ಕಾಪು: ಬೆಳಪು ಗ್ರಾಮದ ಪಣಿಯೂರಿನಲ್ಲಿರುವ ಪಡುಬಿದ್ರಿ ರೈಲು ನಿಲ್ದಾಣ ರಸ್ತೆ ಮೇಲಿನ ಸಂಚಾರ ಜೀವಕ್ಕೆ ಸಂಚಕಾರ ಉಂಟು ಮಾಡುತ್ತಿದೆ. ಉಚ್ಚಿಲ – ಪಣಿಯೂರು ರಸ್ತೆಯಿಂದ ಕುಂಜೂರು ರೈಲ್ವೇ ಬ್ರಿಡ್ಜ್ ಮತ್ತು ರಾ. ಹೆ. 66ರಿಂದ ಮೂಳೂರು – ಬೆಳಪು
ರಸ್ತೆಯಲ್ಲಿ ಬಂದರೆ ಪಡುಬಿದ್ರಿ ರೈಲು ನಿಲ್ದಾಣ ತಲುಪಬಹುದಾಗಿದೆ. ಆದರೆ ಎರಡೂ ರಸ್ತೆಗಳ ಸ್ಥಿತಿ ಬಹುತೇಕ ಒಂದೇ ಆಗಿದೆ.
ಕುಂಜೂರು ರೈಲ್ವೇ ಬ್ರಿಡ್ಜ್ ಬಳಿಯಿಂದ ರೈಲ್ವೇ ನಿಲ್ದಾಣದ ತಲುಪುವಲ್ಲಿನವರೆಗಿನ 1 ಕಿ.ಮೀ. ಉದ್ದದ ರಸ್ತೆ ತುಂಬಾ ಹೊಂಡ
ಬಿದ್ದಿದ್ದು, ಇಕ್ಕೆಲಗಳಲ್ಲಿ ಅಲ್ಲಲ್ಲಿ ಎಸೆದು ಹೋಗಿರುವ ತ್ಯಾಜ್ಯದ ರಾಶಿ ದುರ್ನಾತ ಬೀರುತ್ತಿದೆ. ಇನ್ನು ರಾ. ಹೆ. 66ರ ಮೂಳೂರಿ
ನಿಂದ ಬೆಳಪುವಿಗೆ ಬರುವ ಬೆಳಪುಗುತ್ತು ವರೆಗಿನ ರಸ್ತೆಯಲ್ಲಿ 300 ಮೀ. ಮತ್ತು ಬೆಳಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜು
ಬಳಿಯಿಂದ ರೈಲು ನಿಲ್ದಾಣದವರೆಗಿನ 300 ಮೀ. ಉದ್ದದ ರಸ್ತೆ ಈವರೆಗೂ ಡಾಮರು ಕಂಡಿಲ್ಲ. ಬೈಳಪು ರೈಲ್ವೇ ಬ್ರಿಡ್ಜ್ ಮೇಲಂತೂ ಸರಳುಗಳು ಮೇಲೆದ್ದು ವರ್ಷ ಕಳೆದರೂ ಅದಿನ್ನೂ ದುರಸ್ತಿಯಾಗದೆ ಹಾಗೆಯೇ ಉಳಿದಿದೆ.
ಪಡುಬಿದ್ರಿ ರೈಲು ನಿಲ್ದಾಣ ರಸ್ತೆ ಕೇವಲ ರೈಲು ಪ್ರಯಾಣಿಕರ ಬಳಕೆಗೆ ಮಾತ್ರ ಸೀಮಿತವಾಗಿಲ್ಲ. ರೈಲು ನಿಲ್ದಾಣ ಆಸುಪಾಸಿನ ಹತ್ತಾರು ಕೃಷಿಕಕುಟುಂಬ, ಕಾರಣಿಕದ ದೈವಸ್ಥಾನ, ನಾಗ ಮೂಲಸ್ಥಾನಕ್ಕೆ ತೆರಳುವವರಿಗೂ ಈ ರಸ್ತೆಯೇ ಮೂಲಾಧಾರ. ಬೆಳಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಇಂಡಸ್ಟ್ರಿಯಲ್ ಏರಿಯಾ, ಸರಕಾರಿ ಕಾಲೇಜು, ಉರೂಸ್ ನಡೆಸುವ ಪುರಾಣ ಪ್ರಸಿದ್ಧ ದರ್ಗಾ
ಹೀಗೆ ಹತ್ತಾರು ಕಡೆಗಳಿಗೆ ಇಲ್ಲಿಂದಲೇ ತೆರಳಬೇಕಿದೆ. ರಿಕ್ಷಾ ಚಾಲಕರು ಇಲ್ಲಿಗೆ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಂದರೂ ಲೆಕ್ಕಕ್ಕಿಂತ ಹೆಚ್ಚು ಬಾಡಿಗೆ ಪಾವತಿಸಬೇಕಾಗಿದೆ. ಹಲವು ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮನವಿಗೆ ಸ್ಪಂದಿಸಿಲ್ಲ
ಈ ರಸ್ತೆ ರೈಲ್ವೇ ಇಲಾಖೆಗೆ ಸಂಬಂಧ ಪಟ್ಟಿದೆ. ರಸ್ತೆ ಗ್ರಾ.ಪಂ.ಗೆ ಬಿಟ್ಟು ಕೊಡುವಂತೆ ಅಥವಾ ದುರಸ್ತಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ರೈಲ್ವೇ ಇಲಾಖೆ ಈ ಬಗ್ಗೆ ಗಮನ ನೀಡಿಲ್ಲ. ಗ್ರಾಮದ ಬಹುತೇಕ ರಸ್ತೆ ಕಾಂಕ್ರೀಟ್ ಗೊಂಡಿದೆ. ರಸ್ತೆ ದುರಸ್ತಿ, ದಾರಿದೀಪ, ಸೋಲಾರ್ ದೀಪ ಅಳವಡಿಕೆ ಬಗ್ಗೆಯೂ ಮನವಿ ಸಲ್ಲಿಸಿದ್ದು ಸೂಕ್ತ ಸ್ಪಂದನೆ ದೊರಕಿಲ್ಲ. ಮುಂದೆ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಬೇಕಾದೀತು. *ದೇವಿಪ್ರಸಾದ್ ಶೆಟ್ಟಿ,ಅಧ್ಯಕ್ಷರು, ಬೆಳಪು ಗ್ರಾ. ಪಂರಸ್ತೆ ದುರಸ್ತಿಗೆ ಕ್ರಮ ಬೆಳಪು ರೈಲು ನಿಲ್ದಾಣಕ್ಕೆ ತೆರಳುವ ರಸ್ತೆ, ಬೆಳಪು ರೈಲ್ವೇ ಬ್ರಿಡ್ಜ್ ಮೇಲೆ ರಾಡ್ ಎದ್ದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿರುವ ವಿಚಾರವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಿ, ರಸ್ತೆ ದುರಸ್ತಿಗೆ ಕ್ರಮ ವಹಿಸಲಾಗುವುದು.
ಸುಧಾ ಕೃಷ್ಣಮೂರ್ತಿ,
ಸಾರ್ವಜನಿಕ ಸಂಪರ್ಕಾಧಿಕಾರಿ, ಕೊಂಕಣ ರೈಲ್ವೇ, ಮಂಗಳೂರು ವಿಭಾಗ
*ರಾಕೇಶ್ ಕುಂಜೂರು