮಣೆ ಹಾಕಿ ಸಚಿವ ಸ್ಥಾನ ನೀಡುವುದು ಸರಿಯಲ್ಲ ಎಂಬುದು ಜಿಲ್ಲೆಯ ಕೆಲ ಕಾಂಗ್ರೆಸ್‌ ನಾಯಕರ ಅಭಿಮತವಾದರೆ, ಮತ್ತೆ ಕೆಲವರು ಆರ್‌. ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ವಿರೋಧವಿಲ್ಲ. ಆದರೆ, ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಬಿ.ಸಿ.ಪಾಟೀಲ ಅವರಿಗೂ ಸಚಿವ ಸ್ಥಾನ ನೀಡಬೇಕಿತ್ತು ಎಂಬ ಅಪೇಕ್ಷೆ ವ್ಯಕ್ತಪಡಿಸುತ್ತಿದ್ದಾರೆ.

ಬಿ.ಸಿ.ಪಾಟೀಲ, ಜಿಲ್ಲೆಯಲ್ಲಿ ಗೆದ್ದಿರುವ ಕಾಂಗ್ರೆಸ್‌ನ ಏಕೈಕ ಶಾಸಕ. ಅವರಿಗೆ ಈಗಲಾದರೂ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಈಗಲೂ ಕೈ ತಪ್ಪಿದೆ. ಅವರಿಗೆ ಸಚಿವ ಸ್ಥಾನ ಸಿಕ್ಕರೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ. ಇನ್ನೂ ಕಾಲ ಮಿಂಚಿಲ್ಲ. ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.
-ಎಂ.ಎಂ.ಹಿರೇಮಠ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ.

* ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next