Advertisement

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

12:04 AM Mar 28, 2024 | Team Udayavani |

ಕಾಪು: ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಕಾಲಾವಧಿ ಸುಗ್ಗಿ ಮಾರಿಪೂಜೆ ಬುಧವಾರ ಸಂಜೆ ಸಮಾಪನಗೊಂಡಿತು.

Advertisement

ತುಳುನಾಡಿನ ಸಪ್ತ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಾಪು ಸುಗ್ಗಿ ಮಾರಿಪೂಜೆ ಜಾತ್ರೆಯಲ್ಲಿ ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ 2 ಲಕ್ಷಕ್ಕೂ ಮಿಕ್ಕಿದ ಭಕ್ತರು ಪಾಲ್ಗೊಂಡಿದ್ದರು.

ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೇ ಶಿವ ಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕಾಸರಗೋಡು, ಮಹಾರಾಷ್ಟ್ರ, ಬೆಂಗಳೂರು ಸಹಿತ ದೇಶ-ವಿದೇಶ ಗಳಿಂದ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದ‌ು ವಿವಿಧ ಹರಕೆ – ಸೇವೆಗಳನ್ನು ಸಮರ್ಪಿಸಿದರು.

2 ಲಕ್ಷಕ್ಕೂ ಅಧಿಕ ಕೋಳಿ ಮಾರಾಟ
3 ಮಾರಿಗುಡಿಗಳ ಸುತ್ತಮುತ್ತ ಹಾಗೂ ಪೇಟೆಯ ವಿವಿಧೆಡೆ ಮತ್ತು ಹೆದ್ದಾರಿ ಬದಿಯಲ್ಲಿ ನೂರಾರು ಸಂತೆ ಅಂಗಡಿಗಳು, ಮಳಿಗೆಗೆಗಳು ತೆರೆದಿದ್ದು ಹಣ್ಣು ಕಾಯಿ, ಹೂವು, ಕುರಿ, ಆಡು ಮತ್ತು ಕೋಳಿ ಮಾರಾಟ ಸ್ಟಾಲ್‌ಗ‌ಳಲ್ಲಿ ಭರ್ಜರಿ ವ್ಯಾಪಾರ ನಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕೋಳಿ ದರ ಏರಿಕೆಯಾಗಿದ್ದರೂ ಕೋಳಿಗೆ ಭಾರೀ ಬೇಡಿಕೆ ಇತ್ತು. 75ಕ್ಕೂ ಹೆಚ್ಚಿನ ಕೋಳಿ ಅಂಗಡಿಗಳನ್ನು ತೆರೆಯಲಾಗಿದ್ದು ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆಯವರೆಗೆ 2 ಲಕ್ಷಕ್ಕೂ ಅಧಿಕ ಕೋಳಿಗಳು ಮಾರಾಟವಾಗಿವೆ ಎಂದು ಮೂಲಗಳು ತಿಳಿಸಿವೆ.

ಹೂ, ಹಣ್ಣುಕಾಯಿಗೆ ಬೇಡಿಕೆ
ಗದ್ದುಗೆಯೇ ಪ್ರಧಾನವಾಗಿರುವ ಮೂರೂ ಮಾರಿಗುಡಿಗಳಲ್ಲಿ ಗದ್ದುಗೆ ಪೂಜೆ ವಿಶೇಷ ಸೇವೆಯಾಗಿದ್ದು 50 ಸಾವಿರಕ್ಕೂ ಅಧಿಕ ಗದ್ದಿಗೆ ಪೂಜೆ ಸೇವೆಯನ್ನು ಭಕ್ತರು ಸಮರ್ಪಿಸಿದ್ದಾರೆ. ಜತೆಗೆ ಕುಂಕುಮಾರ್ಚನೆ ಸೇವೆ, ಹೂವಿನ ಪೂಜೆ ಸೇವೆಗಳನ್ನೂ ಸಮರ್ಪಿಸಿದ್ದಾರೆ. ಸಾವಿರಾರು ಸಂಖ್ಯೆಯ ಹಣ್ಣು ಕಾಯಿಗಳು ಬುಧವಾರ ಮಧ್ಯಾಹ್ನದೊಳಗೆ ಖಾಲಿಯಾಗಿದ್ದು 2 ಸಾವಿರಕ್ಕೂ ಅಧಿಕ ಅಟ್ಟೆ ಮಲ್ಲಿಗೆ ಹೂವು ಮಾರಾಟವಾಗಿದೆ.

Advertisement

ಭಕ್ತರಿಂದ ಶ್ಲಾಘನೆ
ಮೂರು ಮಾರಿಗುಡಿಗಳಲ್ಲಿಯೂ ಸ್ವಯಂ ಸೇವಕರ ಸೇವೆಯಿಂದ ಭಕ್ತರು ತೊಂದರೆಯಿಲ್ಲದೇ ದೇವರ ದರ್ಶನ ಪಡೆಯುವಂತಾಯಿತು. ವಿವಿಧೆಡೆ ಸಿಸಿ ಕೆಮರಾ ಕಣ್ಗಾವಲನ್ನು ಹಾಕಲಾಗಿದ್ದು ಟ್ರಾಫಿಕ್‌ ಮತ್ತು ಜನಸಂದಣಿಯ ನಿಯಂತ್ರಣಕ್ಕಾಗಿ ಚೆಕ್‌ ಪೋಸ್ಟ್‌ಗಳನ್ನು ಹಾಕಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಕಾಪು ಪೌರಕಾರ್ಮಿಕರು ಸ್ವತ್ಛತೆಗಾಗಿ ನಿರಂತರವಾಗಿ ಶ್ರಮಿಸಿದ್ದು ಸಾರ್ವಜನಿಕರಿಂದ ಮತ್ತು ವ್ಯಾಪಾರಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next