Advertisement

Kaup: ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ

02:06 PM Jun 12, 2023 | Team Udayavani |

ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುತ್ತಿರುವ ಸುಮಾರು 35 ಕೋಟಿ ರೂ. ವೆಚ್ಚದ ಪ್ರಥಮ ಹಂತದ ಜೀರ್ಣೋದ್ಧಾರ ಯೋಜನೆಗಳಿಗೆ ಪೂರಕವಾಗಿ ದೇಗುಲದ ಪಕ್ಕದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಗುಡಿಯಲ್ಲಿ ಜೂ.12ರ ಸೋಮವಾರ ಶ್ರೀ ಮಾರಿಯಮ್ಮ ದೇವಿ ಮತ್ತು ಶ್ರೀ ಉಚ್ಚಂಗಿ ದೇವಿ ಸಾನಿಧ್ಯ ಪ್ರತಿಷ್ಠೆ ಹಾಗೂ ನಿರ್ಮಾಣ ಹಂತದ ಶಿಲಾಮಯ ಗರ್ಭಗುಡಿಯ ಮಹಾದ್ವಾರ ಸ್ಥಾಪನಾ ಪೂಜೆ ನಡೆಯಿತು.

Advertisement

ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿ ಮತ್ತು ವಿವಿಧ ಉಪಸಮಿತಿಗಳು ಹಾಗೂ ಎಲ್ಲಾ ಸಮಾಜಗಳ ಮುಖಂಡರ ಉಪಸ್ಥಿತಿಯಲ್ಲಿ ದೇಗುಲದ ತಂತ್ರಿಗಳಾದ ಜ್ಯೋರ್ತಿವಿದ್ವಾನ್ ಕೆ. ಪಿ. ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ, ಜ್ಯೋರ್ತಿವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ಮತ್ತು ಪ್ರಧಾನ ಅರ್ಚಕ ವೇ|ಮೂ| ಶ್ರೀನಿವಾಸ ತಂತ್ರಿ ಕಲ್ಯ ಅವರ ನೇತೃತ್ವದಲ್ಲಿ ಸಾನಿಧ್ಯ ಚಲನೆ ಮತ್ತು ಸಾನಿಧ್ಯ ಪ್ರತಿಷ್ಠೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಶಾಸ್ತ್ರೋಕ್ರವಾಗಿ ನಿರ್ಮಿಸಲಾದ ತಾತ್ಕಾಲಿಕ ಗರ್ಭಗುಡಿಯನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಡಾ| ಕೂರ್ಮಾ ರಾವ್ ಎಂ. ಮಾತನಾಡಿ, ಕಾಪು ಹೊಸ ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿರುವುದು ಜೀವಮಾನದಲ್ಲಿ ಶ್ರೇಷ್ಟ ಸೌಭಾಗ್ಯವಾಗಿದೆ. ದೇಶ ವಿದೇಶಗಳ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಮಾರಿಗುಡಿಯ ಅಭಿವೃದ್ಧಿ ಕಾರ್ಯಗಳು ಸಾಂಗವಾಗಿ ನೆರವೇರುವಂತಾಗಲಿ. ಸರಕಾರ ಮತ್ತು ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರ ನೀಡಲು ಬದ್ಧರಿದ್ದೇವೆ ಎಂದರು.

ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಎಂದರೆ ರಕ್ಷಣೆ ಎಂಬ ಅರ್ಥವಿದೆ. ಕಾಪು ಮಾರಿಯಮ್ಮನ ಸನ್ನಿಧಿಯು ಎಲ್ಲರನ್ನೂ ಕಾಯುವ ಶಕ್ತಿ ಕೇಂದ್ರವಾಗಿದೆ. ಇಲ್ಲಿನ ಜೀರ್ಣೋದ್ಧಾರದಲ್ಲಿ ಎಲ್ಲಾ ಸಮುದಾಯದವರೂ ತ್ರಿಕರಣಪೂರ್ವಕವಾಗಿ ತಮ್ಮ ಸೇವೆ ನೀಡುತ್ತಿರುವುದು ಶ್ಲಾಘನೀಯವಾಗಿದ್ದು, ಈ ಮಾದರಿಯ ಸೇವೆಯನ್ನು ಮಾರಿಯಮ್ಮ ಸ್ವರ್ಣ ಗದ್ದುಗೆಯಲ್ಲಿ ಪ್ರತಿಷ್ಟಾಪನೆಗೊಳ್ಳುವವರೆಗೂ ಮುಂದುವರಿಸೋಣ ಎಂದರು.

