Advertisement

ಮೌಖಿಕ ಸಾಹಿತ್ಯಗಳ ದಾಖಲೀಕರಣ, ಭಾಷಾಂತರ ಪ್ರಕ್ರಿಯೆಗೆ ಸಾಹಿತ್ಯ ಪರಿಷತ್ತು ಮುಂದಾಗಲಿ

10:00 AM Dec 18, 2019 | sudhir |

ಮೂಡುಬೆಳ್ಳೆ : ತಲೆಮಾರುಗಳಿಂದ ಸಾಗಿ ಬಂದಿರುವ ಮೌಖಿಕ ಸಾಹಿತ್ಯಗಳು ಜನಪದೀಯರ ಮೂಲಕವಾಗಿ ಇಂದಿಗೂ ಪ್ರಚುರದಲ್ಲಿ ಇಳಿದು ಬಿಟ್ಟಿವೆ.

Advertisement

ಹಾಡುತ್ತಲೋ, ಹೇಳುತ್ತಲೋ ಅದನ್ನು ಅವರು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿನವರೆಗೆ ದಾಟಿಸುತ್ತಲೇ ಬರುತ್ತಿದ್ದಾರೆ. ಇಂತಹ ಅಮೂಲ್ಯ ಹಾಡುಗಳು, ಕತೆಗಳು ಸಾಹಿತ್ಯಗಳೇ ಆಗಿದ್ದು, ಇವುಗಳು ಸಮಾಜಮುಖೀ ಅಲೋಚನೆಗಳೊಂದಿಗೆ ಆಶುವಾಗಿ ಕಟ್ಟಿದವುಗಳಾಗಿವೆ.

ಇವುಗಳಲ್ಲಿ ಮಹಾಕಾವ್ಯಗಳಿಗಿಂತ ಹೆಚ್ಚಿನ ಜೀವನಾದರ್ಶಗಳಿದ್ದು, ಇವುಗಳ ದಾಖಲೀಕರಣ, ಲಿಪೀಕರಣ, ಭಾಷಾಂತರ ಪ್ರಕ್ರಿಯೆಯು ಸಾಹಿತ್ಯದ ಮೂಲಕ ನಡೆಯಬೇಕಿದೆ ಎಂದು ಹಿರಿಯ ಸಂಶೋಧಕ, ಜಾನಪದ ವಿದ್ವಾಂಸ ಕೆ.ಎಲ್‌. ಕುಂಡಂತಾಯ ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಾಪು ಘಟಕದ ವತಿಯಿಂದ ಮೂಡುಬೆಳ್ಳೆ ಸಂತ ಲಾರೆನ್ಸ್‌ ಚರ್ಚ್‌ನ ಸೌಹಾರ್ದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ ಕಾಪು ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲ್ಪನೆಯ ಕತೆಗಳು ಹೇಗೆ ಸಾಹಿತ್ಯವಾಗುತ್ತವೆಯೋ ಅಂತೆಯೇ ಜಾನಪದ ವೀರರ ನಡೆದು ಹೋದ ಘಟನೆಗಳು ಮತ್ತು ಅದರ ವಿವರಗಳು ಕೂಡಾ ಸುಂದರ ಕಥಾನಕಗಳೇ ಆಗುತ್ತವೆ. ಅವುಗಳನ್ನು ಕನ್ನಡದಲ್ಲಿ ಬರೆಯುವ ಕೆಲಸವಾದರೆ ಸಾಹಿತ್ಯ ಕ್ಷೇತ್ರವು ಮತ್ತಷ್ಟು ಬಲಗೊಳ್ಳುತ್ತದೆ. ಈ ಸಾಹಿತ್ಯಗಳ ಓದಿನಿಂದ ಯುವ ಸಾಹಿತಿಗಳು ಇನ್ನಷ್ಟು ವೈಚಾರಿಕವಾಗಿ ಆಲೋಚಿಸಿ, ಪ್ರಾಚೀನ – ಅರ್ವಾಚೀನ ಮೌಲ್ಯಗಳನ್ನು ಸಮೀಕರಿಸಿಕೊಂಡು, ತೌಲನಿಕವಾಗಿ ಅರ್ಥೈಸಿಕೊಂಡು ಸಾಹಿತ್ಯ ಸೃಷ್ಟಿಸಬಲ್ಲರು ಎಂದರು.

