ಕಾಪು: ಪಾದೂರು ಐಎಸ್ ಪಿಆರ್ ಎಲ್ ಸ್ಥಾವರದ ಒಳಗೆ ಜಲ್ಲಿ ಕ್ರಷರ್ ನಿರ್ಮಾಣ ವಿರೋಧಿಸಿ ಮಜೂರು ಗ್ರಾಮ ಪಂಚಾಯತ್ ವತಿಯಿಂದ ನಿರ್ಣಯ ಕೈಗೊಳ್ಳಲಾಯಿತು.
ಜಲಂಚಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಅಭಿಪ್ರಾಯದಂತೆ ನಿರ್ಣಯ ಕೈಗೊಳ್ಳಲಾಯಿತು.
ಯಾವುದೇ ಕಾರಣಕ್ಕೂ ಪಾದೂರಿನಲ್ಲಿ ಜಲ್ಲಿ ಕ್ರಷರ್ ನಿರ್ಮಾಣವಾಗಬಾರದು. ಇದರಿಂದ ಪರಿಸರ ಮತ್ತು ಆರೋಗ್ಯಕ್ಕೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಜಲ್ಲಿ ಕ್ರಷರ್ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಜನ ಜಾಗೃತಿ ಸಮಿತಿಯ ನೇತೃತ್ವದಲ್ಲಿ ನ್ಯಾಯಾಲಯದ ಮೊರೆ ಹೋಗುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಕ್ಷೇತ್ರದಲ್ಲಿ ಯಾವುದೇ ಜನ ವಿರೋಧಿ ಯೋಜನೆಗೆ ಅವಕಾಶ ನೀಡುವುದಿಲ್ಲ. ಯೋಜನೆಯ ವಿರುದ್ಧ ಜನರ ಹೋರಾಟದಲ್ಲಿ ಜತೆಗಿರುತ್ತೇನೆ ಎಂದು ಭರವಸೆ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅಶ್ವಿನಿ ಮಾತನಾಡಿ, ಬೆಂಗಳೂರಿನ ಲಕ್ಷ್ಮೀ ಟ್ರಾವೆಲ್ಸ್ ಕಂಪನಿಯು ಕ್ರಶರ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನವಾಗಲಿದೆ. ಸ್ಥಳೀಯರ ವಿರೋಧದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರಸಾದ್ ಶೆಟ್ಟಿ ವಳದೂರು ಅಧ್ಯಕ್ಷತೆ ವಹಿಸಿದ್ದರು. ಗ್ರಾಮಸ್ಥರಾದ ರಿಚರ್ಡ್ ಕೋರ್ಡ, ರವಿರಾಜ ಶೆಟ್ಟಿ, ರವೀಂದ್ರ ಶೆಟ್ಟಿ, ಶಂಕರ್ ಶೆಟ್ಟಿಗಾರ್, ಕೃಷ್ಣ ರಾವ್, ನಾರಾಯಣ ತಂತ್ರಿ, ಜಯಲಕ್ಷ್ಮೀ ಆಳ್ವ, ಪ್ರಸನ್ನ ಭಟ್, ಗುರುರಾಜ ಐತಾಳ್ ಮೊದಲಾದವರು ಅಭಿಪ್ರಾಯ ಸೂಚಿಸಿದರು.
ನೋಡೆಲ್ ಅಧಿಕಾರಿ ಅರುಣ್ ಹೆಗ್ಡೆ, ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಅಭಿವೃದ್ಧಿ ಅಧಿಕಾರಿ ವಿಲಾಸಿನಿ, ಗ್ರಾಮ ಆಡಳಿತಾಧಿಕಾರಿ ಶ್ರೀಕಾಂತ್, ಎಎಸ್ಸೈ ನಾರಾಯಣ್ ಉಪಸ್ಥಿತರಿದ್ದರು.