Advertisement

ಕಾಪು ತಾಲೂಕಿನಾದ್ಯಂತ ಮಳೆ ರೌದ್ರಾವತಾರ

06:00 AM Jul 08, 2018 | Team Udayavani |

ಕಾಪು: ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಕಾಪು ತಾಲೂಕು ಸ್ತಬ್ಧಗೊಂಡಿದೆ. ತಾಲೂಕಿನ ವಿವಿಧೆಡೆ ನೆರೆ ಹಾವಳಿ ತೀವ್ರಗೊಂಡಿದ್ದು, ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದರೊಂದಿಗೆ ಕಾಪು ಸರಕಾರಿ ಶಾಲೆಯಲ್ಲಿ ವಿಶೇಷ ಗಂಜಿ ಕೇಂದ್ರ ತೆರೆಯಲಾಗಿದೆ.

Advertisement

ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರು, ಮೂಳೂರು, ಉಳಿಯಾರಗೋಳಿ ಮತ್ತು ಕಾಪು ಸಹಿತ ಮಜೂರು, ಎಲ್ಲೂರು, ಬೆಳಪು, ಕುತ್ಯಾರು, ಕಳತ್ತೂರು, ಬಡಾ, ಕೈಪುಂಜಾಲು, ಪಾಂಗಾಳ, ಇನ್ನಂಜೆ, ಮಣಿಪುರ, ಕಟಪಾಡಿ, ಕೋಟೆ, ಮಟ್ಟು, ಉದ್ಯಾವರದಲ್ಲಿ ತಗ್ಗು ಪ್ರದೇಶಗಳಲ್ಲಿ ನೆರೆ ನೀರು ಬಂದಿದ್ದು ನೂರಾರು ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.  ಮಲ್ಲಾರು ರಾಯರ ತೋಟದ ಒಂದೇ ಖಾಸಗಿ ಲೇಔಟ್‌ನ 25ಕ್ಕೂ ಅಧಿಕ ಮನೆಗಳ ಜನರನ್ನು ಬೋಟ್‌ಗಳ ಮೂಲಕ ಸ್ಥಳಾಂತರಿಸಲಾಗಿದೆ. 

50ಕ್ಕೂ ಅಧಿಕ ಕುಟುಂಬಗಳ ಸ್ಥಳಾಂತರ 
ಪುರಸಭೆ ವ್ಯಾಪ್ತಿಯ ಉಳಿಯಾರಗೋಳಿ, ಪಾಂಗಾಳ, ಕೈಪುಂಜಾಲು, ಮಲ್ಲಾರು ರಾಯರ ತೋಟ, ಕುಡ್ತಿಮಾರು, ಕೊಂಬಗುಡ್ಡೆ, ಕೋಟೆ ರೋಡ್‌, ಅಚ್ಚಾಲು, ಮಿಷನ್‌ ಕಾಂಪೌಂಡ್‌, ಕಾಪು ಪಡುಗ್ರಾಮ, ಸುಬ್ಬಯ್ಯ ತೋಟ ಮತ್ತು ಕಲ್ಯ ಪರಿಸರದ ಸುಮಾರು 50ಕ್ಕೂ ಅಧಿಕ ಮನೆಗಳ ಜನರನ್ನು ದೋಣಿಗಳ ಮೂಲಕ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಜಿಲ್ಲಾಧಿಕಾರಿ, ಶಾಸಕರ ಭೇಟಿ
ಮಳೆ ಅನಾಹುತ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌, ಜಿ.ಪಂ. ಸದಸ್ಯೆ ಶಿಲ್ಪಾ ಸುವರ್ಣ, ಪುರಸಭೆ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಕೆ.ಎಚ್‌. ಉಸ್ಮಾನ್‌, ವಿಪಕ್ಷ ನಾಯಕ ಅರುಣ್‌ ಶೆಟ್ಟಿ  ಪಾದೂರು, ಗ್ರಾ.ಪಂ. ಅಧ್ಯಕ್ಷರಾದ ಸಂದೀಪ್‌ ರಾವ್‌ ಮಜೂರು, ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು, ವಸಂತಿ ಶೆಟ್ಟಿ ಎಲ್ಲೂರು, ರೇಖಾ ಅನಿಲ್‌ ಇನ್ನಂಜೆ, ಮಾಲಿನಿ ಶೆಟ್ಟಿ ಮೊದಲಾದವರು ಪರಿಹಾರ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.

ನೂರಾರು ಮಂದಿಯ ರಕ್ಷಣೆ 
ಮಜೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ತಮ್ಮನ್‌ ತೋಟದಲ್ಲಿ 34 ಮಂದಿ ಮತ್ತು ಮಜೂರು ಗ್ರಾಮದ 17 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಬೆಳಪು, ಕ‌ರಂದಾಡಿ, ಚಂದ್ರನಗರ, ಜಲಂಚಾರು, ಪಾಂಗಾಳ, ಇನ್ನಂಜೆ ಮತ್ತು ಕಳತ್ತೂರು ವ್ಯಾಪ್ತಿಯಲ್ಲೂ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸ್‌ ಸಿಬಂದಿ, ಅಗ್ನಿಶಾಮಕ ಸಿಬಂದಿ, ಗೃಹರಕ್ಷಕ ದಳದ ಸಿಬಂದಿ, ಈಜುಗಾರರು, ಸ್ಥಳೀಯ ಮೀನುಗಾರರು ಮತ್ತು ಜನಪ್ರತಿನಿಧಿಗಳ ತಂಡ ವಿವಿಧೆಡೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next