ಕಾಪು: ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಆಡಳಿತ ವ್ಯವಸ್ಥೆಗಳು ವಿಫಲವಾಗುತ್ತಿವೆ. ಅಧಿಕಾರಿಗಳು ಕಾರ್ಯಕ್ರಮಗಳ ಬಗ್ಗೆ ಪ್ರಚಾರಗೊಳಿಸಿ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕಾಪು ಪುರಸಭಾ ಸಭಾಂಗಣದಲ್ಲಿ ಸೆ. 4ರಂದು ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರೀ ಮಳೆಯಿಂದಾಗಿ ಕಾಪು ತಾಲೂಕಿನಲ್ಲಿ ಸುಮಾರು 20 ಹೆಕ್ಟೇರ್ ಬೆಳೆ ಹಾನಿಯಾಗಿದ್ದು 11 ಗ್ರಾಮಗಳ 54 ಜನ ರೈತರ ಬೆಳೆ
ನಷ್ಟವಾಗಿದೆ.
ಕೃಷಿ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ಸರ್ವೆ ನಡೆಸಿ ವರದಿ ನೀಡುವ ಅಗತ್ಯವಿದೆ. ಕಾಪು ತಾಲೂಕು ಆಸ್ಪತ್ರೆ ನಿರ್ಮಾಣದ ಬಗ್ಗೆ ಅಗತ್ಯ ನಿವೇಶನ ಗುರುತಿಸುವಂತೆ ಮತ್ತು ಡೆಂಗ್ಯೂಹರಡದ ಹಾಗೆ ತಡೆಗಟ್ಟುವಿಕೆಯ ಬಗ್ಗೆ ಅಗತ್ಯ ಕ್ರಮ ವಹಿಸುವುದು, ಕೊರಗ ಸಮುದಾಯದ ಶೈಕ್ಷಣಿಕ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಇಲಾಖೆಗಳಿಗೆ ಸೂಚನೆ ನೀಡಿದರು.
ಉದಯವಾಣಿ ವರದಿ ಪ್ರಸ್ತಾವ: ಕುತ್ಯಾರು ಗ್ರಾ.ಪಂ. ವ್ಯಾಪ್ತಿಯ ಕುಧ್ಕುಲು ಪರಿಸರದಲ್ಲಿ ಶಾಲೆಗೆ ಹೋಗುವ ಮಕ್ಕಳು, ದಿನ ನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವ ನಿವಾಸಿಗಳು ಮಳೆಗಾಲದಲ್ಲಿ ಹೊಳೆ ಧಾಟಿ ಹೋಗುವ ಅನಿವಾರ್ಯತೆ ಬಗ್ಗೆ ಉದಯವಾಣಿ ಸುದಿನಲ್ಲಿ ಪ್ರಕಟಗೊಂಡ ವರದಿ ಬಗ್ಗೆ ಕೆೆಡಿಪಿ ಸಭೆಯಲ್ಲಿ ಚರ್ಚೆ ನಡೆಯಿತು. ನಾಮನಿರ್ದೇಶಿತ ಸದಸ್ಯ ರಾಜೇಶ್ ಕುಲಾಲ್ ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ತಹಶೀಲ್ದಾರ್ ಡಾ| ಪ್ರತಿಭಾ ಆರ್. ಕೂಡಾ ಇದಕ್ಕೆ ದನಿಗೂಡಿಸಿದರು. ಶೀಘ್ರ ಕುಧ್ಕುಲು ಪ್ರದೇಶಕ್ಕೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ಕಿರು ಸೇತುವೆ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಪು ತಹಶೀಲ್ದಾರ್ ಡಾ| ಪ್ರತಿಭಾ ಆರ್., ತಾ.ಪಂ. ಆಡಳಿತಾಧಿಕಾರಿ ಪೂರ್ಣಿಮಾ, ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿ’ಸಿಲ್ವ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ವೈ. ಸುಕುಮಾರ್, ಜಿತೇಂದ್ರ ಪುರ್ಟಾಡೋ, ಪ್ರಭಾ ಶೆಟ್ಟಿ, ರಾಜೇಶ್ ಕುಲಾಲ್, ರಮೇಶ್ ಬೆಳ್ಳೆ ಉಪಸ್ಥಿತರಿದ್ದರು.