Advertisement

ಕಾಪು: ವಾರದ ಸಂತೆ, ಸಂಚಾರಕ್ಕೆ ತೊಂದರೆ

02:50 AM May 21, 2018 | Team Udayavani |

ಕಾಪು: ಇಲ್ಲಿ ನಡೆಯುತ್ತಿರುವ ವಾರದ ಸಂತೆ ಸಂಚಾರ ಅಡಚಣೆಗೆ ಕಾರಣವಾಗಿದ್ದು ದಿನವಿಡೀ ಟ್ರಾಫಿಕ್‌ ಜಾಮ್‌ಗೆ ಕಾರಣವಾಗುತ್ತಿದೆ. 

Advertisement

ಶುಕ್ರವಾರ ನಡೆಯುವ ಸಂತೆಯಂದು ಸರ್ವಿಸ್‌ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಸಮಸ್ಯೆಯಾಗು ವುದರಿಂದ ಜನರು, ಮಾರುಕಟ್ಟೆ ವ್ಯಾಪಾರಸ್ಥರು, ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.  

ಸರ್ವಿಸ್‌ ರಸ್ತೆಯಲ್ಲೇ ಪಾರ್ಕಿಂಗ್‌ 
ವಾರದ ಸಂತೆಗೆ ಬರುವ ಜನ ತಮ್ಮ ವಾಹನಗಳನ್ನು ಹೊಸ ಮಾರಿಗುಡಿ ರಸ್ತೆಯ ಜಂಕ್ಷನ್‌ನಿಂದ ಹಿಡಿದು ಹರಿಪ್ರಸಾದ್‌ ಸರ್ವಿಸ್‌ ಸ್ಟೇಷನ್‌ನವರೆಗೆ ಸುಮಾರು 250 ಮೀಟರ್‌ ಉದ್ದದ ಸರ್ವಿಸ್‌ ರಸ್ತೆಯಲ್ಲಿ ಎಲ್ಲೆಂದರಲ್ಲಿ ಪಾರ್ಕ್‌ ಮಾಡಿ ಹೋಗುತ್ತಿರುವುದೇ ಟ್ರಾಫಿಕ್‌ ಸಮಸ್ಯೆಗೆ ಕಾರಣವಾಗುತ್ತಿದೆ. 
 
ಸಂಚಾರ ಕಷ್ಟ
ಕಾಪುವಿನ ಸರ್ವಿಸ್‌ ರಸ್ತೆಯಲ್ಲಿ ಉಡುಪಿಯಿಂದ ಮಂಗಳೂರಿನತ್ತ ಸಂಚರಿಸುವ ಎಕ್ಸ್‌ಪ್ರೆಸ್‌ ಬಸ್‌ಗಳು, ಕಾಪು ಪೇಟೆಯಿಂದ ಬಂದು ಸರ್ವಿಸ್‌ ರಸ್ತೆಯಲ್ಲಿ ಓಡಾಡುವ ವಾಹನಗಳು, ಕಾಪು ಅಂಡರ್‌ ಪಾಸ್‌ನಿಂದ ಪೊಲಿಪು ಕಡೆಗೆ ಹೋಗುವ ವಾಹನಗಳಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. 

ರಿವರ್ಸ್‌ ಚಾಲನೆ ಅನಿವಾರ್ಯ!
ಸರ್ವಿಸ್‌ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಎದುರು ಬದುರಾಗಿ ವಾಹನಗಳು ಬಂದರೆ ಯಾವುದಾದರೂ ಒಂದು ದಿಕ್ಕಿನಿಂದ ವಾಹನ ಹಿಮ್ಮುಖ ಚಾಲನೆ ಮಾಡುವುದು ಅನಿವಾರ್ಯ.  ಪ್ರತೀ ಮೂರು ನಿಮಿಷಕ್ಕೊಮ್ಮೆ ಎಂಬಂತೆ ಸಂಚರಿಸುವ ಎಕ್ಸ್‌ಪ್ರೆಸ್‌ ಬಸ್ಸುಗಳು ಬಂದರಂತೂ ಎದುರಿನಲ್ಲಿ ಸಿಲುಕಿ ಹಾಕಿಕೊಳ್ಳುವ ವಾಹನ ಸವಾರ‌ರು ತಮ್ಮ ವಾಹನಗಳನ್ನು ಎಷ್ಟೇ ದೊಡ್ಡ ಸಾಲಿದ್ದರೂ ಹಿಮ್ಮುಖವಾಗಿಯೇ ಚಲಾಯಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಒಂದು ವೇಳೆ ಅಸಾಧ್ಯವಾದರೆ ಬಸ್‌ಗಳ ನಿರಂತರ ಹಾರನ್‌, ಪೊಲೀಸರಿದ್ದರೆ ಅವರ ಬೈಗುಳ ಚಾಲಕರನ್ನು ಕಾಡುತ್ತದೆ. 

