Advertisement

Kaup- ಶಿರ್ವ ಮುಖ್ಯರಸ್ತೆ; ರಸ್ತೆಯಲ್ಲಿರುವ ಹೈಟೆನ್ಶನ್‌ ವಿದ್ಯುತ್‌ ಕಂಬಗಳು:ಅಪಾಯದ ಕರೆಗಂಟೆ

09:20 AM Mar 14, 2024 | Team Udayavani |

ಶಿರ್ವ: ಕಾಪು-ಶಿರ್ವ ಮುಖ್ಯ ರಸ್ತೆ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 5ಕೋ. 75 ಲ. ರೂ. ಅನುದಾನ ಮಂಜೂರಾಗಿದ್ದು, ಕಳತ್ತೂರು ಮಿಲ್‌ಬಳಿಯ ಶೆಟ್ಟಿಗಾರ್‌ ಕಂಪೌಂಡ್‌ನಿಂದ ಶಾಂತಿಗುಡ್ಡೆಗಾಗಿ ಶಿರ್ವ ಮುಖ್ಯ ರಸ್ತೆವರೆಗಿನ ಸುಮಾರು 3 ಕಿ.ಮೀ. ರಸ್ತೆ ವಿಸ್ತರಣೆಗೊಂಡಿದೆ.

Advertisement

ಆದರೆ ಅಪಾಯಕಾರಿ ಹೈಟೆನ್ಶನ್‌ ವಿದ್ಯುತ್‌ ಕಂಬಗಳು ರಸ್ತೆಯಲ್ಲಿಯೇ ಉಳಿದುಕೊಂಡಿದ್ದು ಅಪಾಯದ ಭೀತಿ ಎದುರಾಗಿದೆ. ರಸ್ತೆ ಕಾಮಗಾರಿ ಮುಗಿದರೂ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷದಿಂದಾಗಿ ತುಕ್ಕು ಹಿಡಿದ ಅಪಾಯಕಾರಿ ಕಂಬಗಳನ್ನು ತೆರವುಗೊಳಿಸಲಾಗಿಲ್ಲ. ಅಪಾಯಕಾರಿ ಹೈಟೆನ್ಶನ್‌ವಿದ್ಯುತ್‌ ಕಂಬಗಳು ರಸ್ತೆಯಲ್ಲಿದ್ದರೂ ತೆರವುಗೊಳಿಸದೇ ತರಾತುರಿಯಲ್ಲಿ ಗುತ್ತಿಗೆದಾರರು ಡಾಮರೀಕರಣ ನಡೆಸಿದ್ದಾರೆ.

ಕಾಪು-ಶಿರ್ವ ಮುಖ್ಯರಸ್ತೆಯ ಸಂತ ಮೇರಿ ಕಾಲೇಜಿನ ಹಿಂಭಾಗದ ರಸ್ತೆಯಲ್ಲಿ ಮತ್ತು ಪ.ಪೂ.ಕಾಲೇಜಿನ ಹಿಂಭಾಗದ ವಾಣಿಜ್ಯ ಸಂಕೀರ್ಣವೊಂದರ ಮುಂಭಾಗದಲ್ಲಿ ಬುಡದಲ್ಲಿ ತುಕ್ಕು ಹಿಡಿದ ಕಂಬಗಳು ರಸ್ತೆಯಲ್ಲಿವೆ. ವಾಹನ ನಿಬಿಡತೆಯಿರುವ ಈ ರಸ್ತೆಯಲ್ಲಿ ಶಾಲಾ ವಾಹನಗಳ ಸಹಿತ ಸಾವಿರಾರು ಲಘು, ಘನ ಮತ್ತು ದ್ವಿಚಕ್ರ ವಾಹನಗಳು ಚಲಿಸುತ್ತಿದ್ದು, ವಾಹನ ಸವಾರರಿಗೆ ತೊಂದರೆಯಾಗಿದೆ.

ಅಪಾಯಕಾರಿ ವಿದ್ಯುತ್‌ ಕಂಬಗಳು

Advertisement

ತುಕ್ಕು ಹಿಡಿದ ಕಬ್ಬಿಣದ ಅಪಾಯಕಾರಿ ವಿದ್ಯುತ್‌ ಕಂಬಗಳು ರಸ್ತೆಯಲ್ಲಿದ್ದರೂ ಇಲಾಖೆ ಪ್ರಯಾಣಿಕರ / ವಾಹನ ಸವಾರರ ಸುರಕ್ಷತೆಗಾಗಿ ಯಾವುದೇ ಮುಂಜಾಗ್ರತೆ ವಹಿಸದೆ ನಿರ್ಲಕ್ಷ ವಹಿಸಿದೆ. ಅಪಾಯದ ಬಗ್ಗೆ ಬ್ಯಾರಿಕೇಡ್‌ ಅಥವಾ ಯಾವುದೇ ಮುಂಜಾಗ್ರತಾ ಫಲಕಗಳನ್ನು ಅಳವಡಿಸದೇ ಇರುವುದರಿಂದ ರಾತ್ರಿ ವೇಳೆಯಲ್ಲಿ ಚಲಿಸುವ ವಾಹನಗಳು ಯಾವುದೇ ಕ್ಷಣದಲ್ಲಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮೆಸ್ಕಾಂಗೆ ಅರ್ಜಿಸಲ್ಲಿಸಿ ಕಂಬಗಳನ್ನು ಸ್ಥಳಾಂತರಿಸದೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಸಿರುವುದರಿಂದಾಗಿ ಸಮಸ್ಯೆಯಾಗಿದೆ.

ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ಅವರು ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಮಾ. 4ರಂದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಂಬಂಧ ಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಿ, ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಂಡು ನಾಗರಿಕರ/ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

ರಸ್ತೆ ಡಾಮರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಂಡಿಲ್ಲ. ಈಗಾಗಲೇ ಮೆಸ್ಕಾಂಗೆ ವಿದ್ಯುತ್‌ ಕಂಬ ತೆರವುಗೊಳಿಸಲು ಮನವಿ ಮಾಡಲಾಗಿದ್ದು, ಕಂಬಗಳು ಸ್ಥಳಾಂತರಗೊಂಡ ಕೂಡಲೇ ರಸ್ತೆಯನ್ನು ಪೂರ್ಣಗೊಳಿಸಲಾಗುವುದು.ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. –  ಸುಧೀರ್‌, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌, ಸಬ್‌ ಡಿವಿಜನ್‌ ಉಡುಪಿ.

ವಿದ್ಯುತ್‌ ಕಂಬ ಸ್ಥಳಾಂತರಕ್ಕೆ ಲೋಕೋಪಯೋಗಿ ಇಲಾಖೆ ಅರ್ಜಿ ಸಲ್ಲಿಸಿದಲ್ಲಿ ಎಸ್ಟಿಮೇಟ್‌ ಮಾಡಿಕೊಟ್ಟ ಬಳಿಕ ಕಂಬ ಸ್ಥಳಾಂತರಿಸಬೇಕು. ಕಂಬ ಸ್ಥಳಾಂತರಗೊಂಡ ಬಳಿವೇ ಇಲಾಖೆ/ಗುತ್ತಿಗೆದಾರರು ರಸ್ತೆ ಡಾಮರೀಕರಣಗೊಳಿಸಬೇಕಿದೆ. ಕಂಬ ಸ್ಥಳಾಂತರಿಸಲು ಇಲಾಖೆ ಕೂಡಲೇ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. –ಸುಶಾನ್‌, ಸಹಾಯಕ ಅಭಿಯಂತರರು, ಮೆಸ್ಕಾಂ ಕಾಪು.

ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next