Advertisement

ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಮಾರಿಯಮ್ಮನ ಅಭಯ ವಾಕ್ಯದಂತೆ ಮತ್ತು ಪ್ರಶ್ನಾ ಚಿಂತನೆಯಲ್ಲಿ ತೋರಿ ಬಂದಂತೆ, ಪ್ರಾಜ್ನರ ಮಾರ್ಗದರ್ಶನ ಪಡೆದು ಮಾರಿಗುಡಿಯ ಮುಂಭಾಗದಲ್ಲಿ ತಾತ್ಕಲಿಕ ನೆಲೆಯಲ್ಲಿ ಮಾರಿಯಮ್ಮ ಹಾಗೂ ಉಚ್ಚಂಗಿ ದೇವಿಯ ಗುಡಿಯನ್ನು ಆಯ ಪ್ರಮಾಣಕ್ಕೆ ಅನುಗುಣವಾಗಿ ನಿರ್ಮಿಸಲಾಗಿದೆ. ನೂತನ ಶಿಲಾಮಯ ಮಾರಿಗುಡಿ ನಿರ್ಮಾಣವಾಗುವವರಗೆ ಮಾರಿಯಮ್ಮ ಹಾಗೂ ಉಚ್ಚಂಗಿ ದೇವಿಗೆ ಈ ತಾತ್ಕಾಲಿಕ ಗರ್ಭಗುಡಿಯಲ್ಲಿ ಜೂ.13ರ ಮಂಗಳವಾರದ ಪೂಜೆ, ನವರಾತ್ರಿ ಪೂಜೆ ಮತ್ತು ಕಾಲಾವಧಿ ಮಾರಿ ಪೂಜೆಯನ್ನು ನೆರವೇರಿಸಲಾಗುವುದು. ಮಾರಿಯಮ್ಮ ದೇವಿಯು ತಾತ್ಕಾಲಿಕ ಗುಡಿಯಲ್ಲಿ ನೆಲೆ ನಿಂತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಲಿದ್ದಾರೆ ಎಂದರು.

ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಅನಿಲ್ ಬಲ್ಲಾಳ್ ಬೀಡುಬದಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಮುಂಬೈ ಸಮಿತಿ ಕಾರ್ಯಾಧ್ಯಕ್ಷ ರವಿ ಸುಂದರ್ ಶೆಟ್ಟಿ, ಪುಣೆ ಸಮಿತಿ ಕಾರ್ಯಾಧ್ಯಕ್ಷ ಮಾಧವ ಶೆಟ್ಟಿ, ದಾನಿಗಳಾದ ಎನ್. ಬಿ. ಶೆಟ್ಟಿ ಮುಂಬಯಿ, ಪ್ರಭಾಕರ ಶೆಟ್ಟಿ ಮುಂಬಯಿ, ವಿವಿಧ ಸಮಾಜದ ಮುಖಂಡರಾದ ಡಾ| ಎಂ.ಬಿ. ಪುರಾಣಿಕ್, ಕೃಷ್ಣ ವಿ. ಶೆಟ್ಟಿ , ಬಿ. ಎನ್. ಶಂಕರ್ ಪೂಜಾರಿ, ಜಯ ಸಿ. ಕೋಟ್ಯಾನ್, ಧರ್ಮಪಾಲ ಯು. ದೇವಾಡಿಗ, ಗಂಗಾಧರ ಆಚಾರ್ಯ, ರಾಮದಾಸ್ ಶೆಟ್ಟಿಗಾರ್, ಗೋಕುಲ್ ದಾಸ್ ಬಾರ್ಕೂರು, ಜಯ ರಾಣ್ಯ, ಸೂರ್ಯ ಸಾಲಿಯಾನ್ ಮುಂಬ, ಪಾತ್ರಿಗಳಾದ ಗುರುಮೂರ್ತಿ, ಸಚಿನ್ ಪಾತ್ರಿ, ರಾಘು ರಾಣ್ಯ ಅತಿಥಿಗಳಾಗಿದ್ದರು.

ಮಾರಿಗುಡಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಗಂಗಾಧರ ಸುವರ್ಣ, ಮಾಧವ ಆರ್. ಪಾಲನ್, ದೇವಿಪ್ರಸಾದ್ ಶೆಟ್ಟಿ, ಮನೋಹರ್ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ್ ಅಮೀನ್, ಜಗದೀಶ್ ಬಂಗೇರ, ರವೀಂದ್ರ ಎಂ. ಬಾಬು ಮಲ್ಲಾರು, ರೇಣುಕಾ ದೇವಾಡಿಗ, ಶೈಲಜಾ ಪುರುಷೋತ್ತಮ್, ಮುಂಬಯಿ, ಪೂನಾ, ಬೆಂಗಳೂರು ಮತ್ತು ಅನಿವಾಸಿ ಭಾರತೀಯ ಸಮಿತಿಗಳ ಪ್ರತಿನಿಽಗಳು, ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ, ಉಪ ಸಮಿತಿ ಪದಾಽಕಾರಿಗಳು, ಗೌರವ ಸಲಹೆಗಾರರು, ಸಮಿತಿ ಸದಸ್ಯರು ಹಾಗೂ ಊರ-ಪರವೂರು ಭಗವದ್ಭಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next