ಪರಿಹಾರವೇನು?
ವಾರದ ಸಂತೆಗೆ ಬರುವ ವಾಹನಗಳಿಗೆ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿ, ಸರ್ವೀಸ್‌ ರಸ್ತೆಯಲ್ಲಿ ಏಕಮುಖ ಸಂಚಾರದ ವ್ಯವಸ್ಥೆ, ಸರ್ವಿಸ್‌ ರಸ್ತೆಯಲ್ಲಿ ಎಕ್ಸ್‌ಪ್ರೆಸ್‌ ಬಸ್‌ಗಳು ಪ್ರವೇಶಿಸದಂತೆ ನಿರ್ಬಂಧ, ಎರ್ರಾಬಿರ್ರಿಯಾಗಿ ವಾಹನ ನಿಲ್ಲಿಸಿ ಹೋಗುವವರಿಗೆ ದಂಡ ವಿಧಿಸುವುದು, ಪ್ರತೀ ಶುಕ್ರವಾರ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸುವುದು ಮೊದಲಾದ ಪರಿಹಾರ ಕ್ರಮಗಳನ್ನು ಅನುಸರಿಸಬೇಕಾಗಿದೆ. 

Advertisement

ವ್ಯಾಪಾರಸ್ಥರಿಗೂ ತೊಂದರೆ 
ಸಂತೆಗೆ ಬರುವ ಗ್ರಾಹಕರು ವಾಹನಗಳನ್ನು ಸರ್ವೀಸ್‌ ರಸ್ತೆಯಲ್ಲಿ ಇಟ್ಟು ಹೋಗುವುದರಿಂದ ವ್ಯವಹಾರಕ್ಕೆ ತೊಂದರೆಯಾಗುತ್ತದೆ. ಕೆಲವೊಮ್ಮೆ ಸಂತೆ ವರ್ತಕರು ಕೂಡ ರಸ್ತೆ ಮಧ್ಯದಲ್ಲೇ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಪುರಸಭೆ ವತಿಯಿಂದ ಹೆದ್ದಾರಿ ಬದಿಯಲ್ಲಿರುವ ಡಿವೈಡರ್‌ ಮೇಲೆ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಟ್ಟಲ್ಲಿ ಸಂಚಾರದ ತೊಂದರೆಯನ್ನು ಸರಿಪಡಿಸಲು ಸಾಧ್ಯವಿದೆ. 
– ಹರೀಶ್‌ ಶೆಟ್ಟಿ, ಖಾಯಂ ವ್ಯಾಪಾರಸ್ಥರು

ಪುರಸಭೆ ಕ್ರಮ ತೆಗೆದುಕೊಳ್ಳಲಿ 
ಸರ್ವೀಸ್‌ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಕಡೆಯಿಂದ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ವರ್ತಕರು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಒಂದು ಬದಿಯಲ್ಲಿ ಪಾರ್ಕಿಂಗ್‌ ಮತ್ತೂಂದು ಬದಿಯಲ್ಲಿ ನೋ ಪಾರ್ಕಿಂಗ್‌ ಎಂಬ ಬೋರ್ಡ್‌ನ್ನು ಹಾಕುವುದು ಉತ್ತಮ. ಈ ಬಗ್ಗೆ ಪುರಸಭೆ ಯೋಚನೆ ನಡೆಸಬೇಕು 
– ನಿತ್ಯಾನಂದ ಗೌಡ,ಕಾಪು ಎಸ್‌ಐ

ಸಮಸ್ಯೆ ಪರಿಶೀಲಿಸಿ ಮುಂದಿನ ಕ್ರಮ 
ಕಾಪು ಸಂತೆ ಮಾರುಕಟ್ಟೆಯಿಂದ ಆಗುತ್ತಿರುವ ಟ್ರಾಫಿಕ್‌ ಜಾಮ್‌ನ ತೊಂದರೆ ಬಗ್ಗೆ ಗಮನಕ್ಕೆ ಬಂದಿಲ್ಲ. ಸಮಸ್ಯೆ ಬಗ್ಗೆ ಸ್ಥಳ ಪರಿಶೀಲನೆ ಮಾಡುತ್ತೇವೆ. ಪೊಲೀಸರ ಜತೆ ಕೂಡ ಈ ಬಗ್ಗೆ ಚರ್ಚಿಸಿ ಕ್ರಮ ತೆಗೆದು ಕೊಳ್ಳುತ್ತೇವೆ. ಅಗತ್ಯ ಬಿದ್ದಲ್ಲಿ ನೋ ಪಾರ್ಕಿಂಗ್‌ ಬೋರ್ಡ್‌ ಅಳವಡಿಸಲು ಬದ್ಧರಿದ್ದೇವೆ. 
– ಶೀನ ನಾಯ್ಕ, ಪುರಸಭೆ ಮುಖ್ಯಾಧಿಕಾರಿ

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next