Advertisement

ಕಾಪು ತಾಲೂಕಿಗೆ ಸಂಬಂಧಪಟ್ಟು ಸಾಹಿತ್ಯದ ಜೊತೆಗೆ ಅನುಸಂಧಾನ ಮಾಡಿಕೊಂಡಿರುವ ಕನ್ನಡವನ್ನು ಅವಲಂಭಿಸಿರುವ ಸಂಸ್ಕೃತ, ತುಳು, ಕೊಂಕಣಿ, ಸಾಹಿತ್ಯ ಮತ್ತು ಸಾಹಿತಿ, ಮೌಖೀಕ ಸಾಹಿತ್ಯಗಳೂ, ಯಕ್ಷಗಾನ-ಆಶು ವೈಭವ, ನಾಟಕ-ಹಾಸ್ಯ, ಬೆಮೇರ್‌-ನಾಗಾರಾಧನೆ-ಬೂತಾರಾಧನೆ, ಐತಿಹಾಸಿಕ ದಾಖಲೆಗಳು, ದೇವಾಲಯ ಸಂಸ್ಕೃತಿ, ಪತ್ರಕರ್ತರು, ಆಕಾಶವಾಣಿ ಭಾಷಣ-ಚಿಂತನ, ಸಾಹಿತ್ಯ ಸೇವೆ ಮೊದಲಾದ ವಿಚಾರಗಳ ಕುರಿತಾಗಿ ಮಾತನಾಡಿದರು.

ಕನ್ನಡದ ಕುರಿತಾಗಿ ಜಾಗೃತಿ ನಡೆಸೋಣ : ಲಾಲಾಜಿ ಆರ್‌. ಮೆಂಡನ್‌
ಸಮ್ಮೇಳನವನ್ನು ಉದ್ಘಾಟಿಸಿದ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ರಾಜ್ಯ ರಾಜಧಾನಿಯಲ್ಲೇ ಕನ್ನಡದ ಜೊತೆಗೆ ಇತರ ಭಾಷಿಗರ ಪ್ರಾಬಲ್ಯ ಹೆಚ್ಚಾಗುತ್ತಿದೆ. ಜನರು ಕೂಡಾ ಇಂದಿನ ಅನಿವಾರ್ಯತೆಗೆ ತಕ್ಕಂತೆ ಬದಲಾಗುತ್ತಿದ್ದಾರೆ. ಈ ಕಾರಣದಿಂದಾಗಿ ಕನ್ನಡದ ಕುರಿತಾಗಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಬೇಕಿದೆ. ಇಂದಿನ ಬೆಳವಣಿಗೆಗೆ ಪೂರಕವಾಗಿ ಕನ್ನಡವನ್ನು ಉಳಿಸಿಕೊಂಡು, ಇತರ ಭಾಷೆಗಳನ್ನೂ ಪೋಷಿಸುವುದು ಕೂಡಾ ಅತ್ಯಗತ್ಯವಾಗಿದೆ ಎಂದರು.

ಕನ್ನಡದ ಮನಸ್ಸುಗಳನ್ನು ಜಾಗೃತಗೊಳಿಸೋಣ : ಕಾಣಿಯೂರು ಶ್ರೀ
ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ಕನ್ನಡ ಭಾಷೆಯನ್ನು ನಮ್ಮ ಭಾಷೆ ಎಂಬ ಮಮತೆಯಿಟ್ಟು ಪೋಷಿಸಬೇಕಿದ್ದು, ನಮ್ಮ ಭಾಷೆ ಎಂದು ಅರಿತುಕೊಂಡಾಗ ಮಾತ್ರಾ ಅದರ ಬಗ್ಗೆ ಕಾಳಜಿ, ಪ್ರೀತಿ ಹುಟ್ಟಲು ಸಾಧ್ಯ. ಇಂದಿನ ಮಕ್ಕಳಲ್ಲಿ ಕನ್ನಡದ ಕುರಿತಾದ ಅಭಿರುಚಿಯನ್ನು ಹುಟ್ಟಿಸುವ ಮತ್ತು ಅದಕ್ಕೆ ಅನುಗುಣವಾಗಿ ಅವರನ್ನು ಬೆಳೆಸುವ ಮೂಲಕ ಕನ್ನಡದ ಮನಸ್ಸುಗಳನ್ನು ಜಾಗೃತಗೊಳಿಸುವ ಪ್ರಯತ್ನವನ್ನು ನಡೆಸಬಹುದಾಗಿದೆ ಎಂದರು.

ಸಾಹಿತ್ಯಾಸಕ್ತರನ್ನು ಬೆಳೆಸಲು ಸಮ್ಮೇಳನ ಸಹಕಾರಿ : ವಂ| ಕ್ಲೆಮೆಂಟ್‌ ಮಸ್ಕರೇನಸ್‌
ಸಮ್ಮೇಳನದ ಗೌರವಾಧ್ಯಕ್ಷ / ಮೂಡುಬೆಳ್ಳೆ ಚರ್ಚ್‌ನ ಧರ್ಮಗುರು ಅತೀ ವಂ| ಕ್ಲೆಮೆಂಟ್‌ ಮಸ್ಕರೇನಸ್‌ ಮಾತನಾಡಿ, ಸಂತ ಲಾರೆನ್ಸರ ಪುಣ್ಯ ಮಣ್ಣಿನಲ್ಲಿ ಕನ್ನಡದ ಜಾತ್ರೆ ನಡೆಯುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಸಾಹಿತ್ಯದ ಕುರಿತಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಅವರನ್ನು ಸಾಹಿತ್ಯಾಸಕ್ತರನ್ನಾಗಿ ಬೆಳೆಸುವಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಸಹಕಾರಿಯಾಗಲಿದೆ ಎಂದರು.

ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷ ಮುದ್ದು ಮೂಡುಬೆಳ್ಳೆ ಅವರು ಸಮ್ಮೇಳನಾಧ್ಯಕ್ಷ ಕೆ.ಎಲ್‌. ಕುಂಡಂತಾಯ ಅವರಿಗೆ ಧ್ವಜ ಹಸ್ತಾಂತರಿಸಿದರು. ಕಸಾಪ ಪೂರ್ವ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆಗೊಳಿಸಿದರು. ಉಡುಪಿ ಜಿ.ಪಂ. ಸದಸ್ಯ ವಿಲ್ಸನ್‌ ರೋಡ್ರಿಗಸ್‌ ಕಾಪು ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಕುರಿತಾಗಿ ಹೊರತರಲಾದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಗೊಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಬೆಳ್ಳೆ ಗ್ರಾ.ಪಂ ಅಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ ರಾಷ್ಟ್ರ ಧ್ವಜಾರೋಹಣಗೈದರು. ಕಾಪು ತಾಲೂಕು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ ಸಾಹಿತ್ಯ ಪರಿಷತ್‌ನ ಧ್ವಜಾರೋಹಣ ನೆರವೇರಿಸಿದರು.

ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿ.ಪಂ ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ.ಪಂ. ಸದಸ್ಯೆ ಸುಜಾತಾ ಸುವರ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್‌, ಬೆಳ್ಳೆ ಸಿ.ಎ. ಬ್ಯಾಂಕ್‌ ಅಧ್ಯಕ್ಷ ಶಿವಾಜಿ ಎಸ್‌. ಸುವರ್ಣ ಬೆಳ್ಳೆ, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಮೊಕ್ತೇಸರ ಶಶಿಧರ ವಾಗ್ಲೆ, ಶಿರ್ವ ಎಸೈ ಅಬ್ದುಲ್‌ ಖಾದರ್‌, ಮೆಸ್ಕಾಂ ಹಿರಿಯ ಅಧಿಕಾರಿ ಮಾರ್ತಾಂಡಪ್ಪ, ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ, ಕಸಾಪ ಬ್ರಹ್ಮಾವರ ಅಧ್ಯಕ್ಷ ನಾರಾಯಣ ಮಡಿ, ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಬಾಕರ ಶೆಟ್ಟಿ, ಭಾರತ ಸೇವಾದಳದ ಸಂಘಟಕ ಪಕೀರ ಗೌಡ ಉಪಸ್ಥಿತರಿದ್ದರು.

ಕಾಪು ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ ಹೆಬ್ಟಾರ್‌ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶ್ವಿ‌ನ್‌ ಲಾರೆನ್ಸ್‌ ಮೂಡುಬೆಳ್ಳೆ ವಂದಿಸಿದರು. ಉಪನ್ಯಾಸಕ ಎಡ್ವರ್ಡ್‌ ಲಾರ್ಸನ್‌ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಗೌ| ಕಾರ್ಯದರ್ಶಿಗಳಾದ ವಿದ್ಯಾಧರ ಪುರಾಣಿಕ್‌, ವಿದ್ಯಾ ಅಮ್ಮಣ್ಣಾಯ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next